ಮಮತಾ ಬ್ಯಾನರ್ಜಿ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರಾ?: ಕೇಂದ್ರ ಸಚಿವ ಅನುರಾಗ್ ಠಾಕೂರ್ ವಾಗ್ದಾಳಿ

|

Updated on: Apr 04, 2023 | 4:15 PM

Ram navami violence: ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರದ ಬಗ್ಗೆ ಅನುರಾಗ್ ಠಾಕೂರ್, ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಶ್ಚಿಮ ಬಂಗಾಳದ ಒಂದು ಭಾಗದ ಜನರು ಶಾಂತಿಯಿಂದ ರಾಮನವಮಿ ಮೆರವಣಿಗೆ ಹಾದುಹೋಗಲು ಸಮ್ಮತಿಸುವುದಿಲ್ಲ. ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಿಂದೂಗಳೂ ಆ ಪ್ರದೇಶದಲ್ಲಿ ಹೋಗಬೇಡಿ ಅಂತಾರೆ

ಮಮತಾ ಬ್ಯಾನರ್ಜಿ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರಾ?: ಕೇಂದ್ರ ಸಚಿವ ಅನುರಾಗ್ ಠಾಕೂರ್ ವಾಗ್ದಾಳಿ
Follow us on

ಪಕ್ಷಪಾತ ಸಮಾಜದಲ್ಲಿ ಸಮಸ್ಯೆಯನ್ನುಂಟು ಮಾಡುತ್ತದೆ. ಹಿಂಸಾಚಾರದ (violence) ಹಿಂದೆ ತುಷ್ಟೀಕರಣದ ರಾಜಕಾರಣ ನಡೆಯುತ್ತಿದೆ. ವೋಟ್ ಬ್ಯಾಂಕ್ ನಿಂದಾಗಿ ಅಶಾಂತಿ ಹಬ್ಬಿಸುವುದು ಸಮಾಜದಲ್ಲಿ ಹೆಚ್ಚಿನ ಸವಾಲುಗಳನ್ನುಂಟು ಮಾಡುತ್ತದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur)  ಹೇಳಿದ್ದಾರೆ.ಅಹಿಂಸಾ ವಿಶ್ವ ಭಾರತಿ ಸಂಸ್ಥಾನ ಮತ್ತು ವಿಶ್ವ ಶಾಂತಿ ಕೇಂದ್ರ ಆಯೋಜಿಸಿದ್ದ ಭಗವಾನ್ ಮಹಾವೀರ ಜಯಂತಿ ಆಚರಣೆ ಸಂದರ್ಭದಲ್ಲಿ ಮಾತನಾಡುತ್ತಿದ್ದರವರು. ಹಿಂಸಾಚಾರ ಅಷ್ಟೇ ಅಲ್ಲ ಕೌಟುಂಬಿಕ ದೌರ್ಜನ್ಯ ಕೂಡಾ ನಮ್ಮ ಸಮಾಜದಲ್ಲಿದೆ. ಕೌಟುಂಬಿಕ ದೌರ್ಜನ್ಯ ಒಂದು ವರ್ಗಕ್ಕೆ ಸೀಮಿತವಾದುದಲ್ಲ, ಅದು ಎಲ್ಲ ಕಡೆ ಇದೆ. ಎಲ್ಲ ಜಾತಿ, ಧರ್ಮದಲ್ಲಿಯೂ ಇದು ಇದೆ. ನಾವು ಅಹಿಂಸೆಯ ಮಾತು ಹೇಳುವಾಗ ಅದು ಮನೆಯಿಂದಲೇ ಶುರುವಾಗಬೇಕು. ಇಲ್ಲಿರುವ ಸಂತರಲ್ಲಿ ನಾನು ಹೇಳುವುದೇನೆಂದರೆ ನಿಮ್ಮ ಕಾರ್ಯಕ್ರಮಕ್ಕೆ ಬರುವಾಗ ಎಲ್ಲರೂ ಶಾಂತಿಯ ಮನುಷ್ಯರು ಎಂದು ಕಾಣುತ್ತದೆ. ಆದರೆ ಇದೇ ಮನುಷ್ಯರು ಮನೆಗೆ ಹೋದಾಗ ನೆರೆಹೊರೆಯವರಲ್ಲಿ ಜಗಳ ಮಾಡುತ್ತಾರೆ. ಹೀಗಿರುವಾಗ ಇಲ್ಲಿಂದ ನೀನು ಏನು ತೆಗೆದುಕೊಂಡು ಹೋದೆ, ವಾಸ್ತವ ಜೀವನದಲ್ಲಿ ನೀವು ಅದನ್ನು ಅಳವಡಿಸಿದ್ದೇನು? ಇಂಥಾ ಸವಾಲುಗಳು ನಮ್ಮ ಮುಂದಿದೆ. ಇಂಥಾ ಸವಾಲುಗಳನ್ನು ಎದುರಿಸಬೇಕಾದರೆ ನಾವು ಭಗವಾನ್ ಮಹಾವೀರರರ(Bhagwan Mahavir) ಸಂದೇಶವನ್ನು ಪಾಲಿಸಬೇಕು.

ನಾವು ಶಾಂತಿಯಿಂದ ಬದುಕಬೇಕು. ಹಿಂಸೆ ಯಾವುದಕ್ಕೂ ಪರಿಹಾರವಲ್ಲ. ಮಾತುಕತೆ, ಸಂವಾದದಿಂದಲೇ ಈ ಸಮಸ್ಯೆಗಳನ್ನು ಪರಿಹರಿಸಬಹುದು. ಮಹಾವೀರರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದೆ. ಅವು ಈಗಲೂ ಅತ್ಯಗತ್ಯವಾಗಿವೆ. ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಇದು ಅಗತ್ಯ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.


ರಾಮನವಮಿಯಂದು ಬಂಗಾಳದಲ್ಲಿ ಹಿಂಸಾಚಾರ: ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ

ಇದು ಯುದ್ಧದ ಯುಗವಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು, ಆದರೆ ನಮ್ಮ ದೇಶದಲ್ಲಿ ಎರಡು ರಾಜ್ಯಗಳಲ್ಲಿ ಹಿಂಸಾಚಾರದ ಘಟನೆಗಳಿವೆ.ಈ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಪಕ್ಷಪಾತದ ಕೆಲಸ ಮಾಡುತ್ತಿದ್ದು, ಸಮಸ್ಯೆ ಹುಟ್ಟು ಹಾಕುತ್ತಾರೆ. ಈ ಘಟನೆಗಳ ಹಿಂದೆ ಒಂದು ವರ್ಗವಿದೆಯೇ ಅಥವಾ ತುಷ್ಟೀಕರಣದ ರಾಜಕೀಯವು ಅವುಗಳನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಮಾಡುತ್ತದೆ. ವೋಟ್ ಬ್ಯಾಂಕ್ ರಾಜಕಾರಣದಲ್ಲಿ ಅಶಾಂತಿ ಮೂಡಿಸುವ ಕೆಲಸ ಈ ರೀತಿಯಾಗಿಯೂ ನಡೆಯಿತೇ ಎಂಬುದು ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಬಂಗಾಳ-ಬಿಹಾರದಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಅಲ್ಲಿನ ಸರ್ಕಾರಗಳ ಪ್ರಚೋದನೆಯಿಂದ ಕಲ್ಲು ತೂರಾಟ, ಬೆಂಕಿ ಹಚ್ಚಿದ್ದು, ಕೊಲೆಗಳು ನಡೆಯುತ್ತಿವೆ ಎಂಬುದನ್ನು ಏಕೆ ಒಪ್ಪಿಕೊಳ್ಳಬಾರದು. ರಾಮನ ಭಕ್ತರು ಕೆಲವೊಂದು ವಿಶೇಷ ಪ್ರದೇಶಗಳಿಗೆ ಹೋಗಿದ್ದರಿಂದ ಈ ಘಟನೆ ನಡೆದಿದೆ ಎಂದು ಮುಖ್ಯಮಂತ್ರಿ ಹೇಗೆ ಹೇಳುತ್ತಾರೆ? ಭಾರತ ಗಣರಾಜ್ಯದಲ್ಲಿ ಯಾವುದೇ ಪ್ರದೇಶವು ಹೇಗೆ ವಿಶೇಷವಾಗಿರುತ್ತದೆ? ಎಂದು ಕೇಳಿದ್ದಾರೆ.

ಇದನ್ನೂ ಓದಿ:ಹಿಂದೂ ಎಂಬ ಕಾರಣಕ್ಕೆ ಲಂಡನ್ ಸ್ಕೂಲ್ ಆಫ್​ ಎಕನಾಮಿಕ್ಸ್​ ಚುನಾವಣೆಯಿಂದ ಅನರ್ಹಗೊಳಿಸಿದರು; ಭಾರತೀಯ ವಿದ್ಯಾರ್ಥಿ ಅಳಲು

ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರದ ಬಗ್ಗೆ ಅನುರಾಗ್ ಠಾಕೂರ್, ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಶ್ಚಿಮ ಬಂಗಾಳದ ಒಂದು ಭಾಗದ ಜನರು ಶಾಂತಿಯಿಂದ ರಾಮನವಮಿ ಮೆರವಣಿಗೆ ಹಾದುಹೋಗಲು ಸಮ್ಮತಿಸುವುದಿಲ್ಲ. ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಿಂದೂಗಳೂ ಆ ಪ್ರದೇಶದಲ್ಲಿ ಹೋಗಬೇಡಿ ಅಂತಾರೆ.ಹೀಗಿರುವಾಗ ಅವರು(ಮಮತಾ) ದೇಶ ಅಥವಾ ಪ್ರದೇಶವನ್ನು ಒಡೆಯಲು ಬಯಸುತ್ತಾರೆಯೇ? ಇದು ಯೋಚಿಸಬೇಕಾದ ಸಂಗತಿ. ಮಮತಾ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರಾ? ಎಂದು ಕೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರ ದೇಶವನ್ನೇ ಬೆಚ್ಚಿ ಬೀಳಿಸಿದೆ. ಹೂಗ್ಲಿ ಮತ್ತು ರಿಶ್ರಾದಂತಹ ಪ್ರದೇಶಗಳು ಕೋಮುಗಲಭೆ ಮತ್ತು ಕಲ್ಲು ತೂರಾಟ ನಡೆದಿದೆ. ಇದೇ ವೇಳೆ ಗಲಭೆ ಪೀಡಿತ ಸ್ಥಳಗಳನ್ನು ರಾಜ್ಯಪಾಲರು ಪರಿಶೀಲನೆ ನಡೆಸಿದ್ದಾರೆ ಎಂದು ಠಾಕೂರ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ