ಮಂಗಳಮುಖಿಯರಿಗೆ ವಿಶೇಷ ಲಸಿಕಾ ಅಭಿಯಾನ ಹಮ್ಮಿಕೊಂಡ ಅಸ್ಸಾಂ; ದೇಶದಲ್ಲೇ ವಿನೂತನ ಪ್ರಯತ್ನ

|

Updated on: May 15, 2021 | 2:51 PM

ಗುವಾಹಟಿ ನಗರದ ಆಶ್ರಯ ಭವನವೊಂದರಲ್ಲಿ ರಾಜ್ಯದ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಕೊರೊನಾ ಲಸಿಕೆ ಅಭಿಯಾನ ಏರ್ಪಡಿಸಲಾಗಿದ್ದು, ಇದನ್ನು ಕೆಲವೇ ವಾರಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಿ ಮಂಗಳಮುಖಿಯರೆಲ್ಲರಿಗೂ ಕೊರೊನಾ ಲಸಿಕೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳಮುಖಿಯರಿಗೆ ವಿಶೇಷ ಲಸಿಕಾ ಅಭಿಯಾನ ಹಮ್ಮಿಕೊಂಡ ಅಸ್ಸಾಂ; ದೇಶದಲ್ಲೇ ವಿನೂತನ ಪ್ರಯತ್ನ
ಮಂಗಳಮುಖಿಯೊಬ್ಬರಿಗೆ ಲಸಿಕೆ ನೀಡುತ್ತಿರುವುದು (ಚಿತ್ರ: ಅಂತರ್ಜಾಲ)
Follow us on

ಡಿಸ್ಪುರ್​: ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ ಜನವರಿ 16ರಿಂದಲೇ ಆರಂಭವಾಗಿದ್ದು ಹಂತಹಂತವಾಗಿ ಅದನ್ನು ವಿಸ್ತರಿಸುವ ಮೂಲಕ ದೇಶದ ಎಲ್ಲಾ ನಾಗರೀಕರಿಗೂ ಲಸಿಕೆ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಯತ್ನಿಸುತ್ತಿವೆ. ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಅಸ್ಸಾಂ ರಾಜ್ಯ ಸರ್ಕಾರ ಮಂಗಳಮುಖಿಯರಿಗೆ ವಿಶೇಷ ಲಸಿಕಾ ಅಭಿಯಾನವನ್ನು ಏರ್ಪಡಿಸಿದೆ. ಈ ಪ್ರಯತ್ನ ದೇಶದಲ್ಲೇ ವಿನೂತನವಾಗಿದ್ದು, ಅಭಿಯಾನದ ಫಲವಾಗಿ ಶುಕ್ರವಾರ (ಮೇ 15) 30 ಜನ ತೃತೀಯ ಲಿಂಗಿಗಳು ಕೊರೊನಾ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದ್ದಾರೆ.

ಗುವಾಹಟಿ ನಗರದ ಆಶ್ರಯ ಭವನವೊಂದರಲ್ಲಿ ರಾಜ್ಯದ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಕೊರೊನಾ ಲಸಿಕೆ ಅಭಿಯಾನ ಏರ್ಪಡಿಸಲಾಗಿದ್ದು, ಇದನ್ನು ಕೆಲವೇ ವಾರಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಿ ಮಂಗಳಮುಖಿಯರೆಲ್ಲರಿಗೂ ಕೊರೊನಾ ಲಸಿಕೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗೆ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳುವ ಮೂಲಕ ಈ ನಿರ್ದಿಷ್ಟ ಸಮುದಾಯಕ್ಕೆ ಸೇರಿದವರನ್ನು ಲಸಿಕಾ ಕೇಂದ್ರಗಳಿಗೆ ಸೆಳೆಯಲು ಅನುಕೂಲವಾಗಿದೆ. ಮೊದಲ ದಿನ 30 ಜನರು ಲಸಿಕೆ ಪಡೆಯುವ ಮೂಲಕ ಇತರರಿಗೆ ಪ್ರೇರಣೆ ಆಗಿದ್ದಾರೆ.

ಬಹುತೇಕ ಮಂಗಳಮುಖಿಯರಿಗೆ ಆದಾಯದ ಮೂಲವೇ ಭಿಕ್ಷೆ ಬೇಡುವುದಾಗಿರುವುದರಿಂದ ಸಹಜವಾಗಿ ಹೆಚ್ಚಿನ ಜನರ ಸಂಪರ್ಕಕ್ಕೆ ಬರುತ್ತಾರೆ. ಹೀಗಾಗಿ ಇವರಿಗೆ ಸೋಂಕು ತಗುಲುವ ಸಾಧ್ಯತೆ ಅತಿ ಹೆಚ್ಚಿದ್ದು, ಲಸಿಕೆ ನೀಡುವ ಮೂಲಕ ಕೊರೊನಾದ ಅಪಾಯದಿಂದ ಪಾರು ಮಾಡುವ ಪ್ರಯತ್ನ ಆಗುತ್ತಿದೆ ಎಂದು ಅಸ್ಸಾಂನ ಮಂಗಳಮುಖಿಯರ ಕಲ್ಯಾಣ ಇಲಾಖೆ ಉಪಾಧ್ಯಕ್ಷೆ ಸ್ವಾತಿ ಬಿಧಾನ್ ಹೇಳಿದ್ದಾರೆ.

ನಿರ್ದಿಷ್ವವಾಗಿ ಈ ಸಮುದಾಯ ಲಸಿಕೆಯಿಂದ ವಂಚಿತರಾಗುತ್ತಿರುವುದು ಗಮನಕ್ಕೆ ಬಂತು. ಎಲ್ಲೆಡೆ ಲಸಿಕೆ ವಿತರಿಸಲಾಗುತ್ತಿತ್ತಾದರೂ ಇವರು ಆ ಯೋಜನೆಯಿಂದ ದೂರ ಉಳಿಯುತ್ತಿದ್ದಾರೆ ಎಂದೆನಿಸಿತು. ಆದ ಕಾರಣ ರಾಜ್ಯದ ಆರೋಗ್ಯ ಇಲಾಖೆಯನ್ನು ಕೇಳಿಕೊಂಡಾಗ ಅವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದರು. ಇದರ ಪರಿಣಾಮವಾಗಿ ಯಾವುದೇ ಸಮಸ್ಯೆಯಿಲ್ಲದೇ ವಿಶೇಷ ಅಭಿಯಾನವನ್ನೇ ಏರ್ಪಡಿಸಲು ಸಾಧ್ಯವಾಯಿತು ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಶುಕ್ರವಾರದಂದು ರಂಜಾನ್ ಇದ್ದ ಕಾರಣ ಕಡಿಮೆ ಜನ ಭಾಗವಹಿಸಿದ್ದಾರೆ. ಆದರೆ, ಮುಂದಿನ ವಾರ ಸುಮಾರು 200 ಜನ ಪಾಲ್ಗೊಳ್ಳುವ ನಿರೀಕ್ಷೆ ಇಡಲಾಗಿದೆ. ದೇಶದ ಬೇರೆ ಬೇರೆ ಭಾಗದ ಮಂಗಳಮುಖಿಯರನ್ನು ವಿಚಾರಿಸಿದಾಗ ಎಲ್ಲೂ ಈ ರೀತಿಯ ವಿಶೇಷ ಕಾರ್ಯಕ್ರಮ ನಡೆಯುತ್ತಿಲ್ಲ ಎಂದಿದ್ದರು. ಹೀಗಾಗಿ ಅಸ್ಸಾಂ ಈ ವಿಚಾರದಲ್ಲಿ ಮೊದಲ ರಾಜ್ಯವಾಗಿ ಹೊರಹೊಮ್ಮಿದೆ ಎನ್ನುವುದಕ್ಕೆ ಸಂತಸವಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಸಿರುವ ಅಸ್ಸಾಂನ ಆರೋಗ್ಯ ಸೇವೆ ನಿರ್ದೇಶಕ ಮುನೀಂದ್ರನಾಥ್, ರಾಜ್ಯದಲ್ಲಿರುವ ಅಷ್ಟೂ ಮಂಗಳಮುಖಿಯರಿಗೆ ಕೊರೊನಾ ಲಸಿಕೆ ನೀಡುವ ಜವಾಬ್ದಾರಿ ಹೊತ್ತಿದ್ದೇವೆ. ಈ ಅಭಿಯಾನದಿಂದ ಯಾರೂ ವಂಚಿತರಾಗದಂತೆ ನೋಡಿಕೊಳ್ಳುತ್ತೇವೆ. ಎರಡನೇ ಡೋಸ್ ನೀಡುವ ತನಕವೂ ಈ ವಿಶೇಷ ಅಭಿಯಾನವನ್ನು ಮುಂದುವರೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:
Covid Vaccine: ವರ್ಷಾಂತ್ಯದೊಳಗೆ ಭಾರತದಲ್ಲಿ ಸಿಗಲಿರುವ 8 ಕೊರೊನಾ ಲಸಿಕೆಗಳು ಯಾವುವು?