ದೆಹಲಿ: ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ ಮುಂದುವರಿದಿದ್ದು ಗುರುವಾರ ಮಧ್ಯಾಹ್ನ 1ಗಂಟೆಯವರೆಗೆ ಪಶ್ಚಿಮ ಬಂಗಾಳದಲ್ಲಿ ಶೇಕಡಾ 37.42, ಅಸ್ಸಾಂನಲ್ಲಿ ಶೇ 33.24 ಮತದಾನ ದಾಖಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಪಶ್ಚಿಮ ಬಂಗಾಳದ 30 ವಿಧಾನಸಭಾ ಕ್ಷೇತ್ರ ಮತ್ತು ಅಸ್ಸಾಂನ 39 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ಮತ ಚಲಾಯಿಸಿದ್ದಾರೆ.
ಮಮತಾ ಪರಾಭವಗೊಳ್ಳಲಿದ್ದಾರೆ: ಸುವೇಂದು ಅಧಿಕಾರಿ
ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ, ಈ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಪರಾಭವಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಈ ಪ್ರದೇಶದ ಜನರೊಂದಿಗೆ ನನಗೆ ಹಳೇ ಸಂಬಂಧವಿದೆ. ನಂದಿಗ್ರಾಮದ ಪ್ರತಿಯೊಬ್ಬ ವ್ಯಕ್ತಿಯನ್ನು ನಾನು ಬಲ್ಲೆ. ಹಾಗಾಗಿ ಈ ಚುನಾವಣೆಯಲ್ಲಿ ಗೆಲುವು ನನ್ನದೇ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ. ಇಡೀ ಗ್ರಾಮವೇ ಬಿಜೆಪಿಗೆ ಮತಹಾಕಲು ಬಂದಿದೆ. ಬೇಗನೆ ಬಂದು ನಿಮ್ಮ ಮತ ಚಲಾಯಿಸಿ ಎಂದು ನಾನು ಜನರಲ್ಲಿ ವಿನಂತಿಸುತ್ತಿದ್ದೇನೆ. ಕೆಲವೊಂದು ಮತಗಟ್ಟೆಯಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿತ್ತು . ಅದು ಈಗ ಪರಿಹಾರವಾಗಿದೆ. ಶಾಂತಿಯುತವಾಗಿ ಮತದಾನ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 150 ಇವಿಎಂ ದುರುಪಯೋಗ: ಮಹುವಾ ಮೊಯಿತ್ರಾ ಆರೋಪ
ಎರಡನೇ ಹಂತದ ಮತದಾನದ ವೇಳೆ ಪಶ್ಚಿಮ ಬಂಗಾಳದಲ್ಲಿ 150 ಮತಯಂತ್ರಗಳ ದುರುಪಯೋಗವಾಗಿದೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ.
More than 150 EVM machines malfunctioning since Phase II voting started this morning
Wish @ECISVEEP had put half as much effort into ensuring no EVM glitches as it did into transferring police officials ..
— Mahua Moitra (@MahuaMoitra) April 1, 2021
ಬಂಗಾಳದ ಕೇಶ್ಪುರ್ ನಲ್ಲಿ ಟಿಎಂಸಿ ಕಾರ್ಯಕರ್ತನ ಹತ್ಯೆ; 7 ಮಂದಿ ಬಂಧನ
ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ್ ಜಿಲ್ಲೆಯಲ್ಲಿ ಗುರುವಾರ ಎರಡನೇ ಹಂತದ ಮತದಾನ ಆರಂಭವಾಗುವುದಕ್ಕಿಂತ ಮುಂಚೆ ಟಿಎಂಸಿ ಕಾರ್ಯಕರ್ತರೊಬ್ಬರು ಹತ್ಯೆಗೀಡಾಗಿದ್ದಾರೆ. ಕೇಶ್ಪುರ್ ಎಂಬಲ್ಲಿ ಉತ್ತಮ್ ದೊಲುಯಿ(48) ಎಂಬ ಟಿಎಂಸಿ ಕಾರ್ಯಕರ್ತನ ಮೇಲೆ 10-15 ಮಂದಿ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಉತ್ತಮ್ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮರಣ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. ಮತದಾನಕ್ಕೆ ಮುನ್ನ ಪ್ರಸ್ತುತ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಲು ಬಿಜೆಪಿ ಗೂಂಡಾಗಳು ಈ ಕೃತ್ಯವೆಸಗಿದ್ದಾರೆ ಎಂದು ಉತ್ತಮ್ ಅವರ ಕುಟುಂಬ ಆರೋಪಿಸಿದೆ. ಆದಾಗ್ಯೂ ಈ ಆರೋಪವನ್ನು ಬಿಜೆಪಿ ನಿರಾಕರಿಸಿದೆ. ನಾವು ಕೇಶ್ಪುರ್ ವಿಧಾನಸಭೆ ಕ್ಷೇತ್ರದಲ್ಲಿ ಗೆಲ್ಲುವುದು ಖಚಿತ. ಹಾಗಾಗಿ ಅಲ್ಲಿ ಗಲಭೆ ಮಾಡುವ ಅಗತ್ಯ ನಮಗಿಲ್ಲ ಎಂದು ಬಿಜೆಪಿ ಹೇಳಿದೆ.
ಹಿಮಂತ ಬಿಸ್ವ ಶರ್ಮಾಗೆ ಚುನಾವಣಾ ಆಯೋಗ ನೋಟಿಸ್
ಬೊಡೊಲ್ಯಾಂಡ್ ಪೀಪಲ್ಸ್ ಫ್ರಂಟ್ ಅಧ್ಯಕ್ಷ ಹಗ್ರಾಮ ಮೊಹಿಲರಿ ಅವರಿಗೆ ಬೆದರಿಕೆಯೊಡ್ಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಅಸ್ಸಾಂನ ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮಾ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಬಳಸಿ ನಿಮ್ಮನ್ನು ಜೈಲಿಗಟ್ಟುತ್ತೇನೆ ಎಂದು ಹಗ್ರಾಮ ಮೊಹಿಲರಿ ಅವರಿಗೆ ಶರ್ಮಾ ಬೆದರಿಕೆಯೊಡ್ಡಿದ್ದಾರೆ ಎಂದು ಕಾಂಗ್ರೆಸ್ ದೂರು ನೀಡಿತ್ತು. ಬೊಡೊಲ್ಯಾಂಡ್ ಪೀಪಲ್ಸ್ ಫ್ರಂಟ್, ಕಾಂಗ್ರೆಸ್ನ ಮಿತ್ರ ಪಕ್ಷವಾಗಿದೆ.
Published On - 1:37 pm, Thu, 1 April 21