ಅಸ್ಸಾಂ-ಮಿಝೋರಾಂ ಗಡಿ ವಿವಾದ: ದುಷ್ಕರ್ಮಿಗಳ ಗುಂಡಿಗೆ 6 ಅಸ್ಸಾಂ ಪೊಲೀಸರ ಸಾವು
ಮಿಝೋರಾಂ ಗಡಿಯಿಂದ ಹಾರಿ ಬಂದ ಗುಂಡುಗಳಿಗೆ ಅಸ್ಸಾಂ ಪೊಲೀಸ್ ಪಡೆಯ 6 ಮಂದಿ ಮೃತಪಟ್ಟಿದ್ದಾರೆ. ಈ ವಿಷಯವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮವಂತ ಬಿಸ್ವಾ ಶರ್ಮಾ ಟ್ವೀಟ್ ಮೂಲಕ ದೃಢಪಡಿಸಿದ್ದಾರೆ.
ಗುವಾಹಟಿ: ಅಸ್ಸಾಂ-ಮಿಝೋರಾಂ ವಿವಾದ ಬಿಗಡಾಯಿಸಿದ್ದು, ಕಚಹಾರ್ ಜಿಲ್ಲೆಯಲ್ಲಿರು ಗಡಿ ರೇಖೆಯ ಬಳಿ ಎರಡೂ ರಾಜ್ಯಗಳ ನೂರಾರು ಜನರು ಜಮಾವಣೆಗೊಂಡು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಎರಡೂ ರಾಜ್ಯಗಳ ಕಂದಾಯ ಅಧಿಕಾರಿಗಳು ಮಾತುಕತೆ ಮೂಲಕ ಗಡಿ ನಿಷ್ಕರ್ಷೆ ಮಾಡಿಕೊಳ್ಳಲು ಮುಂದಾಗಿರುವಂತೆಯೇ ಮಿಝೋರಾಂ ಗಡಿಯಿಂದ ಹಾರಿ ಬಂದ ಗುಂಡುಗಳಿಗೆ ಅಸ್ಸಾಂ ಪೊಲೀಸ್ ಪಡೆಯ 6 ಮಂದಿ ಮೃತಪಟ್ಟರು. ಈ ವಿಷಯವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮವಂತ ಬಿಸ್ವಾ ಶರ್ಮಾ ಟ್ವೀಟ್ ಮೂಲಕ ದೃಢಪಡಿಸಿದ್ದಾರೆ.
ಕಲ್ಲು ತೂರಾಟ ಮತ್ತು ಗುಂಡು ಹಾರಾಟದಿಂದ ಅಸ್ಸಾಂ ಪೊಲೀಸ್ನ 50ಕ್ಕೂ ಹೆಚ್ಚು ಸಿಬ್ಬಂದಿ ಗಾಯಗೊಂಡಿದ್ದಾರೆ. ಕಚಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಚಂದ್ರಕಾಂತ್ ನಿಂಬಾಳ್ಕರ್ ಸಂಘರ್ಷ ಪ್ರದೇಶದ ಅರಣ್ಯವೊಂದರಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅವರಿಗೂ ಗಾಯಗಳಾಗಿವೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಅಸ್ಸಾಂನ ಸಾಂವಿಧಾನಾತ್ಮಕ ಗಡಿ ರಕ್ಷಿಸುವಾಗ ನಮ್ಮ ಪೊಲೀಸ್ ಪಡೆಯ ಆರು ಧೈರ್ಯಶಾಲಿ ಸಿಬ್ಬಂದಿ ಜೀವತ್ಯಾಗ ಮಾಡಿದ್ದಾರೆ ಎಂದು ತಿಳಿಸಲು ನೋವಾಗುತ್ತದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದು ಶರ್ಮಾ ಟ್ವೀಟ್ ಮಾಡಿದ್ದಾರೆ.
ಎರಡೂ ರಾಜ್ಯಗಳ ನಾಗರಿಕ ಅಧಿಕಾರಿಗಳು ಭಿನ್ನಮತ ಶಮನಕ್ಕಾಗಿ ಮಾತುಕತೆ ನಡೆಸುತ್ತಿದ್ದಾಗಲೇ ಮಿಝೊರಾಂ ಗಡಿಯಲ್ಲಿದ್ದ ಕೆಲ ದುಷ್ಕರ್ಮಿಗಳು ಇದ್ದಕ್ಕಿದ್ದಂತೆ ಗುಂಡು ಹಾರಿಸಲು ಆರಂಭಿಸಿದರು. ಘಟನೆಯಲ್ಲಿ ಎಷ್ಟು ಜನರು ಗಾಯಗೊಂಡಿದ್ದಾರೆ ಎಂದು ಈ ಕ್ಷಣದಲ್ಲಿ ಹೇಳಲು ಸಾಧ್ಯವಿಲ್ಲ. ಆದರೆ ಸುಮಾರು 50 ಮಂದಿ ಗಾಯಗೊಂಡಿರಬಹುದು. ನಮ್ಮ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಕಾಲಿಗೂ ಗುಂಡು ತಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.
ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಐಪಿಎಸ್ ಅಧಿಕಾರಿ ಮಾತನಾಡುತ್ತಿರುವಾಗಲೂ ಹಿನ್ನೆಲೆಯಲ್ಲಿ ಗುಂಡು ಹಾರಾಟದ ಸದ್ದು ಕೇಳಿಸುತ್ತಲೇ ಇತ್ತು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
I am deeply pained to inform that six brave jawans of @assampolice have sacrificed their lives while defending constitutional boundary of our state at the Assam-Mizoram border.
My heartfelt condolences to the bereaved families.
— Himanta Biswa Sarma (@himantabiswa) July 26, 2021
ಶಾಂತಿಯುತ ಪರಿಹಾರಕ್ಕೆ ಮಿಝೋರಾಂ ಒಲವು ಅಂತರರಾಜ್ಯ ಗಡಿ ವಿವಾದವನ್ನು ಸೌಹಾರ್ದಯುತ ವಾತಾವರಣದಲ್ಲಿ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಮಿಝೋರಾಂ ಬಯಸುತ್ತದೆ. ಅಂಥ ವಾತಾವರಣ ನೆಲೆಗೊಳ್ಳಲು ಅಸ್ಸಾಂ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಿಝೋರಾಂ ಮುಖ್ಯಮಂತ್ರಿ ಝೊರಮ್ತಂಗ ಹೇಳಿದ್ದಾರೆ.
ಅಮಿತ್ ಶಾ ಮಧ್ಯಪ್ರವೇಶ: ಗಡಿಯಲ್ಲಿ ಶಾಂತಿ ಅಸ್ಸಾಂ-ಮಿಝೋರಾಂ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿದರು. ಅಮಿತ್ ಶಾ ಮಾತುಕತೆಯ ನಂತರ ಅಸ್ಸಾಂ ಪೊಲೀಸರು ಗಡಿಯ ಕಾವಲು ಠಾಣೆಯನ್ನು ಸಿಆರ್ಪಿಎಫ್ಗೆ ಒಪ್ಪಿಗೆ ಹಿಂದೆ ಸರಿದರು. ಗಡಿಯಲ್ಲಿ ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮಿಝೋರಾಂ ಮುಖ್ಯಮಂತ್ರಿ ಎಎನ್ಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
(Assam Mizoram Border Clashes 6 Assam Police personnel dead 50 injured)
ಇದನ್ನೂ ಓದಿ: ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಕಲ್ಲು ತೂರಾಟ, ಹಿಂಸಾಚಾರ; ಅಮಿತ್ ಶಾ ಮೊರೆ ಹೋದ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು
ಇದನ್ನೂ ಓದಿ: Population Control: ಜನಸಂಖ್ಯಾ ಹೆಚ್ಚಳ ತಡೆಯಲು ಒಪ್ಪಿದ ಮುಸ್ಲಿಂ ಮುಖಂಡರು; ಅಸ್ಸಾಂನಲ್ಲಿ ಅಭಿವೃದ್ಧಿಯ ಹೊಸ ಪಯಣದ ನಿರೀಕ್ಷೆ