ಶಾಲಾ ವಿದ್ಯಾರ್ಥಿಗಳಿಂದ ನಮಾಜ್; ತನಿಖೆಗೆ ಆದೇಶಿಸಿದ ಗುಜರಾತ್ ಸರ್ಕಾರ
ಕೆಲವರು ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಜ್ಯದ ಶಾಂತಿಯುತ ವಾತಾವರಣವನ್ನು ಕದಡಲು ಬಯಸುತ್ತಿರುವಂತೆ ತೋರುತ್ತಿದೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ತಾವು ಏನು ಮಾಡುತ್ತಿದ್ದೇವೆ ಎಂದು ನಿಖರವಾಗಿ ತಿಳಿದಿರುವುದಿಲ್ಲ. ಇದು ಸ್ವೀಕಾರಾರ್ಹವಲ್ಲ ಎಂದು ಪ್ರಾಥಮಿಕ, ಪ್ರೌಢ ಮತ್ತು ಹಿರಿಯ ಶಿಕ್ಷಣ ರಾಜ್ಯ ಸಚಿವ ಪ್ರಫುಲ್ ಪನ್ಶೇರಿಯಾ ಹೇಳಿದರು
ಅಹಮದಾಬಾದ್ ಅಕ್ಟೋಬರ್ 03: ಅಹಮದಾಬಾದ್‌ನ (Ahmedabad) ಖಾಸಗಿ ಶಾಲೆಯೊಂದು ಜಾಗೃತಿ ಕಾರ್ಯಕ್ರಮದ ಭಾಗವಾಗಿ ಹಿಂದೂ ವಿದ್ಯಾರ್ಥಿಗಳನ್ನು ನಮಾಜ್ (Namaz) ಮಾಡುವಂತೆ ಕೇಳಿದೆ ಎಂದು ಆರೋಪಿಸಿ ಬಲಪಂಥೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ. ಇದೆಲ್ಲದರ ನಡುವೆಯೇ ಪ್ರತಿಭಟನಾಕಾರರು ಶಿಕ್ಷಕರ ಮೇಲೆ ಹಲ್ಲೆ ನಡೆಸಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಸೆಪ್ಟೆಂಬರ್ 29 ರಂದು ಅಹಮದಾಬಾದ್‌ನ ಘಟ್ಲೋಡಿಯಾ ಪ್ರದೇಶದ ಕಲೋರೆಕ್ಸ್ ಫ್ಯೂಚರ್ ಸ್ಕೂಲ್‌ನಲ್ಲಿ ನಡೆದ ಕಾರ್ಯಕ್ರಮದ ಕುರಿತು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.
ಈ ಕಾರ್ಯಕ್ರಮವು ವಿವಿಧ ಧರ್ಮಗಳ ಆಚರಣೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ. ಯಾವುದೇ ವಿದ್ಯಾರ್ಥಿಯನ್ನು ನಮಾಜ್ ಮಾಡಲು ಒತ್ತಾಯಿಸಲಾಗಿಲ್ಲ ಎಂದು ಕ್ಷಮೆಯಾಚಿಸಿದ ಶಾಲಾ ಅಧಿಕೃತರು ಹೇಳಿದ್ದಾರೆ.
ಈ ಕಾರ್ಯಕ್ರಮದ ವಿಡಿಯೊವನ್ನು ಶಾಲೆಯ ಫೇಸ್‌ಬುಕ್ ಪುಟದಿಂದ ತೆಗೆದುಹಾಕಲಾಗಿದೆ. ವಿಡಿಯೊದಲ್ಲಿ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಯೊಬ್ಬರು ನಮಾಜ್ ನೀಡುತ್ತಿರುವುದನ್ನು ಕಾಣಬಹುದು. ಇತರ ನಾಲ್ವರು ನಂತರ ಲಬ್ ಪೇ ಆತಿ ಹೈ ದುವಾ ಎಂದು ಪ್ರಾರ್ಥನೆ ಹಾಡಿದ್ದಾರೆ. ಮಂಗಳವಾರ ಶಾಲಾ ಆವರಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬಜರಂಗದಳ ಹಾಗೂ ಇತರ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಕೆಲವರು ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಜ್ಯದ ಶಾಂತಿಯುತ ವಾತಾವರಣವನ್ನು ಕದಡಲು ಬಯಸುತ್ತಿರುವಂತೆ ತೋರುತ್ತಿದೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ತಾವು ಏನು ಮಾಡುತ್ತಿದ್ದೇವೆ ಎಂದು ನಿಖರವಾಗಿ ತಿಳಿದಿರುವುದಿಲ್ಲ. ಇದು ಸ್ವೀಕಾರಾರ್ಹವಲ್ಲ ಎಂದು ಪ್ರಾಥಮಿಕ, ಪ್ರೌಢ ಮತ್ತು ಹಿರಿಯ ಶಿಕ್ಷಣ ರಾಜ್ಯ ಸಚಿವ ಪ್ರಫುಲ್ ಪನ್ಶೇರಿಯಾ ಹೇಳಿದರು.
ಇಂತಹ ಕಾರ್ಯಕ್ರಮವನ್ನು ಆಯೋಜಿಸುವುದರ ಹಿಂದಿನ ಮನಸ್ಥಿತಿ ಮತ್ತು ಉದ್ದೇಶವನ್ನು ಕಂಡುಹಿಡಿಯಲು ನಾವು ತನಿಖೆ ನಡೆಸುತ್ತೇವೆ. ನಂತರ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಯಾವುದೇ ತಪ್ಪು ಮಾಡಿದವರನ್ನು ನಾವು ಬಿಡುವುದಿಲ್ಲ ಎಂದು ಸಚಿವರು ಹೇಳಿದ್ದಾರೆ. ಚಟುವಟಿಕೆಯ ಸಂದರ್ಭದಲ್ಲಿ ಶಾಲೆಯ ಹಿಂದೂ ವಿದ್ಯಾರ್ಥಿಗಳು ನಮಾಜ್ ಮಾಡಲು ಬಲವಂತ ಮಾಡಿದ ವಿಡಿಯೊವನ್ನು ನಾವು ನೋಡಿದ್ದೇವೆ. ನಮ್ಮ ಪ್ರತಿಭಟನೆಯ ನಂತರ, ಶಾಲಾ ಆಡಳಿತ ಮಂಡಳಿಯು ಕ್ಷಮೆಯಾಚಿಸಿದೆ . ಮುಂದೆ ಇಂತಹ ಚಟುವಟಿಕೆಗಳನ್ನು ನಡೆಸುವುದಿಲ್ಲ ಎಂದು ಅದು ಭರವಸೆ ನೀಡಿದೆ, ಏಕೆಂದರೆ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳು ಮಾತ್ರ ಓದುತ್ತಾರೆ ಎಂದು ಗುಜರಾತ್ ಎಬಿವಿಪಿಯ ಮಾಧ್ಯಮ ಸಂಯೋಜಕ ಮೀಟ್ ಭಾವಸರ್ ಹೇಳಿದರು.
ಕಾರ್ಯಕ್ರಮದ ವಿಡಿಯೊದಲ್ಲಿ ಸಂಗೀತ ವಾದ್ಯವನ್ನು ನುಡಿಸುತ್ತಿರುವ ಶಿಕ್ಷಕನನ್ನು ಮಂಗಳವಾರ ಪ್ರತಿಭಟನೆಯ ಸಂದರ್ಭದಲ್ಲಿ ಕಾರ್ಯಕರ್ತರು ಮತ್ತು ಕೋಪಗೊಂಡ ಪೋಷಕರು ಥಳಿಸಿದ್ದಾರೆ ಎಂದು ಕೆಲವು ವೈರಲ್ ವೀಡಿಯೊಗಳು ತೋರಿಸಿವೆ. ಇದುವರೆಗೆ ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ.
ಕ್ಷಮಾಪಣೆಯಲ್ಲಿ, ಶಾಲೆಯು ಜಾಗರೂಕತೆಯಿಂದ ಮುಂದುವರಿಯುತ್ತದೆ ಎಂದು ಹೇಳಿದೆ. ಶಾಲಾ ಮುಖ್ಯೋಪಾಧ್ಯಾಯಿನಿ ನೀರಲಿ ದಗಲಿ ಮಾತನಾಡಿ, ಹಬ್ಬ ಹರಿದಿನಗಳಿಗೆ ಮುನ್ನ ವಿದ್ಯಾರ್ಥಿಗಳಿಗೆ ವಿವಿಧ ಧರ್ಮ, ಆಚರಣೆಗಳ ಬಗ್ಗೆ ಅರಿವು ಮೂಡಿಸುವುದು ಶಾಲೆಯ ಸಂಪ್ರದಾಯವಾಗಿದೆ.
ಇದನ್ನೂ ಓದಿ: ಕೆಸಿಆರ್ ಎನ್‌ಡಿಎ ಸೇರಲು ಬಯಸಿದ್ದರು, ಆದರೆ ನಾವು ಅವಕಾಶ ನೀಡಲಿಲ್ಲ: ಮೋದಿ
ಈದ್ ಹಿನ್ನೆಲೆಯಲ್ಲಿ 2ನೇ ತರಗತಿಯ ವಿದ್ಯಾರ್ಥಿಗಳಿಗೆ ಹಬ್ಬದ ಬಗ್ಗೆ ಬೋಧಿಸಲು ಈ ಚಟುವಟಿಕೆಯನ್ನು ಹಮ್ಮಿಕೊಂಡಿದ್ದೆವು. ಸಂವತ್ಸರಿ, ಗಣೇಶ ಚತುರ್ಥಿ ಸೇರಿದಂತೆ ಎಲ್ಲ ಧರ್ಮಗಳ ಹಬ್ಬಗಳಿಗೂ ಮುನ್ನ ಇಂತಹ ಚಟುವಟಿಕೆಗಳನ್ನು ನಡೆಸುತ್ತೇವೆ.ಯಾವ ವಿದ್ಯಾರ್ಥಿಯೂ ನಮಾಜ್ ಮಾಡುವಂತೆ ಒತ್ತಾಯಿಸಿಲ್ಲ. ಕೇವಲ ಎರಡು ನಿಮಿಷಗಳ ಚಟುವಟಿಕೆಯಾಗಿತ್ತು. ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಒಪ್ಪಿಗೆ ಪಡೆದಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ