West Bengal Elections 2021: ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ತೆರೆ ಬೀಳುವ ಮುನ್ನ ‘ನನ್ನದು ಶಾಂಡಿಲ್ಯ ಗೋತ್ರ’ ಎಂದ ಮಮತಾ ಬ್ಯಾನರ್ಜಿ

Nandigram: ನಾನು ತ್ರಿಪುರಾದ ತ್ರಿಪುರೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದಾಗ ಅಲ್ಲಿನ ಅರ್ಚರರು ನನ್ನಲ್ಲಿ ಗೋತ್ರ ಯಾವುದು ಎಂದು ಕೇಳಿದರು. ನಾನು ಅಲ್ಲಿಯೂ ಮಾ, ಮಾಟಿ , ಮನುಷ್ ಎಂದೆ. ನಿಜವಾಗಿಯೂ ನಾನು 8 ಬ್ರಾಹ್ಮಣ ಗೋತ್ರಗಳ ಪೈಕಿ 'ಶಾಂಡಿಲ್ಯ' ಗೋತ್ರದವಳು, ಎಂದಿದ್ದಾರೆ ಮಮತಾ ಬ್ಯಾನರ್ಜಿ.

West Bengal Elections 2021: ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ತೆರೆ ಬೀಳುವ ಮುನ್ನ 'ನನ್ನದು ಶಾಂಡಿಲ್ಯ ಗೋತ್ರ' ಎಂದ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Follow us
ರಶ್ಮಿ ಕಲ್ಲಕಟ್ಟ
|

Updated on: Mar 31, 2021 | 12:34 PM

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲೊಂದಾದ ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಮಂಗಳವಾರ ರಾತ್ರಿ ತೆರೆಬಿದ್ದಿದೆ. ಕಳೆದ ಮೂರು ನಾಲ್ಕು ದಿನಗಳಿಂದ ನಂದಿಗ್ರಾಮದಲ್ಲಿಯೇ ಪ್ರಚಾರ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮಂಗಳವಾರ ತಮ್ಮ ಗೋತ್ರದ ಬಗ್ಗೆ ಮಾತನಾಡಿದ್ದಾರೆ. ನಾನು ಎರಡನೇ ಹಂತದ ಮತದಾನಕ್ಕೆ ಪ್ರಚಾರ ನಡೆಸುತ್ತಿದ್ದಾಗ ದೇವಾಲಯವೊಂದಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ಅರ್ಚಕರು ನನ್ನಲ್ಲಿ ಗೋತ್ರ ಯಾವುದು ಎಂದು ಕೇಳಿದಾಗ ನಾನು ‘ಮಾ ಮಾಟಿ ಮನುಷ್’ (ಅಮ್ಮ, ಭೂಮಿ, ಮನುಷ್ಯ) ಎಂದು ಹೇಳಿದೆ. ನಾನು ತ್ರಿಪುರಾದ ತ್ರಿಪುರೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದಾಗ ಅಲ್ಲಿನ ಅರ್ಚರರು ನನ್ನಲ್ಲಿ ಗೋತ್ರ ಯಾವುದು ಎಂದು ಕೇಳಿದರು. ನಾನು ಅಲ್ಲಿಯೂ ಮಾ- ಮಾಟಿ – ಮನುಷ್ ಎಂದೆ. ನಿಜವಾಗಿಯೂ ನಾನು 8 ಬ್ರಾಹ್ಮಣ ಗೋತ್ರಗಳ ಪೈಕಿ ‘ಶಾಂಡಿಲ್ಯ’ ಗೋತ್ರದವಳು ಎಂದಿದ್ದಾರೆ ಮಮತಾ.

ಚುನಾವಣಾ ಪ್ರಚಾರದ ವೇಳೆ ಗೋತ್ರ ಬಹಿರಂಗಪಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಹಿರಿಯ ನಾಯಕ, ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಮಮತಾ ನಿರಾಶೆಯಲ್ಲಿದ್ದಾರೆ. ನಾನು ಯಾವತ್ತೂ ಗೋತ್ರ ಹೇಳಿಲ್ಲ, ನಾನು ಬರೆದು ತೋರಿಸುತ್ತೇನೆ. ಚುನಾವಣೆ ಸೋಲುವ ಭಯದಿಂದ ಅವರು ಇದನ್ನು ಹೇಳುತ್ತಿದ್ದಾರೆ. ಮಮತಾ ಬ್ಯಾನರ್ಜಿ ಅವರೇ ನೀವೇ ಹೇಳಿ, ರೋಹಿಂಗ್ಯಾ ಮತ್ತು ನುಸುಳುಕೋರರು ಶಾಂಡಿಲ್ಯ ಗೋತ್ರದವರೇ?. ಈ ಚುನಾವಣೆಯಲ್ಲಿ ಮಮತಾ ಅವರ ಸೋಲು ಖಚಿತ ಎಂದಿದ್ದಾರೆ. ಗಿರಿರಾಜ್ ಸಿಂಗ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ತಮ್ಮ ಹೆಸರಿನ ಮುಂದೆ ಶಾಂಡಿಲ್ಯ ಎಂದು ಬರೆದುಕೊಂಡಿದ್ದಾರೆ.

ನಾಲ್ಕು ಜಿಲ್ಲೆಗಳ 30 ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 1ರಂದು ಚುನಾವಣೆ ನಡೆಯಲಿದ್ದು, ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಾಯಕ ಸುವೇಂದು ಅಧಿಕಾರಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಡಲಿದೆ. ನಂದಿಗ್ರಾಮ ಸುವೇಂದು ಅವರ ತವರು ಆಗಿದ್ದರೂ, ಭೂಸ್ವಾಧೀನದ ವಿರುದ್ಧ ಹೋರಾಟದಲ್ಲಿ ಮಮತಾ ಬ್ಯಾನರ್ಜಿ ಅವರು ಗೆಲುವು ಸಾಧಿಸಿದ ಕ್ಷೇತ್ರವಾಗಿದೆ. ಈ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ಮತ್ತು ಸುವೇಂದು ಪಾಲಿಗೆ ಇದು ಪ್ರತಿಷ್ಠೆಯ ಕಣವಾಗಿದೆ.

ಮಮತಾ ಬ್ಯಾನರ್ಜಿ ಅವರ ಗೋತ್ರ ಬಹಿರಂಗದ ಬಗ್ಗೆ ಪ್ರತಿಕ್ರಿಯಿಸಿದ ಎಐಎಂಇಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಶಾಂಡಿಲ್ಯ ಅಥವಾ ಜನೇವುಧಾರಿ (ಜನಿವಾರ ಧರಿಸಿದರು) ಅಲ್ಲದೇ ಇರುವ ನಮ್ಮಂಥವರ ಕತೆ ಏನು? ನಾವು ನಿರ್ದಿಷ್ಟ ದೇವರ ಭಕ್ತರಲ್ಲ. ನಾನು ಯಾವುದೇ ಚಾಲೀಸಾ ಅಥವಾ ಮಂತ್ರ ಪಠಿಸುವುದಿಲ್ಲ. ಎಲ್ಲ ಪಕ್ಷಗಳು ಗೆಲ್ಲುವುದಕ್ಕಾಗಿ ಹಿಂದೂ ಎಂಬುದನ್ನು ತೋರಿಸುತ್ತದೆ. ಇದು ಅಶಿಸ್ತು, ಅವಮಾನಕರ ಮತ್ತು ಇದು ಗೆಲುವಿನತ್ತ ಕೊಂಡೊಯ್ಯುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ನಂದಿಗ್ರಾಮದಲ್ಲಿ ಮಮತಾ  ಬ್ಯಾನರ್ಜಿ ಅವರ ನಿರಂತರ ಪ್ರಚಾರ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಅಮಿತ್ ಮಾಳವಿಯ, 30 ವಿಧಾನಸಭಾ ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನದ ನಡೆಯಲಿದೆ. ಮಮತಾ ಬ್ಯಾನರ್ಜಿ ಕಳೆದ ಮೂರು ದಿನಗಳಿಂದ ನಂದಿಗ್ರಾಮ ಬಿಟ್ಟು ಹೊರಗೆ ಹೋಗಿಲ್ಲ. ಸೋಲಿನ ಭಯದಿಂದಾಗಿ ಆಕೆ ಆ ಕ್ಷೇತ್ರ ಬಿಟ್ಟು ಹೊರಗೆ ಹೋಗಿಲ್ಲ, ಅದೇ ವೇಳೆ ಚುನಾವಣೆ ನಡೆಯಲಿರುವ ಇತರ ಕ್ಷೇತ್ರಗಳನ್ನು ಅವರು ನಿರ್ಲಕ್ಷಿಸಿದ್ದಾರೆ. ಮಮತಾ ಪರಾಭವಗೊಳ್ಳಲಿದ್ದಾರೆ. ಎರಡನೇ ಹಂತದ ಮತದಾನದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Amit Shah in West Bengal: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 200ಕ್ಕಿಂತಲೂ ಹೆಚ್ಚು ಸೀಟು ಗೆಲ್ಲಲಿದೆ: ಅಮಿತ್ ಶಾ