ಕೊರೊನಾದಿಂದ ಗುಣಮುಖರಾದವರಲ್ಲಿ ಮೂಳೆಯಲ್ಲಿನ ಅಂಗಾಂಶ ಸಾಯುತ್ತಿರುವುದು ಪತ್ತೆ; ಮೂವರಲ್ಲಿ ಕಾಣಿಸಿದೆ ಅವ್ಯಾಸ್ಕ್ಯುಲರ್​ ನೆಕ್ರೋಸಿಸ್

Death of Bone Tissues: ಬ್ಲ್ಯಾಕ್​ ಫಂಗಸ್​ ಅಥವಾ ಮ್ಯೂಕೋರ್ಮೈಕೋಸಿಸ್​ ಮತ್ತು ಅವ್ಯಾಸ್ಕ್ಯುಲರ್​ ನೆಕ್ರೋಸಿಸ್​ ಸಮಸ್ಯೆಗೆ ಕಾರಣವಾಗುತ್ತಿರುವ ಸಾಮಾನ್ಯ ಅಂಶ ಸ್ಟಿರಾಯ್ಡ್​ ಬಳಕೆ ಎನ್ನುವುದು ಗೊತ್ತಾಗಿದ್ದು, ಇದು ಕೊವಿಡ್​ 19ನ ದೀರ್ಘಕಾಲಿಕ ಸಮಸ್ಯೆಯ ಭಾಗವಾಗಿರಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕೊರೊನಾದಿಂದ ಗುಣಮುಖರಾದವರಲ್ಲಿ ಮೂಳೆಯಲ್ಲಿನ ಅಂಗಾಂಶ ಸಾಯುತ್ತಿರುವುದು ಪತ್ತೆ; ಮೂವರಲ್ಲಿ ಕಾಣಿಸಿದೆ ಅವ್ಯಾಸ್ಕ್ಯುಲರ್​ ನೆಕ್ರೋಸಿಸ್
ಸಾಂಕೇತಿಕ ಚಿತ್ರ
TV9kannada Web Team

| Edited By: Skanda

Jul 05, 2021 | 10:13 AM

ದೆಹಲಿ: ಕಳೆದ ಒಂದೂವರೆ ವರ್ಷ ಅವಧಿಯಲ್ಲಿ ಕೊರೊನಾದಿಂದ ಅನುಭವಿಸಿರುವ ಕಷ್ಟ ಒಂದೆರಡಲ್ಲ. ಇನ್ನೇನು ಕೊರೊನಾ ಮುಗಿಯಿತು ಎನ್ನುವಷ್ಟರಲ್ಲಿ ಮತ್ತೆ ರೂಪಾಂತರ ಹೊಂದಿ ಎರಡನೇ ಅಲೆ ಮೂಲಕ ಬಂದಪ್ಪಳಿಸಿದ ವೈರಾಣು ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಈಗ ಕಂಡುಬಂದಿರುವ ಡೆಲ್ಟಾ ಮಾದರಿಯ ವೈರಾಣು ಉಳಿದೆಲ್ಲವಕ್ಕಿಂತಲೂ ಅಪಾಯಕಾರಿ ಎಂಬ ಮಾತು ತಜ್ಞರ ವಲಯದಿಂದ ಕೇಳಿ ಬಂದಿರುವುದು ಹಾಗೂ ಸಂಭವನೀಯ ಮೂರನೇ ಅಲೆ ಬಗ್ಗೆ ಎಚ್ಚರಿಕೆ ನೀಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇದರ ಮಧ್ಯೆ, ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಬ್ಲ್ಯಾಕ್​ ಫಂಗಸ್, ಮಿಸ್​ ಸಿ ಕಾಣಿಸಿಕೊಂಡು ಸಾಕಷ್ಟು ಅವಾಂತರಗಳನ್ನೂ ಹುಟ್ಟುಹಾಕಿದೆ. ಇದೀಗ ಕೊರೊನಾ ನಂತರ ಮತ್ತೊಂದು ಸಮಸ್ಯೆ ಕಾಣಿಸಿಕೊಳ್ಳಲಾರಂಭಿಸಿದ್ದು ಮೂಳೆಯಲ್ಲಿನ ಅಂಗಾಂಶಗಳೇ ಸಾಯಲಾರಂಭಿಸಿವೆ.

Avascular Necrosis ಅಥವಾ Death of Bone Tissues ಎಂದು ಕರೆಯಲ್ಪಡುವ ಈ ಸಮಸ್ಯೆ ಇದೀಗ ಮುಂಬೈ ಆಸ್ಪತ್ರೆಯೊಂದರಲ್ಲಿ ಮೂವರು ರೋಗಿಗಳಿಗೆ ಕಾಣಿಸಿಕೊಂಡಿದೆ. ಆ ಮೂವರು ಕೂಡಾ ಕೊರೊನಾದಿಂದ ಚೇತರಿಸಿಕೊಂಡವರಾಗಿದ್ದು, 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ತಿಳಿದುಬಂದಿದೆ. ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಿದ ಎರಡು ತಿಂಗಳ ನಂತರ Avascular Necrosis ಸಮಸ್ಯೆ ಪತ್ತೆಯಾಗಿದೆ ಎಂದು ಮಹಿಮ್​ನಲ್ಲಿರುವ ಹಿಂದುಜಾ ಆಸ್ಪತ್ರೆಯ ಡಾ.ಸಂಜಯ್​ ಅಗರ್​ವಾಲಾ ತಿಳಿಸಿದ್ದಾರೆ.

ಬ್ಲ್ಯಾಕ್​ ಫಂಗಸ್​ ಅಥವಾ ಮ್ಯೂಕೋರ್ಮೈಕೋಸಿಸ್​ ಮತ್ತು ಅವ್ಯಾಸ್ಕ್ಯುಲರ್​ ನೆಕ್ರೋಸಿಸ್​ ಸಮಸ್ಯೆಗೆ ಕಾರಣವಾಗುತ್ತಿರುವ ಸಾಮಾನ್ಯ ಅಂಶ ಸ್ಟಿರಾಯ್ಡ್​ ಬಳಕೆ ಎನ್ನುವುದು ಗೊತ್ತಾಗಿದ್ದು, ಇದು ಕೊವಿಡ್​ 19ನ ದೀರ್ಘಕಾಲಿಕ ಸಮಸ್ಯೆಯ ಭಾಗವಾಗಿರಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಎರಡು ದಿನಗಳ ಹಿಂದೆ ವೈದ್ಯಕೀಯ ನಿಯತಕಾಲಿಕೆಯೊಂದರಲ್ಲಿ ಅಧ್ಯಯನದ ವರದಿಯನ್ನು ಪ್ರಕಟಿಸಲಾಗಿದ್ದು, ಸ್ಟಿರಾಯ್ಡ್​ನ ಅತಿಯಾದ ಬಳಕೆ ಸದರಿ ಸಮಸ್ಯೆಗೆ ಹಾದಿಯಾಗುತ್ತಿದೆ ಎಂಬ ಅಂಶವನ್ನು ತಿಳಿಸಲಾಗಿದೆ.

ಇನ್ನೊಂದೆಡೆ, ಮ್ಯೂಕೋರ್ಮೈಕೋಸಿಸ್​ ಸಮಸ್ಯೆಗೆ ತುತ್ತಾಗಿ ಕೊಯಂಬತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ 264 ರೋಗಿಗಳ ಪೈಕಿ, 30 ಮಂದಿ ಒಂದು ಕಣ್ಣಿನ ದೃಷ್ಟಿಯನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ. ಅವರೆಲ್ಲರಿಗೂ ಎಂಡೋಸ್ಕೋಪಿ ಮಾಡಲಾಗಿದ್ದು, 110 ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಯೂ ನಡೆದಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಸದ್ಯ, ಮೂವರು ರೋಗಿಗಳಲ್ಲಿ ಕಾಣಿಸಿಕೊಂಡಿರುವ ಅವ್ಯಾಸ್ಕ್ಯುಲರ್​ ನೆಕ್ರೋಸಿಸ್​ ಸಮಸ್ಯೆ ಯಾವ ಮಟ್ಟಿಗೆ ಅಪಾಯಕಾರಿ. ಯಾವ ವಯೋಮಾನದವರಿಗೆ ತೊಂದರೆ ನೀಡಲಿದೆ ಎನ್ನುವ ಬಗ್ಗೆ ಹೆಚ್ಚಿನ ವಿವರ ಸಿಕ್ಕಿಲ್ಲ. ಆದರೆ, ಸ್ಟಿರಾಯ್ಡ್​ ಬಳಕೆಯೇ ಸಮಸ್ಯೆಗೆ ಮೂಲ ಎನ್ನುತ್ತಿರುವ ತಜ್ಞರು ಅದರ ಬಳಕೆಯಲ್ಲಿ ನಿಗಾ ವಹಿಸಬೇಕೆಂದು ಅಭಿಪ್ರಾಯಪಡುತ್ತಿದ್ದಾರೆ.

ಇದನ್ನೂ ಓದಿ: ಕೊರೊನಾ ಲಸಿಕೆ ಪಡೆಯದವರ ದೇಹದಲ್ಲೇ ವೈರಾಣು ರೂಪಾಂತರ ಸಾಧ್ಯತೆ: ತಜ್ಞರ ಎಚ್ಚರಿಕೆ 

MIS-C Cases: ನಿರ್ಲಕ್ಷಿಸಿದರೆ ಮಕ್ಕಳ ಅಂಗಾಂಗಕ್ಕೆ ಮಾರಕ ಮಿಸ್​ ಸಿ; ಕೊರೊನಾದಿಂದ ಗುಣಮುಖರಾದ ಮಕ್ಕಳಲ್ಲಿ ಈ ಲಕ್ಷಣಗಳಿದ್ದರೆ ನಿಗಾ ವಹಿಸಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada