ಮುಕುಲ್ ವಾಸ್ನಿಕ್ರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಜಿ 23 ನಾಯಕರ ಒತ್ತಾಯ; ಆದರೆ ಆಗಿದ್ದೇನು?
ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಮೇಲೆ ಜಿ23 ನಾಯಕರು ಮತ್ತೊಮ್ಮೆ ನಾಯಕತ್ವ ಬದಲಿಸಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಅದಕ್ಕೆ ಗಾಂಧಿ ಕುಟುಂಬ ಒಪ್ಪಲಿದೆ ಎಂಬ ಬಗ್ಗೆಯೂ ಮಾಹಿತಿ ಸಿಕ್ಕಿದೆ.
ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ನಲ್ಲೀಗ ಸದ್ಯ ಕೋಲಾಹಲ ಸೃಷ್ಟಿಯಾಗಿದೆ. ಯಾರು ಯಾವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು? ಯಾರು ಪಕ್ಷವನ್ನು ಮುನ್ನಡೆಸಬೇಕು? ಪಕ್ಷ ಸಂಘಟನೆ ಎಲ್ಲಿಂದ ಶುರುವಾಗಬೇಕು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಈ ಚುನಾವಣೆಯಲ್ಲಿ ಪಂಜಾಬ್ ಕೂಡ ಕೈತಪ್ಪಿ ಹೋಗಿದ್ದು ಇನ್ನಷ್ಟು ಕಾಂಗ್ರೆಸ್ಗೆ ಇನ್ನಷ್ಟು ಮುಜುಗರ ತಂದಿದೆ. ಇದೆಲ್ಲದರ ಮಧ್ಯೆ ಒಂದು ಸುದ್ದಿ ಬಲವಾಗಿ ಓಡಾಡುತ್ತಿದ್ದು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಾರೆ. ಇಂದು ಸಂಜೆ 4ಗಂಟೆಗೆ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಇವರೆಲ್ಲರೂ ರಾಜೀನಾಮೆ ಕೊಡುತ್ತಾರೆ ಎಂಬುದೊಂದು ಸುದ್ದಿ ಎದ್ದಿತ್ತು. ಆದರೆ ಇದು ಸುಳ್ಳು, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲವೆಂದು ಕಾಂಗ್ರೆಸ್ ಸ್ಪಷ್ಟವಾಗಿ ಹೇಳಿದೆ.
ಹಾಗೇ ಕಾಂಗ್ರೆಸ್ನಲ್ಲಿ ಸದ್ಯದ ಮಟ್ಟಿಗೆ ರೆಬಲ್ ನಾಯಕರು ಎಂದೇ ಗುರುತಿಸಿಕೊಂಡಿರುವ ಜಿ 23 ನಾಯಕರು, ಪಕ್ಷಕ್ಕೆ ಮುಕುಲ್ ವಾಸ್ನಿಕ್ರನ್ನು ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂಬ ಸಲಹೆಯನ್ನು ನೀಡಿದ್ದಾಗಿ ಕಾಂಗ್ರೆಸ್ ಮೂಲಗಳಿಂತ ತಿಳಿದುಬಂದಿದೆ ಎಂದು ಎಎನ್ಐ ವರದಿ ಮಾಡಿದೆ. ಆದರೆ ಜಿ 23 ನಾಯಕರ ಈ ಸಲಹೆಯನ್ನು ನಿರಾಕರಿಸಿದ್ದಾಗಿಯೂ ತಿಳಿಸಲಾಗಿದೆ. 2019ರ ಲೋಕಸಭೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದ ಮೇಲೆ ರಾಹುಲ್ ಗಾಂಧಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದಾದ ಮೇಲೆ ಮಧ್ಯಂತರ ಅವಧಿಗೆ ಸೋನಿಯಾ ಗಾಂಧಿ ಅಧ್ಯಕ್ಷೆಯಾಗಿ, ಮೂರು ವರ್ಷ ಕಳೆದರೂ ಅವರೇ ಈಗ ಪೂರ್ಣಾವಧಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಬಿಟ್ಟರೆ, ಬೇರೆ ಯಾರನ್ನೂ ನೇಮಕ ಮಾಡಲಿಲ್ಲ. ಆದರೆ ರಾಹುಲ್ ಗಾಂಧಿ ಅಧ್ಯಕ್ಷರಾಗಿಲ್ಲದಿದ್ದರೂ, ತೆರೆಯ ಹಿಂದಿಂದ ಕೆಲಸ ಮಾಡುತ್ತಿದ್ದಾರೆ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಕ್ರಿಯರಾಗಿದ್ದಾರೆ ಮತ್ತು ಅನೇಕ ಸಲ ಅವರೇ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ.
ಇದೀಗ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಮೇಲೆ ಜಿ23 ನಾಯಕರು ಮತ್ತೊಮ್ಮೆ ನಾಯಕತ್ವ ಬದಲಿಸಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಅದಕ್ಕೆ ಗಾಂಧಿ ಕುಟುಂಬ ಒಪ್ಪಲಿದೆ ಎಂಬ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಹಾಗೇ, 2000ನೇ ಇಸ್ವಿ ಪ್ರಾರಂಭದಲ್ಲಿ ಸೋನಿಯಾ ಗಾಂಧಿ ಹೇಗೆ ಪಕ್ಷವನ್ನು ಮುನ್ನಡೆಸಿದ್ದರೋ ಅದೇ ಮಾದರಿಯಲ್ಲೇ ಕೆಲಸ ಮಾಡುವ ಸಾಮರ್ಥ್ಯ ಇರುವವರನ್ನೇ ಕಾಂಗ್ರೆಸ್ನ ಹೊಸ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬುದನ್ನೂ ಜಿ 23 ನಾಯಕರು ಒತ್ತಿ ಹೇಳಿದ್ದಾಗಿ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಯಾರು ಈ ಮುಕುಲ್ ವಾಸ್ನಿಕ್
ಮುಕುಲ್ ವಾಸ್ನಿಕ್ ದೆಹಲಿಯವರೇ ಆಗಿದ್ದು, ಸದ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಸಚಿವರೂ ಆಗಿದ್ದರು. 2009ರಲ್ಲಿ ಮಹಾರಾಷ್ಟ್ರದ ರಾಮ್ಟೆಕ್ ಲೋಕಸಭಾ ಕ್ಷೇತ್ರದಲ್ಲಿ ಗೆದ್ದಿದ್ದ ಇವರು 2014ರಲ್ಲಿ ಅದೇ ಕ್ಷೇತ್ರದಲ್ಲಿ ಸೋತಿದ್ದಾರೆ. 2020ರಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಇದನ್ನೂ ಓದಿ: ಬಂಗಾಳ ಉಪಚುನಾವಣೆಯಲ್ಲಿ ಟಿಎಂಸಿಯಿಂದ ಸ್ಪರ್ಧಿಸಲಿದ್ದಾರೆ ಶತ್ರುಘ್ನ ಸಿನ್ಹಾ, ಬಾಬುಲ್ ಸುಪ್ರಿಯೋ