ಸೇನೆಗೆ ಯಾವುದೇ ಧರ್ಮ, ಜಾತಿ ಇಲ್ಲ; ಮೀಸಲಾತಿ ಕುರಿತು ರಾಹುಲ್ ಗಾಂಧಿ ಹೇಳಿಕೆಗೆ ರಾಜನಾಥ್ ಸಿಂಗ್ ತಿರುಗೇಟು

ಭಾರತೀಯ ಸೇನೆ ಮತ್ತು ಜಾತಿಯ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟೀಕಿಸಿದ್ದಾರೆ. ಭಾರತದ ಸಶಸ್ತ್ರ ಪಡೆಗಳನ್ನು ರಾಜಕೀಯಗೊಳಿಸಬೇಡಿ ಎಂದು ಅವರು ಒತ್ತಾಯಿಸಿದ್ದಾರೆ. ಸೇನೆಯು ದೇಶದ ಜನಸಂಖ್ಯೆಯ ಶೇ. 10ರಷ್ಟು ಜನರ ನಿಯಂತ್ರಣದಲ್ಲಿದೆ. ಮೇಲ್ಜಾತಿಗಳಿಗೆ ಸೇನೆ ಸೀಮಿತವಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ ನಂತರ ವಿವಾದ ಸೃಷ್ಟಿಯಾಗಿದೆ.

ಸೇನೆಗೆ ಯಾವುದೇ ಧರ್ಮ, ಜಾತಿ ಇಲ್ಲ; ಮೀಸಲಾತಿ ಕುರಿತು ರಾಹುಲ್ ಗಾಂಧಿ ಹೇಳಿಕೆಗೆ ರಾಜನಾಥ್ ಸಿಂಗ್ ತಿರುಗೇಟು
Rajnath Singh

Updated on: Nov 05, 2025 | 7:19 PM

ನವದೆಹಲಿ, ನವೆಂಬರ್ 5: “ಭಾರತದ ಸಶಸ್ತ್ರ ಪಡೆಗಳು ಜನಸಂಖ್ಯೆಯ ಶೇ. 10ರಷ್ಟು ಜನರ ನಿಯಂತ್ರಣದಲ್ಲಿವೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದರು. ಇದಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. ಬಿಹಾರ ರಾಜ್ಯದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆಗೂ ಮುನ್ನ ಬಿಹಾರದಲ್ಲಿ ನಡೆದ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, “ರಾಹುಲ್ ಗಾಂಧಿಯವರ ಹೇಳಿಕೆಗಳು ಸೇನೆಯನ್ನು ವಿಭಜಿಸುವ ಮತ್ತು ಅರಾಜಕತೆಯನ್ನು ಸೃಷ್ಟಿಸುವ ಪ್ರಯತ್ನವಾಗಿದೆ. ಸೇನೆ ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ” ಎಂದು ಹೇಳಿದ್ದಾರೆ.

“ಭಾರತೀಯ ಸೇನೆಗೆ ಯಾವುದೇ ಧರ್ಮ ಅಥವಾ ಜಾತಿ ಇಲ್ಲ. ನಮ್ಮ ಸೈನಿಕರಿಗೆ ಇರುವುದು ಒಂದೇ ಧರ್ಮ. ಅದೆಂದರೆ ಸೈನ್ಯ ಧರ್ಮ. ನಮ್ಮ ಸೇನೆಯನ್ನು ರಾಜಕೀಯಕ್ಕೆ ಎಳೆಯಬೇಡಿ. ರಾಷ್ಟ್ರವು ಬಿಕ್ಕಟ್ಟನ್ನು ಎದುರಿಸಿದಾಗಲೆಲ್ಲಾ ನಮ್ಮ ಸೈನಿಕರು ಧೈರ್ಯ ಮತ್ತು ತ್ಯಾಗದ ಮೂಲಕ ಭಾರತದ ತಲೆಯನ್ನು ಎತ್ತುವಂತೆ ಮಾಡಿದ್ದಾರೆ” ಎಂದು ರಾಜನಾಥ್ ಸಿಂಗ್ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಬ್ರೆಜಿಲ್ ಮಾಡೆಲ್​ ಫೋಟೊ ಬಳಸಿ ಹರ್ಯಾಣದಲ್ಲಿ 22 ಹೆಸರುಗಳಲ್ಲಿ ನಡೆದಿತ್ತು ಮತದಾನ: ರಾಹುಲ್ ಗಾಂಧಿ

“ನಾವು ಬಡವರು ಮತ್ತು ಹಿಂದುಳಿದವರಿಗೆ ಮೀಸಲಾತಿಯನ್ನು ಬೆಂಬಲಿಸುತ್ತೇವೆ. ಆದರೆ ಸೇನೆಯನ್ನು ಜಾತಿಯ ದೃಷ್ಟಿಯಿಂದ ನೋಡಲು ಸಾಧ್ಯವಿಲ್ಲ. ಪಂಥ ಮತ್ತು ಧರ್ಮದ ಈ ರಾಜಕೀಯವು ದೇಶಕ್ಕೆ ದೊಡ್ಡ ಹಾನಿಯನ್ನುಂಟುಮಾಡಿದೆ” ಎಂದು ಅವರು ಹೇಳಿದರು.


ಇದನ್ನೂ ಓದಿ: ಇಟಲಿ ಮಹಿಳೆ ಕೂಡ ಭಾರತದಲ್ಲಿ ಮತ ಚಲಾಯಿಸಿದ್ದರು, ನಿಮಗೆ ನೆನಪಿಲ್ಲವೇ?; ರಾಹುಲ್ ಗಾಂಧಿ ಆರೋಪಕ್ಕೆ ಬಿಜೆಪಿ ಲೇವಡಿ

ಬಿಹಾರದ ಔರಂಗಾಬಾದ್‌ನಲ್ಲಿ ಪ್ರಚಾರ ಮಾಡುವಾಗ ರಾಹುಲ್ ಗಾಂಧಿ “ದೇಶದ ಜನಸಂಖ್ಯೆಯ ಶೇ. 10ರಷ್ಟು ಮೇಲ್ಜಾತಿಯ ಜನರು ಕಾರ್ಪೊರೇಟ್ ಭಾರತ, ಅಧಿಕಾರಶಾಹಿ, ನ್ಯಾಯಾಂಗ ಮತ್ತು ಸೈನ್ಯವನ್ನು ಸಹ ನಿಯಂತ್ರಿಸುತ್ತಾರೆ. ಉಳಿದ ಶೇ. 90ರಷ್ಟು ಜನರು ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರು” ಎಂದು ಹೇಳಿದ್ದರು. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ