ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ( Flood)ಪರಿಸ್ಥಿತಿ ತುಂಬಾ ಗಂಭೀರವಾಗಿದ್ದು, 31 ಜಿಲ್ಲೆಗಳಲ್ಲಿ ಸುಮಾರು 6.80 ಲಕ್ಷ ಮಂದಿ ಪ್ರವಾಹದಿಂದ ತತ್ತರಿಸಿದ್ದಾರೆ. ನಾಗಾಂವ್, ಹೊಜೈ, ಕ್ಯಾಚಾರ್, ದರ್ರಾಂಗ್, ಮೋರಿಗಾಂವ್ ಮತ್ತು ಕರೀಮ್‌ಗಂಜ್ ಜಿಲ್ಲೆಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಗಳ ಪ್ರಕಾರ, ನಾಗಾಂವ್ ಜಿಲ್ಲೆಯಲ್ಲಿ ಸುಮಾರು 3.40 ಲಕ್ಷ ಜನರು, ನಂತರ ಕ್ಯಾಚಾರ್ ಜಿಲ್ಲೆಯಲ್ಲಿ 1.78 ಲಕ್ಷ, ಹೋಜೈ 70,233, ದರ್ಂಗ್ ಜಿಲ್ಲೆಯಲ್ಲಿ 44,382, ಮೊರಿಗಾಂವ್ ಜಿಲ್ಲೆಯಲ್ಲಿ 17,776 ಮತ್ತು ಕರೀಂಗಂಜ್ ಜಿಲ್ಲೆಯಲ್ಲಿ 16,382 ಜನರು ಹಾನಿಗೊಳಗಾಗಿದ್ದಾರೆ.
ಕ್ಯಾಚಾರ್, ಹೊಜೈ ಮತ್ತು ನಾಗಾಂವ್ ಜಿಲ್ಲೆಗಳಲ್ಲಿ ಪ್ರವಾಹದಲ್ಲಿ ಮುಳುಗಿ ನಾಲ್ವರು ಶುಕ್ರವಾರ ಸಾವನ್ನಪ್ಪಿದ್ದಾರೆ. ಪ್ರವಾಹ ಮತ್ತು ಭೂಕುಸಿತದಲ್ಲಿ ಸತ್ತವರ ಸಂಖ್ಯೆ 18 ಕ್ಕೆ ಏರಿದೆ. ವರದಿಯ ಪ್ರಕಾರ, 93562.40 ಹೆಕ್ಟೇರ್ ಬೆಳೆ ಭೂಮಿ ಮತ್ತು 2,248 ಹಳ್ಳಿಗಳು ಇನ್ನೂ ನೀರಿನಲ್ಲೇ ಮುಳುಗಿವೆ. ಒಟ್ಟು 74,907 ಪ್ರವಾಹ ಪೀಡಿತ ಜನರು ಪ್ರಸ್ತುತ ಜಿಲ್ಲಾಡಳಿತ ಸ್ಥಾಪಿಸಿರುವ 282 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಪ್ರವಾಹದಿಂದ ತತ್ತರಿಸಿರುವ ಅಸ್ಸಾಂನ ಜಮುನಾಮುಖ್ ಜಿಲ್ಲೆಯ ಎರಡು ಗ್ರಾಮಗಳ 500 ಕ್ಕೂ ಹೆಚ್ಚು ಕುಟುಂಬಗಳು ರೈಲ್ವೇ ಹಳಿಗಳ ಮೇಲೆ ವಾಸಿಸುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರೈಲ್ವೆ ಹಳಿಯು ಪ್ರವಾಹದಲ್ಲಿ ಮುಳುಗದ ಏಕೈಕ ಎತ್ತರದ ಪ್ರದೇಶವಾಗಿದೆ. ಚಾಂಗ್ಜುರೈ ಹಾಗೂ ಪಾಟಿಯಾ ಪಥರ್ ಗ್ರಾಮದ ಜನರು ಪ್ರವಾಹದಲ್ಲಿ ತಮ್ಮಲ್ಲಿರುವ ಎಲ್ಲವನ್ನೂ ಕಳೆದುಕೊಂಡು ಕಂಗಾಲಾಗಿದ್ದಾರೆ.
ಟಾರ್ಪಾಲಿನ್ ಶೀಟ್‌ಗಳಿಂದ ಮಾಡಿದ ತಾತ್ಕಾಲಿಕ ಡೇರೆಗಳ ಅಡಿಯಲ್ಲಿ ಆಶ್ರಯ ಪಡೆದಿರುವ ಗ್ರಾಮಸ್ಥರು, ಕಳೆದ ಐದು ದಿನಗಳಿಂದ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತದಿಂದ ಹೆಚ್ಚಿನ ಸಹಾಯ ಸಿಕ್ಕಿಲ್ಲ ಎಂದು ಜನರು ದೂರಿದ್ದಾರೆ.
ಬೊರ್ಡೊಲೊಯ್ ಅವರ ಕುಟುಂಬವೂ ಚಾಂಗ್ಜುರೈ ಗ್ರಾಮದಲ್ಲಿ ಮನೆ ಕಳೆದುಕೊಂಡು ಟಾರ್ಪಾಲಿನ್ ಶೀಟ್‌ನಲ್ಲಿ ವಾಸಿಸುತ್ತಿದೆ.
ಇದೇ ವೇಳೆ, ಅಸ್ಸಾಂನ ದಿಮಾ ಹಸೋ ಎಂಬ ಜಿಲ್ಲೆಯಲ್ಲಿ ರಸ್ತೆ ಸಂಪರ್ಕ ಕಡಿದು ಹೋಗಿದೆ. ಹಾಫ್ಲಾಂಗ್ ಎಂಬ ಜಿಲ್ಲೆಯ ಪ್ರಮುಖ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಡಿದುಹೋಗಿದೆ. ಆ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಭೂಕುಸಿತ ಉಂಟಾಗಿದೆ. ಹೀಗಾಗಿ, ಅಲ್ಲಿಗೆ ಸರಾಗವಾಗಿ ವಾಹನ ಸಂಚಾರಕ್ಕೆ ಮತ್ತೆ ರಸ್ತೆಗಳನ್ನು ಪೂರ್ಣ ಪ್ರಮಾಣ ನಿರ್ಮಾಣ ಮಾಡಲು ಬರೋಬ್ಬರಿ ಆರು ತಿಂಗಳು ಬೇಕಾದೀತು ಎಂಬ ಅಂದಾಜನ್ನು ಜಿಲ್ಲಾಡಳಿತ ವ್ಯಕ್ತಪಡಿಸಿದೆ. ಅಲ್ಲಿ ಈಗ ಕುಡಿವ ನೀರಿಗೂ ತತ್ವಾರ ಉಂಟಾಗಿದೆ.
ಕೊರತೆ: ಅಸ್ಸಾಂನ ದಿಮಾ ಹಸೋ ಒಂದರಲ್ಲಿಯೇ ಪ್ರವಾಹದಿಂದ ಉಂಟಾಗಿರುವ ನಷ್ಟದ ಪ್ರಮಾಣವೇ ಒಂದು ಸಾವಿರ ಕೋಟಿ ರೂ. ಎಂದು ಸದ್ಯಕ್ಕೆ ಅಂದಾಜು ಮಾಡಲಾಗಿದೆ. ಭೂಕುಸಿತ ಉಂಟಾಗಿ, ರಸ್ತೆ ಸಂಪರ್ಕ ಕಡಿದು ಹೋಗಿರುವುದರಿಂದ ತೈಲೋತ್ಪನ್ನಗಳ ಕೊರತೆ ಉಂಟಾಗಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ 150 ರೂ. ವರೆಗೆ ಪಾವತಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ದೇಶದ ಇತರೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:32 pm, Sun, 22 May 22