Population Control: ಜನಸಂಖ್ಯಾ ಹೆಚ್ಚಳ ತಡೆಯಲು ಒಪ್ಪಿದ ಮುಸ್ಲಿಂ ಮುಖಂಡರು; ಅಸ್ಸಾಂನಲ್ಲಿ ಅಭಿವೃದ್ಧಿಯ ಹೊಸ ಪಯಣದ ನಿರೀಕ್ಷೆ

| Updated By: shruti hegde

Updated on: Jul 05, 2021 | 9:31 AM

ತಮ್ಮನ್ನು ಅಲ್ಪಸಂಖ್ಯಾತರೆಂದು ಕರೆಯಲ್ಪಡುವುದಕ್ಕಿಂತ ಅಸ್ಸಾಂ ನಾಗರಿಕರೆಂದು ಕರೆಯಬೇಕು ಎಂದು ಸಹ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಭೇಟಿ ಮಾಡಿದ ಮುಖಂಡರು ತಿಳಿಸಿದ್ದಾರೆ ಎಂದು ಹೇಳಲಾಗಿದೆ.

Population Control: ಜನಸಂಖ್ಯಾ ಹೆಚ್ಚಳ ತಡೆಯಲು ಒಪ್ಪಿದ ಮುಸ್ಲಿಂ ಮುಖಂಡರು; ಅಸ್ಸಾಂನಲ್ಲಿ ಅಭಿವೃದ್ಧಿಯ ಹೊಸ ಪಯಣದ ನಿರೀಕ್ಷೆ
ಹಿಮಂತ ಬಿಸ್ವ ಶರ್ಮಾ
Follow us on

ಜನಸಂಖ್ಯೆಯ ತೀವ್ರ ಬೆಳವಣಿಗೆ ರಾಜ್ಯದ ಅಭಿವೃದ್ಧಿಗೆ ತೊಡಕಾಗಿದೆ ಎಂಬ ಅಭಿಪ್ರಾಯಕ್ಕೆ ಮುಸ್ಲಿಂ ಸಮುದಾಯದ 150 ಪ್ರಮುಖ ಮುಖಂಡರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ತಿಳಿಸಿದ್ದಾರೆ. ನಿನ್ನೆ (ಜುಲೈ 4) ವಿವಿಧ ಕ್ಷೇತ್ರಗಳ ಅತ್ಯಂತ ಪ್ರಮುಖ ಮುಸ್ಲಿಂ ಮುಖಂಡರನ್ನು ಭೇಟಿ ಮಾಡಿ ಚರ್ಚಿಸಿದ್ದಾಗಿ ತಿಳಿಸಿರುವ ಅವರು, ರಾಜ್ಯವನ್ನು ಅಭಿವೃದ್ಧಿಯ ದಿಶೆಯಲ್ಲಿ ಕೊಂಡೊಯ್ಯಲು ಮುಸ್ಲಿಂ ಸಮುದಾಯದ ಸದಸ್ಯರನ್ನು ಒಳಗೊಂಡ ಎಂಟು ಗುಂಪುಗಳನ್ನು ರಚಿಸಲಾಗುವುದು. ಈ ಗುಂಪುಗಳು ಅಭಿವೃದ್ಧಿಯ ಕುರಿತು ಸಲಹೆ ಸೂಚನೆಗಳನ್ನು ನೀಡಲಿದೆ ಎಂದು ಅವರು ತಿಳಿಸಿದರು.

ಬುದ್ಧಿಜೀವಿಗಳು, ಬರಹಗಾರರು, ವೈದ್ಯರು, ಕಲಾವಿದರು, ಇತಿಹಾಸಕಾರರು, ಪ್ರಾಧ್ಯಾಪಕರು ಮುಂತಾದ 150 ವ್ಯಕ್ತಿತ್ವಗಳನ್ನು ಭೇಟಿ ಮಾಡಿದ್ದೇನೆ. ಅಸ್ಸಾಂನ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳನ್ನು ಈ ಎಲ್ಲ ಮುಖಂಡರ ಬಳಿ ಚರ್ಚಿಸಿದ್ದೇನೆ. ರಾಜ್ಯದ ಕೆಲವು ಭಾಗಗಳಲ್ಲಿ ಹೆಚ್ಚಿರುವ ಜನಸಂಖ್ಯಾ ಸ್ಫೋಟ ಅಭಿವೃದ್ಧಿಗೆ ತೊಡಕನ್ನುಂಟು ಮಾಡುತ್ತಿದೆ ಎಂಬುದನ್ನು ಎಲ್ಲರೂ ಒಪ್ಪಿದ್ದಾರೆ. ದೇಶದ ಅತ್ಯಂತ ಪ್ರಮುಖ 5 ರಾಜ್ಯಗಳಲ್ಲಿ ಅಸ್ಸಾಂ ಸ್ಥಾನ ಗಿಟ್ಟಿಸಿಕೊಳ್ಳಬೇಕಿದ್ದಲ್ಲಿ ಜನಸಂಖ್ಯಾ ಸ್ಫೋಟವನ್ನು ತಡೆಯಲೇಬೇಕಿದೆ ಎಂದು ಅವರು ವ್ಯಾಖ್ಯಾನಿಸಿದರು. ಜನಸಂಖ್ಯಾ ಸ್ಫೋಟವನ್ನು ತಡೆಯಲು ಸರ್ಕಾರಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಇಂದು ಭೇಟಿ ಮಾಡಿದ ಎಲ್ಲರೂ ಒಪ್ಪಿದ್ದಾರೆ ಎಂದು ಸಹ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಜನಸಂಖ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ, ಶಿಕ್ಷಣ, ಕೌಶಲಾಭಿವೃದ್ಧಿ, ಮಹಿಳಾ ಸಬಲೀಕರಣದಂತಹ ಅನೇಕ ವಿಷಯಗಳಲ್ಲಿ ಈಗಾಗಲೇ ರಚಿಸಲಾಗಿರುವ 8 ಗುಂಪುಗಳು ಮುಂದಿನ ಮೂರು ತಿಂಗಳ ಅವಧಿಯಲ್ಲಿ ವರದಿ ಸಲ್ಲಿಸಲಿವೆ. ಅಲ್ಲದೇ, ತಮ್ಮನ್ನು ಅಲ್ಪಸಂಖ್ಯಾತರೆಂದು ಕರೆಯಲ್ಪಡುವುದಕ್ಕಿಂತ ಅಸ್ಸಾಂ ನಾಗರಿಕರೆಂದು ಕರೆಯಬೇಕು ಎಂದು ಸಹ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಭೇಟಿ ಮಾಡಿದ ಮುಖಂಡರು ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ಒಳ್ಳೆಯ ಕುಟುಂಬ ಯೋಜನೆ ಅಳವಡಿಸಿಕೊಳ್ಳಲು ಈ ಮುನ್ನವೂ ಸಲಹೆ ನೀಡಿದ್ದ ಹಿಮಂತ ಬಿಸ್ವ ಶರ್ಮಾ

ವಲಸೆ ಬಂದ ಮುಸ್ಲಿಮರು ಕುಟುಂಬ ಯೋಜನೆಗಳನ್ನು ಅನುಸರಿಸಿದರೆ ಮತ್ತು ಅವರ ಜನಸಂಖ್ಯೆಯನ್ನು ನಿಯಂತ್ರಿಸಿದರೆ ಭೂ ಅತಿಕ್ರಮಣದಂತಹ ಸಾಮಾಜಿಕ ಭೀತಿಗಳನ್ನು ಪರಿಹರಿಸಬಹುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ. ಜನಸಂಖ್ಯಾ ಸ್ಫೋಟ ಮುಂದುವರಿದರೆ, ಒಂದು ದಿನ ಕಾಮಖ್ಯ ದೇವಾಲಯದ ಭೂಮಿಯನ್ನು ಸಹ ಅತಿಕ್ರಮಿಸಲಾಗುವುದು. ನನ್ನ ಮನೆ ಕೂಡ ಅತಿಕ್ರಮಣಗೊಳ್ಳುತ್ತದೆ ಎಂದು ಅವರು ರಾಜ್ಯದ ಪ್ರಸಿದ್ಧ ಯಾತ್ರಾ ಕೇಂದ್ರವನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದರು.

ಕೇವಲ ಒಂದು ತಿಂಗಳು ಅಧಿಕಾರ ಪೂರೈಸಿದ ಮುಖ್ಯಮಂತ್ರಿ ಶರ್ಮಾ ಗುವಾಹಟಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದು, ಅತಿಕ್ರಮಣ ವಿರೋಧಿ ಡ್ರೈವ್‌ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಸ್ಥಳಾಂತರಗೊಂಡ ಜನರು ವಲಸೆ ಬಂದ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದಿದ್ದರು.

ಈ ಬಗ್ಗೆ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ನಾವು ನಿಧಾನವಾಗಿ ಸರ್ಕಾರಿ ಯೋಜನೆಗಳಿಗೂ ಜನಸಂಖ್ಯಾ ಮಾನದಂಡವನ್ನು ಅನ್ವಯಿಸಲು ನಿರ್ಧರಿಸಿದ್ದೇವೆ. ಹಾಗಂತ ಕೆಲವು ಯೋಜನೆಗಳಿಗೆ ಎರಡು ಮಕ್ಕಳ ನೀತಿಯನ್ನು ಅನ್ವಯ ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ ಶಾಲಾ-ಕಾಲೇಜುಗಳಿಗೆ ಉಚಿತ ಪ್ರವೇಶ, ಪ್ರಧಾನಮಂತ್ರಿ ಆವಾಸ್​ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಡುವಂಥ ಯೋಜನೆಗಳಲ್ಲಿ ಎರಡು ಮಕ್ಕಳ ನೀತಿಯನ್ನು ಅಳವಡಿಸುವುದಿಲ್ಲ. ಇವೆಲ್ಲ ಯಾವಾಗಲೂ ಎಲ್ಲರಿಗೂ ಅನ್ವಯ ಆಗುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಕೆಲವು ಆಯ್ದ ಯೋಜನೆಗಳಡಿ ಸೌಕರ್ಯ ಪಡೆಯಬೇಕೆಂದರೆ ಅವರು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಬಾರದು. ಆ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುವುದಾಗಿ ತಿಳಿಸಿದ್ದರು.

ಇದನ್ನೂ ಓದಿ:  ಇನ್ನಿಲ್ಲ ಜನಸಂಖ್ಯಾ ಸ್ಫೋಟ; ಶುರುವಾಗಲಿದೆ ಜನಸಂಖ್ಯಾ ಕುಸಿತ? ಜಾಗತಿಕ ಮಟ್ಟದಲ್ಲಿ ಏನೇನು ಬದಲಾವಣೆ? ಇಲ್ಲಿದೆ ಸಂಪೂರ್ಣ ವಿವರ

Population control: ಹೆಚ್ಚು ಜನಸಂಖ್ಯೆಯ ಉತ್ತರ ಪ್ರದೇಶದಲ್ಲಿ ಕಡಿಮೆ ಮಕ್ಕಳ ಹೊಂದಿದವರಿಗೆ ಮಾತ್ರವೇ ಸರ್ಕಾರಿ ಸೌಲಭ್ಯ ಪ್ರಾಪ್ತಿ!

(Assam CM Himanta Biswa Sharma meet 150 muslim community leaders to control population growth control)