ಗುಂಡೇಟು ಬಿದ್ದರೂ ಉಗ್ರರ ಜೊತೆ ಕಾದಾಡಿದ್ದ ಭಾರತೀಯ ಸೇನೆಯ ಶ್ವಾನ ಜೂಮ್ ಇನ್ನಿಲ್ಲ

ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಹಿಂದೆಜ್ಜೆ ಹಾಕದೆ ಕಾದಾಡಿದ್ದ ಭಾರತೀಯ ಸೇನೆಯ ಶ್ವಾನ ಮೃತಪಟ್ಟಿದೆ.

ಗುಂಡೇಟು ಬಿದ್ದರೂ ಉಗ್ರರ ಜೊತೆ ಕಾದಾಡಿದ್ದ ಭಾರತೀಯ ಸೇನೆಯ ಶ್ವಾನ ಜೂಮ್ ಇನ್ನಿಲ್ಲ
ಭಾರತೀಯ ಸೇನೆಯ ನಾಯಿ ಜೂಮ್
Updated By: ರಮೇಶ್ ಬಿ. ಜವಳಗೇರಾ

Updated on: Oct 13, 2022 | 9:05 PM

ಅನಂತ್​ನಾಗ್: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಭಯೋತ್ಪಾದಕರ ನಡುವಿನ ಎನ್‌ಕೌಂಟರ್‌ನಲ್ಲಿ (Encounter) ತೀವ್ರವಾಗಿ ಗಾಯಗೊಂಡಿದ್ದ ಭಾರತೀಯ ಸೇನೆಯ ಶ್ವಾನ ಸಾವನ್ನಪ್ಪಿದೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ (Anantnag) ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಭಾರತೀಯ ಸೇನೆಯ ಶ್ವಾನ ಜೂಮ್ ಗುರುವಾರ ಕೊನೆಯುಸಿರೆಳೆದಿದೆ ಎಂದು ಸೇನಾ ಅಧಿಕಾರಿಗಳು ಖಚಿತಪಡಿಸಿದ್ದಾರೆ.


ಗುಂಡೇಟು ಬಿದ್ದರೂ ಉಗ್ರರ ಜೊತೆ ಕಾದಾಡಿದ ಭಾರತೀಯ ಸೇನೆಯ ಶ್ವಾನ; ವೈರಲ್ ವಿಡಿಯೋ ಇಲ್ಲಿ

ಈ ಗುಂಡಿನ ಕಾಳಗದ ವೇಳೆ ಶ್ವಾನ ಝೂಮ್ ಜೊತೆಗೆ ಇಬ್ಬರು ಸೈನಿಕರೂ ಗಾಯಗೊಂಡಿದ್ದರು. ನಂತರ ಶ್ವಾನ ಜೂಮ್​ನನ್ನು ಅಡ್ವಾನ್ಸ್ ಫೀಲ್ಡ್ ವೆಟರ್ನರಿ ಹಾಸ್ಪಿಟಲ್ (54 AFVH)ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಇಂದು(ಅ.13) ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಅದು ಕೊನೆಯುಸಿರೆಳೆದಿದೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಅನಂತನಾಗ್‌ ಜಿಲ್ಲೆಯ ಕೋಕರ್‌ನಾಗ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರ ಸದೆ ಬಡಿಯುವಲ್ಲಿ ಶ್ವಾನ ಜೂಮ್ ನೆರವಾಗಿತ್ತು. ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಎರಡು ಗುಂಡೇಟುಗಳಿಂದ ಶ್ವಾನ ಝೂಮ್ ಗಾಯಗೊಂಡಿತ್ತು. ಆದರೂ, ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.

Published On - 9:01 pm, Thu, 13 October 22