ಮುಸ್ಲಿಂ ವಿವಾಹ, ವಿಚ್ಛೇದನ ನೋಂದಣಿ ಕಾಯ್ದೆ ರದ್ದು: ಅಸ್ಸಾಂ ಸರ್ಕಾರದಿಂದ ಐತಿಹಾಸಿಕ ನಿರ್ಧಾರ

|

Updated on: Feb 24, 2024 | 10:17 AM

Muslim Marriage Act: ಶತಮಾನದಷ್ಟು ಹಳೆಯದಾದ ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆಯನ್ನು ರದ್ದುಗೊಳಿಸಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಅಸ್ಸಾಂನಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸುವ ನಿಟ್ಟಿನಲ್ಲಿ ಇದೊಂದು ದೊಡ್ಡ ಮತ್ತು ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ. ಅದೇ ರೀತಿ ಏಕರೂಪ ನಾಗರಿಕ ಸಂಹಿತೆಯ ಜಾರಿ ನಿಟ್ಟಿನಲ್ಲಿ ಮೊದಲ ಹೆಜ್ಜೆ ಎಂದೂ ಹೇಳಲಾಗುತ್ತಿದೆ.

ಮುಸ್ಲಿಂ ವಿವಾಹ, ವಿಚ್ಛೇದನ ನೋಂದಣಿ ಕಾಯ್ದೆ ರದ್ದು: ಅಸ್ಸಾಂ ಸರ್ಕಾರದಿಂದ ಐತಿಹಾಸಿಕ ನಿರ್ಧಾರ
ಹಿಮಂತ ಬಿಸ್ವ ಶರ್ಮಾ
Follow us on

ಗುವಾಹಟಿ, ಫೆಬ್ರವರಿ 24: ಶತಮಾನದಷ್ಟು ಹಳೆಯದಾದ ಅಸ್ಸಾಂ ‘ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ 1935 )Assam Muslim Marriages and Divorces Registration Act 1935’ ಅನ್ನು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ (Himanta Biswa Sarma) ನೇತೃತ್ವದ ಅಸ್ಸಾಂ (Assam) ಸರ್ಕಾರ ರದ್ದುಗೊಳಿಸಲು ನಿರ್ಧರಿಸಿದೆ. ಅಸ್ಸಾಂನಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಹೇಳಲಾಗುತ್ತಿದೆ. ಅದೇ ರೀತಿ ಏಕರೂಪ ನಾಗರಿಕ ಸಹಿತೆ ಜಾರಿ ನಿಟ್ಟಿನಲ್ಲಿ ಇದು ಮೊದಲ ಕ್ರಮವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಶುಕ್ರವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವ ಜಯಂತ್ ಮಲ್ಲಬರುವ, ಮುಸ್ಲಿಂ ವಿವಾಹ ಕಾಯ್ದೆ ರದ್ದತಿ ನಿರ್ಧಾರದ ಬಗ್ಗೆ ಮಾಹಿತಿ ನೀಡಿದರು. ಏಕರೂಪ ನಾಗರಿಕ ಸಂಹಿತೆ ನಿಟ್ಟಿನಲ್ಲಿ ಇದೊಂದು ದೊಡ್ಡ ಹೆಜ್ಜೆ. ಇನ್ನು ಮುಂದೆ ರಾಜ್ಯದಲ್ಲಿ ಮುಸ್ಲಿಂ ವಿವಾಹ ಮತ್ತು ವಿಚ್ಛೇದನಗಳ ನೋಂದಣಿಯನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ನೋಂದಣಾಧಿಕಾರಿಗಳು ಮಾಡಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ಮುಸ್ಲಿಂ ರಿಜಿಸ್ಟ್ರಾರ್​ಗಳು ರದ್ದು: 2 ಲಕ್ಷ ರೂ. ಪರಿಹಾರ

ಸದ್ಯ ಮುಸ್ಲಿಂ ವಿವಾಹ, ವಿಚ್ಛೇದನ ನೋಂದಣಿ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿರುವ 94 ಮುಸ್ಲಿಂ ರಿಜಿಸ್ಟ್ರಾರ್‌ಗಳನ್ನು ತೆಗೆದುಹಾಕಲಾಗುವುದು. ಅವರೆಲ್ಲರಿಗೂ ತಲಾ 2 ಲಕ್ಷ ರೂಪಾಯಿಗಳ ಒಂದು ಬಾರಿಯ ಪರಿಹಾರವನ್ನು ನೀಡಲಾಗುವುದು ಎಂದು ಮಲ್ಲಬರುವ ಹೇಳಿದರು.

ಸಿಎಂ ಹಿಮಂತ ಬಿಸ್ವ ಶರ್ಮಾ ಎಕ್ಸ್ ಸಂದೇಶ


2024ರ ಫೆಬ್ರವರಿ 23ರಂದು ಅಸ್ಸಾಂ ಕ್ಯಾಬಿನೆಟ್ ಹಳೆಯ ಅಸ್ಸಾಂ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನ ನೋಂದಣಿ ಕಾಯ್ದೆಯನ್ನು ರದ್ದುಗೊಳಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಕಾಯ್ದೆಯು ವಧು ಮತ್ತು ವರರು ಕ್ರಮವಾಗಿ 18 ಮತ್ತು 21 ರ ಕಾನೂನುಬದ್ಧ ವಯಸ್ಸನ್ನು ತಲುಪದಿದ್ದರೂ ಸಹ ವಿವಾಹ ನೋಂದಣಿಗೆ ಅವಕಾಶ ನೀಡುವ ನಿಬಂಧನೆಗಳನ್ನು ಒಳಗೊಂಡಿತ್ತು. ಈಗ ನಾವು ಕೈಗೊಂಡಿರುವ ಕ್ರಮವು ಅಸ್ಸಾಂನಲ್ಲಿ ಬಾಲ್ಯ ವಿವಾಹಗಳನ್ನು ನಿಷೇಧಿಸುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಸಾಮಾಜಿಕ ಮಾಧ್ಯಮ ಎಕ್ಸ್​​ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ವರ್ಷಾಂತ್ಯದ ವೇಳೆಗೆ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ; ಟೋಲ್ ಶುಲ್ಕ ಎಷ್ಟು?

ಉತ್ತರಾಖಂಡವು ಇತ್ತೀಚೆಗೆ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಕಾನೂನನ್ನು ಜಾರಿಗೊಳಿಸಿತ್ತು. ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟ ಮೊದಲ ರಾಜ್ಯವಾಗಿದೆ. ಕೆಲವೇ ದಿನಗಳ ಬಳಿಕ ಇದೀಗ, ಅಸ್ಸಾಂ ಕೂಡ ಇದೇ ರೀತಿಯ ಕಾನೂನಿನತ್ತ ತನ್ನ ಮೊದಲ ಹೆಜ್ಜೆ ಇಟ್ಟಿದೆ ಮತ್ತು ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ಕಾಯ್ದೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:16 am, Sat, 24 February 24