ನವದೆಹಲಿ: ಸಿಯಾಚಿನ್ ಹಿಮಪರ್ವತ ಪ್ರದೇಶದಲ್ಲಿ (Siachen glacier) ಸೇನೆಯ ಮದ್ದುಗುಂಡುಗಳ ಬಂಕರ್‌ನಲ್ಲಿ ಬುಧವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಸೇನಾಧಿಕಾರಿಯೊಬ್ಬರು ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಮುಂಜಾನೆ 3.30 ರ ಸುಮಾರಿಗೆ ಘಟನೆ ಸಂಭವಿಸಿತ್ತು ಎನ್ನಲಾಗಿದೆ. ಗಾಯಗೊಂಡ ಅಧಿಕಾರಿಗಳನ್ನು ಹೆಲಿಕಾಪ್ಟರ್ ಮೂಲಕ ಚಂಡೀಗಢದ ಆಸ್ಪತ್ರೆಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಎಂದು ಭಾರತೀಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಹುತಾತ್ಮ ಸೇನಾ ಅಧಿಕಾರಿಯನ್ನು ಕ್ಯಾಪ್ಟನ್ ಅಂಶುಮಾನ್ ಸಿಂಗ್ ಎಂದು ಗುರುತಿಸಲಾಗಿದೆ. ಅವರು ರೆಜಿಮೆಂಟಲ್ ಮೆಡಿಕಲ್ ಆಫೀಸರ್ ಆಗಿದ್ದರು. ಇತರ ಮೂವರಿಗೆ ಹೊಗೆಯಿಂದಾಗಿ ಉಸಿರಾಟ ಸಮಸ್ಯೆ ಮತ್ತು ಸುಟ್ಟ ಗಾಯಗಳಾಗಿವೆ. ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದ ಮದ್ದುಗುಂಡುಗಳ ಟೆಂಟ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.
ಸಿಯಾಚಿನ್ ಗ್ಲೇಸಿಯರ್, 76 ಕಿಮೀ ಪ್ರದೇಶದಲ್ಲಿ ಹರಡಿಕೊಂಡಿದೆ, ಇದು ಕಾಶ್ಮೀರದ ವಿವಾದಿತ ಪ್ರದೇಶದ ಉತ್ತರ ಭಾಗದಲ್ಲಿದೆ. ಸಿಯಾಚಿನ್ ಭೂಮಿಯ ಮೇಲಿನ ಅತ್ಯಂತ ಎತ್ತರದ ಯುದ್ಧಭೂಮಿ ಎಂದು ಪರಿಗಣಿಸಲ್ಪಟ್ಟಿದೆ.
ಇದನ್ನೂ ಓದಿ: ಅಮೆರಿಕದಲ್ಲಿದ್ದ 105 ಪುರಾತನ ವಸ್ತುಗಳು ಮರಳಿ ಭಾರತಕ್ಕೆ, US ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಮೋದಿ
ಭಾರತವು ಪಾಕಿಸ್ತಾನ ಮತ್ತು ಚೀನಾದಿಂದ ಅವಳಿ ಸೇನಾ ಬೆದರಿಕೆಗಳನ್ನು ಎದುರಿಸುತ್ತಿದೆ. ಆದಾಗ್ಯೂ, ಯಾವುದೇ ಗುಂಡಿನ ಕಾಳಗಕ್ಕಿಂತಲೂ ಸಿಯಾಚಿನ್ ಹಿಮಪರ್ವತದಲ್ಲಿನ ಹವಾಮಾನ ವೈಪರೀತ್ಯಗಳು ಮತ್ತು ಹಿಮಕುಸಿತಗಳೇ ಹೆಚ್ಚು ಸೈನಿಕರನ್ನು ಬಲಿಪಡೆದಿವೆ.
ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಹಿಮಪಾತಕ್ಕೆ ಸಿಲುಕಿ 2019 ರಲ್ಲಿ ನಾಲ್ವರು ಸೇನಾ ಯೋಧರು ಮತ್ತು ಇಬ್ಬರು ನಾಗರಿಕ ಪೋರ್ಟರ್‌ಗಳು ಸೇರಿದಂತೆ ಕನಿಷ್ಠ ಆರು ಜನರು ಪ್ರಾಣ ಕಳೆದುಕೊಂಡಿದ್ದರು. ಇಂಡಿಯಾ ಟುಡೇ ವರದಿಯ ಪ್ರಕಾರ, ಹವಾಮಾನ ವೈಪರೀತ್ಯ ಮತ್ತು ಹಿಮಕುಸಿತದಿಂದಾಗಿ 800ಕ್ಕೂ ಹೆಚ್ಚು ಸೇನಾ ಯೋಧರು ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ