ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಪರಾಭವಗೊಳ್ಳಲಿದ್ದಾರೆ ಎಂಬ ನಕಲಿ ಸಮೀಕ್ಷೆ ವೈರಲ್; ಬಿಜೆಪಿ ವಿರುದ್ದ ಕಿಡಿಕಾರಿದ ಟಿಎಂಸಿ
West Bengal Assembly Elections 2021: ಸೋಲನ್ನು ಮನಗಂಡಿರುವ ಬಂಗಾಳದ ಬಿಜೆಪಿ ತಮ್ಮ ಕಾರ್ಯಕರ್ತರ ಸ್ಥೈರ್ಯ ಹೆಚ್ಚಿಸಲು ಐ-ಪಿಎಸಿ ಹೆಸರಿನಲ್ಲಿ ಸುಳ್ಳು ಸಮೀಕ್ಷೆಗಳನ್ನು ಸೃಷ್ಟಿಸಿ ಮತ್ತಷ್ಟು ಕೆಳಮಟ್ಟಕ್ಕೆ ಇಳಿದಿದೆ ಎಂದು I-PAC ಟ್ವೀಟ್ ಮಾಡಿದೆ.
ನವದೆಹಲಿ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭೆ ಕ್ಷೇತ್ರದಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಪರಾಭವಗೊಳ್ಳಲಿದ್ದಾರೆ ಎಂದು ಹೇಳುವ ಸಮೀಕ್ಷೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ (I-PAC) ನಡೆಸಿದ ಆಂತರಿಕ ಸಮೀಕ್ಷೆಯ ಪುಟವೊಂದು ಬಹಿರಂಗಗೊಂಡಿದೆ ಎಂಬ ಉಲ್ಲೇಖದೊಂದಿಗೆ ಈ ಸಮೀಕ್ಷೆ ವೈರಲ್ ಆಗಿದೆ. ಪಶ್ಚಿಮ ಬಂಗಾಳದ ಎರಡನೇ ಹಂತದ ಚುನಾವಣೆಯಲ್ಲಿ ಬಿಜೆಪಿ 30 ಸೀಟುಗಳಲ್ಲಿ 23 ಸೀಟು ಗೆಲ್ಲಲಿದೆ ಎಂದು ಸಮೀಕ್ಷೆಯಲ್ಲಿ ಹೇಳಿದೆ. ಆದರೆ ವೈರಲ್ ಆಗಿರುವ ಸಮೀಕ್ಷೆ ನಕಲಿ, ಅದು ನಮ್ಮ ಸಂಸ್ಥೆಯದ್ದು ಅಲ್ಲ ಎಂದು ಐ-ಪಿಎಸಿ ಟ್ವೀಟ್ ಮಾಡಿದೆ.
ಸೋಲನ್ನು ಮನಗಂಡಿರುವ ಬಂಗಾಳದ ಬಿಜೆಪಿ ತಮ್ಮ ಕಾರ್ಯಕರ್ತರ ಸ್ಥೈರ್ಯ ಹೆಚ್ಚಿಸಲು ಐ-ಪಿಎಸಿ ಹೆಸರಿನಲ್ಲಿ ಸುಳ್ಳು ಸಮೀಕ್ಷೆಗಳನ್ನು ಸೃಷ್ಟಿಸಿ ಮತ್ತಷ್ಟು ಕೆಳಮಟ್ಟಕ್ಕೆ ಇಳಿದಿದೆ. ಐ-ಪಿಎಸಿಯಲ್ಲಿ ಯಾರೊಬ್ಬರೂ ಡೆಸ್ಕ್ಟಾಪ್ ಬಳಸುತ್ತಿಲ್ಲ. ನೀವು ನಕಲಿ ಸಮೀಕ್ಷೆ ಅಥವಾ ವರದಿಗಳನ್ನು ಸೃಷ್ಟಿಸುವಾಗ ಸ್ವಲ್ಪ ಬುದ್ಧಿವಂತಿಕೆ ಬಳಸಿ ಎಂದು ಐ-ಪಿಎಸಿ ಟ್ವೀಟ್ ನಲ್ಲಿ ಹೇಳಿದೆ.
Facing imminent defeat, @BJP4Bengal has now gone down to the level of using FAKE surveys in the name of I-PAC to keep the morale of their workers up!!
P.S: In I-PAC, no one uses desktops so at-least be smart in your effort to create fake survey / reports! ?? pic.twitter.com/lFaOo0DshU
— I-PAC (@IndianPAC) March 31, 2021
ಸುಳ್ಳು ಸಮೀಕ್ಷೆಗಳನ್ನು ಹರಿಬಿಡುವುದರಿಂದ ಪ್ರಯೋಜನ ಆಗಲ್ಲ: ಟಿಎಂಸಿ ನಂದಿಗ್ರಾಮದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಪರಾಭವಗೊಳ್ಳಲಿದ್ದಾರೆ ಎಂಬ ಸಮೀಕ್ಷೆ ನಕಲಿ. ಬಿಜೆಪಿ ನಾಯಕರು ಮತ್ತು ಅವರ ಭರವಸೆಗಳಂತೆಯೇ ಈ ಸಮೀಕ್ಷೆಯಲ್ಲಿಯೂ ನಿಜಾಂಶ ಇಲ್ಲ ಎಂದು ಟಿಎಂಸಿ ಪ್ರತಿಕ್ರಿಯಿಸಿದೆ.
ಈ ವರದಿ ನಕಲಿ ಮತ್ತು ಬಿಜೆಪಿ ನಾಯಕರು ಮತ್ತು ಅವರ ಭರವಸೆಯಂತೆ ನಂಬಲು ಅಸಾಧ್ಯವಾದುದು. ಈ ರೀತಿಯ ನಕಲಿ ವರದಿಗಳು ಕಾರ್ಯಗತವಾಗಲ್ಲ ಎಂದು ಟಿಎಂಸಿ ಹೇಳಿದೆ.
ಮಂಗಳವಾರ ವೈರಲ್ ಆಗಿತ್ತು ದಿಲೀಪ್ ಘೋಷ್ ಅವರ ನಕಲಿ ಪತ್ರ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಿಜೆಪಿ 3-4 ಸೀಟುಗಳನ್ನು ಮಾತ್ರ ಗೆಲ್ಲಲಿದೆ ಎಂದು ಬಿಜೆಪಿ ನಾಯಕ ದಿಲೀಪ್ ಘೋಷ್ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಬರೆದಿದ್ದಾರೆ ಎನ್ನಲಾದ ನಕಲಿ ಪತ್ರವೊಂದು ಮಂಗಳವಾರ ವೈರಲ್ ಆಗಿತ್ತು. ಮೊದಲ ಹಂತದ ಚುನಾವಣೆಯಲ್ಲಿ ಪಕ್ಷದ ಪ್ರದರ್ಶನ ಕಳಪೆಯಾಗಿತ್ತು. ಹಾಗಾಗಿ ಮುಂದಿನ ಹಂತಗಳಲ್ಲಿ ಮುನ್ನಡೆ ಸಾಧಿಸಬೇಕಾದರೆ ಹೆಚ್ಚಿನ ಪರಿಶ್ರಮ ಬೇಕಾಗುತ್ತದೆ ಎಂದು ಪತ್ರದಲ್ಲಿ ಹೇಳಲಾಗಿತ್ತು. ಆದಾಗ್ಯೂ, ಈ ಪತ್ರ ನಕಲಿ ಎಂದು ಬಿಜೆಪಿ ಹೇಳಿದೆ.
ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿ 30 ಸೀಟುಗಳ ಪೈಕಿ 26 ಸೀಟುಗಳನ್ನು ಗೆಲ್ಲಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದು, ಇದನ್ನು ಮಮತಾ ಬ್ಯಾನರ್ಜಿ ಖಂಡಿಸಿದ್ದರು. ಚುನಾವಣೆಗೆ ಒಂದು ದಿನ ಮುಂಚೆ ಅಮಿತ್ ಶಾ ಈ ರೀತಿ ಹೇಳಿದ್ದನ್ನು ಖಂಡಿಸಿದ ಮಮತಾ ಬ್ಯಾನರ್ಜಿ 30 ಸೀಟುಗಳಲ್ಲಿ ಬರೀ 26 ಸೀಟು ಯಾಕೆ? ಇನ್ನುಳಿದ ಸೀಟುಗಳನ್ನು ಅವರು ಕಾಂಗ್ರೆಸ್ ಮತ್ತು ಸಿಪಿಐ (ಎಂ)ಗೆ ಕೊಟ್ಟಿದ್ದಾರೆಯೇ? ನೀವು ಬಿಜೆಪಿಯವರಿಗೆ ದೊಡ್ಡ ರಶೊಗೊಲ್ಲ ( ದೊಡ್ಡ ಸೊನ್ನೆ) ಸಿಗುತ್ತದೆ ಎಂದಿದ್ದರು.