ಹೆಚ್ಚು ಜನಸಂಖ್ಯೆಗೆ ಹೆಚ್ಚು ಹಕ್ಕು; ರಾಹುಲ್ ಗಾಂಧಿ ಹೇಳಿಕೆಗೆ ಅಭಿಷೇಕ್ ಸಿಂಘ್ವಿ ಆಕ್ಷೇಪ
ರಾಹುಲ್ ಗಾಂಧಿಯವರ ಹೇಳಿಕೆಯನ್ನು ಆಕ್ಷೇಪಿಸಿ ಟ್ವೀಟ್ ಮಾಡಿದ ಅಭಿಷೇಕ್ ಮನು ಸಿಂಘ್ವಿ ನಂತರ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಒತ್ತಡಕ್ಕೆ ಮಣಿದು ಅವರು ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ನವದೆಹಲಿ: ಬಿಹಾರದಲ್ಲಿ ಜಾತಿ ಆಧಾರಿತ ಜನಗಣತಿಯ ಫಲಿತಾಂಶದ ಬಳಿಕ ‘ಹೆಚ್ಚು ಜನಸಂಖ್ಯೆಯಿದ್ದರೆ ಹೆಚ್ಚು ಹಕ್ಕುಗಳು’ ಎಂಬ ರಾಹುಲ್ ಗಾಂಧಿಯ ಹೇಳಿಕೆ ಕುರಿತು ಚರ್ಚೆಗಳು ನಡೆಯುತ್ತಿದ್ದು, ಕಾಂಗ್ರೆಸ್‌ನಲ್ಲಿ ಒಡಕು ಉಂಟಾಗಿದೆ. ‘ಜಿತ್ನಿ ಅಬಾದಿ ಉತ್ನಾ ಹಕ್’ ಎಂಬ ಘೋಷಣೆಯನ್ನು ಬೆಂಬಲಿಸುವ ಜನರು ಅದರ ಪರಿಣಾಮಗಳನ್ನು ಮೊದಲು ಅರ್ಥಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ಇಂದು ಹೇಳಿದ್ದಾರೆ.
ಜನಸಂಖ್ಯೆಯ ಆಧಾರದ ಮೇಲೆ ಹಕ್ಕುಗಳಿಗಾಗಿ ಬ್ಯಾಟಿಂಗ್ ಮಾಡುವವರು ಅದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಬೇಕು. ಏಕೆಂದರೆ ಅದು ‘ಬಹುತ್ವವಾದ’ಕ್ಕೆ ಕಾರಣವಾಗುತ್ತದೆ ಎಂದು ಅಭಿಷೇಕ್ ಮನು ಸಿಂಘ್ವಿ ಒತ್ತಿ ಹೇಳಿದ್ದಾರೆ. ಈ ಮೂಲಕ ರಾಹುಲ್ ಗಾಂಧಿಯ ಹೇಳಿಕೆಗೆ ಪರೋಕ್ಷವಾಗಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಿಹಾರ್ ಬೆನ್ನಲ್ಲೇ ಕರ್ನಾಟಕದಲ್ಲೂ ಗರಿಗೆದರಿದ ಜಾತಿ ಗಣತಿ ವರದಿ ಸಲ್ಲಿಕೆ ಕಾರ್ಯ ಚಟುವಟಿಕೆಗಳು
ಬಳಿಕ ತಮ್ಮ ಟ್ವೀಟ್ಗೆ ಸ್ಪಷ್ಟನೆ ನೀಡಿರುವ ಅಭಿಷೇಕ್ ಮನು ಸಿಂಘ್ವಿ, ರಾಹುಲ್ ಗಾಂಧಿ ಅವರ ಅಭಿಪ್ರಾಯವನ್ನು ವಿರೋಧಿಸಿ ನಾನು ಆ ಟ್ವೀಟ್ ಮಾಡಿಲ್ಲ. ನಾನು ಬೇರೆ ನಿಲುವು ತಳೆದಿಲ್ಲ, ನಾವು ಕೂಡ ಅವರ ಹೇಳಿಕೆಯನ್ನು ಬೆಂಬಲಿಸಿದ್ದೇವೆ. ಆದರೆ, ಸತ್ಯಾಂಶಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನಾನು ಹೇಳಿದ್ದೇನೆ. ಆದ್ದರಿಂದ, ಸತ್ಯಕ್ಕಾಗಿ ಜಾತಿ ಗಣತಿ ನಡೆಯುವುದು ಅತ್ಯಗತ್ಯ ಎಂದಿದ್ದಾರೆ.
ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವು 2024ರ ಸಾರ್ವತ್ರಿಕ ಚುನಾವಣೆಗೂ ತಿಂಗಳುಗಳ ಮೊದಲು ತನ್ನ ಬಹು ನಿರೀಕ್ಷಿತ ಜಾತಿ ಸಮೀಕ್ಷೆಯ ಸಂಶೋಧನೆಗಳನ್ನು ಸೋಮವಾರ ಬಿಡುಗಡೆ ಮಾಡಿದೆ. ಅಂಕಿಅಂಶಗಳ ಪ್ರಕಾರ, ಬಿಹಾರದ ಒಟ್ಟು ಜನಸಂಖ್ಯೆಯು 13.07 ಕೋಟಿಗಿಂತ ಸ್ವಲ್ಪ ಹೆಚ್ಚಿದೆ. ಅದರಲ್ಲಿ ಅತ್ಯಂತ ಹಿಂದುಳಿದ ವರ್ಗಗಳು (ಶೇ. 36) ಅತಿದೊಡ್ಡ ಸಾಮಾಜಿಕ ವಿಭಾಗವಾಗಿದ್ದು, ಇತರ ಹಿಂದುಳಿದ ವರ್ಗಗಳು ಶೇ. 27.13ರಷ್ಟಿವೆ.
ಇದನ್ನೂ ಓದಿ: ಪಂಜಾಬ್ಗೆ ರಾಹುಲ್ ಗಾಂಧಿ ಭೇಟಿ: ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಪ್ರಾರ್ಥನೆ
ಬಿಹಾರದ ಜಾತಿ ಸಮೀಕ್ಷೆಯನ್ನು ಶ್ಲಾಘಿಸಿ, ರಾಹುಲ್ ಗಾಂಧಿ “ಬಿಹಾರದ ಜಾತಿ ಗಣತಿಯು ಓಬಿಸಿ, ಎಸ್ಸಿ, ಎಸ್ಟಿ ಜನಸಂಖ್ಯೆ ಶೇ. 84ರಷ್ಟಿದೆ ಎಂದು ಬಹಿರಂಗಪಡಿಸಿದೆ. ಭಾರತದ ಜಾತಿ ಅಂಕಿಅಂಶಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಹೆಚ್ಚಿನ ಜನಸಂಖ್ಯೆಗೆ ಹೆಚ್ಚಿನ ಹಕ್ಕುಗಳು- ಇದು ನಮ್ಮ ಪ್ರತಿಜ್ಞೆ” ಎಂದು ಹೇಳಿಕೆ ನೀಡಿದ್ದರು.
ರಾಹುಲ್ ಗಾಂಧಿಯವರ ಹೇಳಿಕೆಯನ್ನು ಆಕ್ಷೇಪಿಸಿ ಟ್ವೀಟ್ ಮಾಡಿದ ಅಭಿಷೇಕ್ ಮನು ಸಿಂಘ್ವಿ ನಂತರ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಒತ್ತಡಕ್ಕೆ ಮಣಿದು ಅವರು ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಜಾತಿ ಗಣತಿ ವಿಚಾರದಲ್ಲಿ ಅಭಿಷೇಕ್ ಮನು ಸಿಂಘ್ವಿ ಅವರ ಅಭಿಪ್ರಾಯ ವೈಯಕ್ತಿಕ, ಅದು ಪಕ್ಷದ ನಿಲುವಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.
ಬಿಹಾರದ ಜಾತಿ ಸಮೀಕ್ಷೆ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು?:
ಬಿಹಾರದಲ್ಲಿ ಜಾತಿ ಆಧಾರಿತ ಜನಗಣತಿ ಅಂಕಿಅಂಶಗಳನ್ನು ಬಹಿರಂಗಪಡಿಸಿದ ನಂತರ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಮಾತನಾಡಿ, ದೇಶದ ಜಾತಿ ಅಂಕಿಅಂಶಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಜನರು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ತಮ್ಮ ಹಕ್ಕುಗಳನ್ನು ಪಡೆಯಬೇಕು. ‘ಬಿಹಾರದ ಜಾತಿ ಗಣತಿಯು OBC, SC ಮತ್ತು ST ಅಲ್ಲಿ ಶೇ. 84ರಷ್ಟು ಎಂದು ತೋರಿಸಿದೆ. ಕೇಂದ್ರ ಸರ್ಕಾರದ 90 ಕಾರ್ಯದರ್ಶಿಗಳ ಪೈಕಿ 3 ಮಂದಿ ಮಾತ್ರ ಒಬಿಸಿಗಳಾಗಿದ್ದು, ಅವರು ಭಾರತದ ಬಜೆಟ್‌ನ ಶೇ. 5ರಷ್ಟನ್ನು ಮಾತ್ರ ನಿಭಾಯಿಸುತ್ತಿದ್ದಾರೆ!’ ಎಂದಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ