50 ವರ್ಷಗಳ ಗಡಿ ವಿವಾದ ಬಗೆಹರಿಸಲು ಅಸ್ಸಾಂ, ಮೇಘಾಲಯ ಮುಖ್ಯಮಂತ್ರಿಗಳಿಂದ ಐತಿಹಾಸಿಕ ಒಪ್ಪಂದಕ್ಕೆ ಸಹಿ

5 ದಶಕಗಳ ಕಾಲದ ಗಡಿ ವಿವಾದವನ್ನು ಅಂತ್ಯಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿರುವುದು ಈಶಾನ್ಯ ಭಾಗಕ್ಕೆ ಐತಿಹಾಸಿಕ ದಿನವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

50 ವರ್ಷಗಳ ಗಡಿ ವಿವಾದ ಬಗೆಹರಿಸಲು ಅಸ್ಸಾಂ, ಮೇಘಾಲಯ ಮುಖ್ಯಮಂತ್ರಿಗಳಿಂದ ಐತಿಹಾಸಿಕ ಒಪ್ಪಂದಕ್ಕೆ ಸಹಿ
ಅಮಿತ್ ಶಾ ಅವರ ಸಮ್ಮುಖದಲ್ಲಿ ಗಡಿ ವಿವಾದದ ಇತ್ಯರ್ಥಕ್ಕೆ ಸಹಿ ಹಾಕಿದ ಅಸ್ಸಾಂ- ಮೇಘಾಲಯದ ಮುಖ್ಯಮಂತ್ರಿಗಳು
Edited By:

Updated on: Mar 29, 2022 | 4:37 PM

ನವದೆಹಲಿ: ಅಸ್ಸಾಂ (Assam) ಮತ್ತು ಮೇಘಾಲಯ (Meghalaya) ರಾಜ್ಯಗಳ ನಡುವೆ 50 ವರ್ಷಗಳಿಂದ ಬಾಕಿ ಇದ್ದ ಗಡಿ ವಿವಾದವನ್ನು ಬಗೆಹರಿಸಿಕೊಳ್ಳಲು ಇಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಮತ್ತು ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇಂದು ಮಧ್ಯಾಹ್ನ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಗೃಹ ಸಚಿವಾಲಯದ ಇತರ ಅಧಿಕಾರಿಗಳ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. 5 ದಶಕಗಳ ಕಾಲದ ವಿವಾದವನ್ನು ಅಂತ್ಯಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿರುವುದು ಈಶಾನ್ಯ ಭಾಗಕ್ಕೆ ಐತಿಹಾಸಿಕ ದಿನವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಅಸ್ಸಾಂ ಮತ್ತು ಮೇಘಾಲಯ ಎರಡೂ ಸರ್ಕಾರಗಳು ತಮ್ಮ ರಾಜ್ಯದ ಗಡಿಯುದ್ದಕ್ಕೂ 12 ಪ್ರದೇಶಗಳಲ್ಲಿ ಆರರಲ್ಲಿ ಗಡಿ ವಿವಾದಗಳನ್ನು ಪರಿಹರಿಸಲು ಕರಡು ನಿರ್ಣಯದೊಂದಿಗೆ ಬಂದಿವೆ. ಅಸ್ಸಾಂ ಮತ್ತು ಮೇಘಾಲಯ 885-ಕಿಮೀ ಉದ್ದದ ಗಡಿಯನ್ನು ಹಂಚಿಕೊಂಡಿವೆ. ಅಸ್ಸಾಂ-ಮೇಘಾಲಯ ಗಡಿ ವಿವಾದವು ಅಪ್ಪರ್ ತಾರಾಬರಿ, ಗಜಾಂಗ್ ಮೀಸಲು ಅರಣ್ಯ, ಹಾಹಿಂ, ಲಾಂಗ್‌ಪಿಹ್, ಬೋರ್ಡುವಾರ್, ಬೊಕ್ಲಾಪಾರಾ, ನೋಂಗ್‌ವಾ, ಮಾಟಮುರ್, ಖಾನಪಾರಾ-ಪಿಲಂಕಾಟಾ, ದೇಶ್‌ಡೆಮೊರಿಯಾ ಬ್ಲಾಕ್ I ಮತ್ತು ಬ್ಲಾಕ್ II, ಖಂಡುಲಿ ಮತ್ತು ರೆಟಾಚೆರಾ ಪ್ರದೇಶಗಳಾಗಿವೆ.

36.79 ಚದರ ಕಿಮೀ ಭೂಮಿಗೆ ಪ್ರಸ್ತಾವಿತ ಶಿಫಾರಸುಗಳ ಪ್ರಕಾರ, ಅಸ್ಸಾಂ 18.51 ಚದರ ಕಿಲೋಮೀಟರ್ ಅನ್ನು ಇಟ್ಟುಕೊಂಡು ಉಳಿದ 18.28 ಚದರ ಕಿಮೀಯನ್ನು ಮೇಘಾಲಯಕ್ಕೆ ನೀಡುತ್ತದೆ. ಅಸ್ಸಾಂ ಮತ್ತು ಮೇಘಾಲಯ ನಡುವಿನ ಒಪ್ಪಂದವು ಮಹತ್ವದ್ದಾಗಿದೆ. ಏಕೆಂದರೆ, ಎರಡು ರಾಜ್ಯಗಳ ನಡುವಿನ ಗಡಿ ವಿವಾದವು ಬಹಳ ಸಮಯದಿಂದ ಬಾಕಿ ಉಳಿದಿತ್ತು.

1972 ರಲ್ಲಿ ಅಸ್ಸಾಂನಿಂದ ಮೇಘಾಲಯವನ್ನು ಬೇರ್ಪಡಿಸಿದಾಗ ದೀರ್ಘಕಾಲದ ಭೂ ವಿವಾದವು ಹುಟ್ಟಿಕೊಂಡಿತು. ಹೊಸ ರಾಜ್ಯ ರಚನೆಯ ಆರಂಭಿಕ ಒಪ್ಪಂದದಲ್ಲಿ ಗಡಿಗಳ ಗಡಿರೇಖೆಯ ಭಿನ್ನಾಭಿಪ್ರಾಯದ ಪರಿಣಾಮವಾಗಿ ಗಡಿ ಸಮಸ್ಯೆಗಳು ಉದ್ಭವಿಸಿದವು.

ಇದನ್ನೂ ಓದಿ: ರಾಹುಲ್ ಗಾಂಧಿ ಟ್ವೀಟ್ ವಿರುದ್ಧ ಅಸ್ಸಾಂನಲ್ಲಿ ಸಾವಿರಾರು ದೂರುಗಳು ದಾಖಲು

ಮೇಘಾಲಯದಲ್ಲಿ ಕಾಂಗ್ರೆಸ್​​ಗೆ ಬಿಗ್​ ಶಾಕ್​; ಮಾಜಿ ಸಿಎಂ ಸೇರಿ 12 ಶಾಸಕರು ತೃಣಮೂಲ ಕಾಂಗ್ರೆಸ್​​ಗೆ