ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ (ಮರಣೋತ್ತರ) ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಅಪ್ಪಟ ಜನನಾಯಕ ಕರ್ಪೂರಿ ಠಾಕೂರ್ ಅವರ ಜನ್ಮದಿನದ ಮುನ್ನಾ ದಿನದಂದು ಕೇಂದ್ರ ಸರ್ಕಾರ ಈ ಘೋಷಣೆ ಮಾಡಿದೆ. ಬುಧವಾರ ಅಂದರೆ ಇಂದು ಅವರ 100ನೇ ಜನ್ಮ ದಿನಾಚರಣೆ. ಭಾರತ ರತ್ನ ದೇಶದ ಅತ್ಯುನ್ನತ ಗೌರವ. ಕಲೆ, ಸಾಹಿತ್ಯ, ವಿಜ್ಞಾನ, ಸಮಾಜ ಸೇವೆ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅಸಾಧಾರಣ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಇದನ್ನು ನೀಡಲಾಗುತ್ತದೆ. ಇದನ್ನು 1954 ರಲ್ಲಿ ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಪ್ರಾರಂಭಿಸಿದರು.
1954 ರಲ್ಲಿ ಮೊದಲ ಬಾರಿಗೆ ಭಾರತ ರತ್ನವನ್ನು ಘೋಷಿಸಿದಾಗ, ಈ ಗೌರವವನ್ನು 3 ವ್ಯಕ್ತಿಗಳಿಗೆ ನೀಡಲಾಯಿತು. ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಚಕ್ರವರ್ತಿ ರಾಜಗೋಪಾಲಾಚಾರಿ, ವಿಜ್ಞಾನಿ ಚಂದ್ರಶೇಖರ್ ವೆಂಕಟರಾಮನ್ ಮತ್ತು ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರಿಗೆ ಈ ಗೌರವವನ್ನು ನೀಡಲಾಗಿದೆ. ಭಾರತ ರತ್ನ ಯಾರಿಗೆ ಸಿಗುತ್ತದೆ, ಅದನ್ನು ಪಡೆಯುವ ವ್ಯಕ್ತಿಗೆ ಏನು ಪ್ರಯೋಜನ ಎಂಬುದನ್ನು ತಿಳಿಯಿರಿ.
ಭಾರತ ರತ್ನ ಯಾರಿಗೆ ಸಿಗಬೇಕೆಂದು ನಿರ್ಧರಿಸುವವರು ಯಾರು?
ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ಯಾರಿಗೆ ನೀಡಲಾಗುತ್ತದೆ ಎಂದು ಪ್ರಧಾನಿ ಶಿಫಾರಸು ಮಾಡುತ್ತಾರೆ. ಅದರ ನಂತರ ರಾಷ್ಟ್ರಪತಿ ಅದನ್ನು ಪ್ರಕಟಿಸುತ್ತಾರೆ. ಮುಂದೆ ಅವರು ಪುರಸ್ಕಾರ ನೀಡಿ, ಗೌರವಿಸುತ್ತಾರೆ. ಅನನ್ಯ ಸಾಧನೆಗಳನ್ನು ಮಾಡಿರುವಂತಹ ವ್ಯಕ್ತಿಯ ಹೆಸರನ್ನು ಭಾರತ ರತ್ನ ಪುರಸ್ಕಾರ, ಗೌರವಕ್ಕೆ ಶಿಫಾರಸು ಮಾಡಲಾಗುತ್ತದೆ. ಇದರಲ್ಲಿ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಗಾಯಕಿ ಲತಾ ಮಂಗೇಶ್ಕರ್ ಮತ್ತು ಭೂಪೇನ್ ಹಜಾರಿಕಾ ಸೇರಿದಂತೆ ಹತ್ತಾರು ಹೆಸರುಗಳಿವೆ.
ಭಾರತ ರತ್ನ ಪುರಸ್ಕೃತರು ಏನು ಪಡೆಯುತ್ತಾರೆ?
ರಾಷ್ಟ್ರಪತಿಗಳು ಪುರಸ್ಕೃತರಿಗೆ ಪ್ರಮಾಣ ಪತ್ರ ಮತ್ತು ಪದಕವನ್ನು ನೀಡಿ ಗೌರವಿಸುತ್ತಾರೆ. ಅದರ ಮೇಲೆ ಅವರ ಸಹಿ ಇರುತ್ತದೆ. ಪ್ರಮಾಣಪತ್ರವನ್ನು ಸನ್ನದು ಎಂದು ಕರೆಯಲಾಗುತ್ತದೆ. ಪದಕವು ಅರಳಿ ಮರದ ಎಲೆಯ ಆಕಾರದಲ್ಲಿರುತ್ತದೆ. ಪ್ಲಾಟಿನಂ ಪದಕದಲ್ಲಿ ಒಂದು ಬದಿಯಲ್ಲಿ ಹೊಳೆಯುವ ಸೂರ್ಯ ಮತ್ತೊಂದು ಭಾಗದಲ್ಲಿ ಅಶೋಕ ಸ್ತಂಭ ಇರುತ್ತದೆ. ಸರ್ಕಾರದ ಮಾಹಿತಿಯ ಪ್ರಕಾರ ಭಾರತ ರತ್ನ ಪದಕ ಮತ್ತು ಅದರ ಬಾಕ್ಸ್ ಸೇರಿದಂತೆ ಒಟ್ಟು ವೆಚ್ಚ 2,57,732 ರೂಪಾಯಿಯದ್ದಾಗಿರುತ್ತದೆ.
ಈ ಪದಕದ ಗೌರವದೊಂದಿಗೆ ಬೇರೆ ಯಾವುದೇ ರೀತಿಯ ಹಣವನ್ನು ನೀಡುವುದಿಲ್ಲ. ಆದರೆ, ಪ್ರತಿ ವರ್ಷ ಭಾರತ ರತ್ನ ಘೋಷಿಸಬೇಕು ಎಂಬುದು ಕಡ್ಡಾಯವಿಲ್ಲ. ಇದನ್ನು 1954 ರಲ್ಲಿ ಪ್ರಾರಂಭಿಸಿದಾಗ, ಅದನ್ನು ಜೀವಂತವಿರುವರಿಗೆ ಮಾತ್ರ ನೀಡಲಾಯಿತು. ಆದರೆ ಮರು ವರ್ಷ ಅಂದರೆ 1955 ರಲ್ಲಿ ಅದನ್ನು ಮರಣೋತ್ತರವಾಗಿ ನೀಡಲು ಪ್ರಾರಂಭಿಸಲಾಯಿತು. ಒಂದು ವರ್ಷದಲ್ಲಿ 3ಕ್ಕಿಂತ ಹೆಚ್ಚು ಭಾರತ ರತ್ನಗಳನ್ನು ನೀಡಲಾಗುವುದಿಲ್ಲ.
ಇದನ್ನೂ ಓದಿ: ಮೆಡಿಕಲ್ ಕಾಲೇಜು ಪ್ರಿನ್ಸಿಪಾಲ್ ವಿಆರ್‌ಎಸ್ ತೆಗೆದುಕೊಂಡರು.. ವಿದ್ಯಾರ್ಥಿಗಳು ಮಾಡಿದ್ದೇನು ಗೊತ್ತಾ?
ಸಾಮಾನ್ಯವಾಗಿ ಈ ಗೌರವವನ್ನು ಜನವರಿ 26 ರಂದು ನೀಡಲಾಗುತ್ತದೆ, ಇದಕ್ಕೂ ಮೊದಲು ಕೇಂದ್ರ ಸರ್ಕಾರವು ಗೌರವಿಸಬೇಕಾದ ವ್ಯಕ್ತಿಯ ಹೆಸರನ್ನು ಪ್ರಕಟಿಸುತ್ತದೆ. ಇದಕ್ಕಾಗಿ ನಿಯಮಿತವಾಗಿ ಗೆಜೆಟ್ ಮೂಲಕ ಅಧಿಸೂಚನೆ ಹೊರಡಿಸಲಾಗುತ್ತದೆ. ಈ ಹಿಂದೆ, ಈ ಗೌರವವನ್ನು 2019 ರಲ್ಲಿ ಖ್ಯಾತ ಗಾಯಕ ಮತ್ತು ಸಂಗೀತಗಾರ ಭೂಪೇನ್ ಹಜಾರಿಕಾ ಅವರಿಗೆ ನೀಡಲಾಯಿತು.
ಭಾರತ ರತ್ನ ಪುರಸ್ಕೃತರಿಗೆ ವಿವಿಐಪಿ ಶ್ರೇಣಿ
ಈ ಗೌರವ ಪಡೆಯುವ ವ್ಯಕ್ತಿ ಹಲವು ಸೌಲಭ್ಯಗಳನ್ನು ಪಡೆಯುತ್ತಾರೆ. ಇದು ವಿವಿಐಪಿ ಶ್ರೇಣಿಯ ಜನರಿಗೆ ನೀಡುವ ಸೌಲಭ್ಯಗಳ ಮಾದರಿಯಲ್ಲಿರುತ್ತದೆ. ಅವರಿಗೆ ಸರ್ಕಾರದಿಂದ ಇನ್ನೂ ಅನೇಕ ಸೌಲಭ್ಯಗಳು ಸಿಗುತ್ತವೆ. ಉದಾಹರಣೆಗೆ, ರೈಲ್ವೆಯಿಂದ ಉಚಿತ ಪ್ರಯಾಣ ಸೌಲಭ್ಯ ಲಭ್ಯವಿದೆ. ಕೇಂದ್ರ ಸರ್ಕಾರವು ಅವರಿಗೆ ವಾರೆಂಟ್ ಆಫ್ ಪ್ರೆಸಿಡೆನ್ಸ್ ಸ್ಥಾನ ನೀಡುತ್ತದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು, ಮಾಜಿ ರಾಷ್ಟ್ರಪತಿ, ಉಪಪ್ರಧಾನಿ, ಮುಖ್ಯ ನ್ಯಾಯಮೂರ್ತಿ, ಲೋಕಸಭೆ ಸ್ಪೀಕರ್, ಸಂಪುಟ ಸಚಿವರು, ಮುಖ್ಯಮಂತ್ರಿ, ಮಾಜಿ ಪ್ರಧಾನಿ ಮತ್ತು ಸಂಸತ್ತಿನ ವಿರೋಧ ಪಕ್ಷದ ನಾಯಕರಿಂದ ಸ್ವೀಕರಿಸಲ್ಪಡುವ ಪ್ರೋಟೋಕಾಲ್ ಇದಾಗಿದೆ.
ವಾರೆಂಟ್ ಆಫ್ ಪ್ರೆಸಿಡೆನ್ಸ್ ಪ್ರೋಟೋಕಾಲ್ ಪ್ರಕಾರ ಸರ್ಕಾರಿ ಕಾರ್ಯಕ್ರಮಗಳಲ್ಲಿ ಯಾರು ಮುಂದೆ ಮತ್ತು ಯಾರು ಹಿಂದೆ ಕುಳಿತುಕೊಳ್ಳಬೇಕು ಎಂದು ನಿರ್ಧರಿಸಲಾಗುತ್ತದೆ. ಇದಲ್ಲದೇ ಅವರು ರಾಜತಾಂತ್ರಿಕ ಪಾಸ್‌ಪೋರ್ಟ್ ಪಡೆಯುತ್ತಾರೆ. ಯಾವುದೇ ರಾಜ್ಯದ ಸರ್ಕಾರಿ ಅತಿಥಿ ಗೃಹದಲ್ಲಿ ತಂಗುವ ಸೌಲಭ್ಯವಿದೆ. ಅವರಿಗೆ ಆಯಾ ರಾಜ್ಯದಲ್ಲಿ ಸಾರಿಗೆ, ಆಹಾರ ಮತ್ತು ವಸತಿ ಸೌಲಭ್ಯಗಳನ್ನು ಒದಗಿಸಲಾಗಿದೆ.
ಈ ಗೌರವವನ್ನು ಸ್ವೀಕರಿಸುವವರು ಭಾರತೀಯ ರಾಜತಾಂತ್ರಿಕರು ಮತ್ತು ಉನ್ನತ ಶ್ರೇಣಿಯ ಸರ್ಕಾರಿ ಅಧಿಕಾರಿಗಳಿಗೆ ನೀಡಲಾಗುವ ಕುಂಕುಮ ಬಣ್ಣದ (ಮರೂನ್) ಕವರ್ನೊಂದಿಗೆ ರಾಜತಾಂತ್ರಿಕ ಪಾಸ್ಪೋರ್ಟ್ ಅನ್ನು ಪಡೆಯುತ್ತಾರೆ. ಇದರೊಂದಿಗೆ ಜೀವನ ಪರ್ಯಂತ ಉಚಿತ ವಿಮಾನ ಪ್ರಯಾಣದ ಸೌಲಭ್ಯ ಸಿಗುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:05 pm, Wed, 24 January 24