
ಗುವಾಹಟಿ, ಜುಲೈ 15: ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಆತಂಕಕಾರಿ ಪ್ರಕರಣವೊಂದು (Shocking News) ಬೆಳಕಿಗೆ ಬಂದಿದೆ. ಇತ್ತೀಚೆಗೆ ಹೆಂಡತಿಯರು ತಮ್ಮ ಗಂಡನನ್ನು ಕೊಲ್ಲುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೀಗ ಅದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಗುವಾಹಟಿಯ 38 ವರ್ಷದ ಮಹಿಳೆಯೊಬ್ಬರು ತನ್ನ ಪತಿಯನ್ನು ಕೊಲೆ ಮಾಡಿ, ಆತನ ಶವವನ್ನು ಗುವಾಹಟಿಯ ಪಾಂಡು ಪ್ರದೇಶದ ತಮ್ಮ ಮನೆಯ ಆವರಣದಲ್ಲಿ ಹೂತು ಹಾಕಿದ್ದಾಳೆ. ಆಕೆಯನ್ನು ಇದೀಗ ಬಂಧಿಸಲಾಗಿದೆ. ಜೂನ್ 26ರಂದು ತೀವ್ರ ಕೌಟುಂಬಿಕ ಕಲಹದ ನಂತರ ಈ ಘಟನೆ ನಡೆದಿದೆ.
ರಹೀಮಾ ಖಾತುನ್ ಎಂಬ ಮಹಿಳೆ ಜೋಯ್‌ಮೋತಿ ನಗರದಲ್ಲಿರುವ ತಮ್ಮ ಮನೆಯಲ್ಲಿ ನಡೆದ ಜಗಳದ ಬಳಿಕ ತನ್ನ ಪತಿ ಸಬಿಯಾಲ್ ರೆಹಮಾನ್ (40) ಅವರನ್ನು ಕೊಂದಿದ್ದಾಳೆ. ವೃತ್ತಿಯಲ್ಲಿ ಸ್ಕ್ರ್ಯಾಪ್ ವ್ಯಾಪಾರಿಯಾಗಿದ್ದ ರೆಹಮಾನ್ ಕೊಲೆ ನಡೆದ ರಾತ್ರಿ ಕುಡಿದು ಮನೆಗೆ ಮರಳಿದ್ದು, ಗಂಡ-ಹೆಂಡತಿ ನಡುವೆ ತೀವ್ರ ವಾಗ್ವಾದ ನಡೆದಿದೆ. ನಂತರ ಆಕೆ ಆತನನ್ನು ಕೊಂದಿದ್ದಾಳೆ. ರೆಹಮಾನ್ ಸಾವಿನ ನಂತರ ಖಾತುನ್ ತಮ್ಮ ಮನೆಯ ಅಂಗಳದ ಬಳಿ 5 ಅಡಿ ಆಳದ ಗುಂಡಿಯನ್ನು ಅಗೆದು ಈ ಕೊಲೆಯನ್ನು ಮರೆಮಾಡಲು ಅವನ ಶವವನ್ನು ಹೂತು ಹಾಕಿದ್ದಾಳೆ.
ಇದನ್ನೂ ಓದಿ: ಗಂಡನನ್ನು ನದಿಗೆ ತಳ್ಳಿ ಕೊಲೆ ಯತ್ನ ಪ್ರಕರಣ: ಖಚಿತವಾಗಿ ಕೊಲೆ ಯತ್ನ ನಡೆದಿದೆ ಎನ್ನುತ್ತಾರೆ ಸಂಬಂಧಿಕರು
ಹಲವಾರು ದಿನಗಳವರೆಗೆ ತನ್ನ ಪತಿ ಕೆಲಸಕ್ಕಾಗಿ ಕೇರಳಕ್ಕೆ ಹೋಗಿದ್ದಾರೆ ಎಂದು ಎಲ್ಲರ ಬಳಿ ಹೇಳಿಕೊಂಡಿದ್ದಳು. ಇದೇ ರೀತಿ ನೆರೆಹೊರೆಯವರು ಮತ್ತು ಪರಿಚಯಸ್ಥರನ್ನು ದಾರಿ ತಪ್ಪಿಸುತ್ತಿದ್ದಳು. ನಂತರ, ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಿದ್ದಳು. ಆದರೆ, ಜುಲೈ 12ರಂದು ಜಲುಕ್ಬರಿ ಪೊಲೀಸ್ ಠಾಣೆಯಲ್ಲಿ ಮೃತ ವ್ಯಕ್ತಿಯ ಸಹೋದರ ತನ್ನ ಅಣ್ಣ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಿದಾಗ ಸತ್ಯ ಬಯಲಾಗಲು ಪ್ರಾರಂಭಿಸಿತು. ಮರುದಿನ, ಖಾತುನ್ ಸಿಕ್ಕಿಬೀಳುವ ಭಯದಲ್ಲಿ ತಾನೇ ಪೊಲೀಸರ ಮುಂದೆ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಗಂಡ ನನ್ನನ್ನು ಕೊಲ್ಲುತ್ತಾನೆ ಎಂಬ ಭಯದಲ್ಲಿ ನಾನೇ ಆತನನ್ನು ಕೊಂದೆ ಎಂದು ಆಕೆ ಹೇಳಿದ್ದಾಳೆ.
ಇದನ್ನೂ ಓದಿ: ನನ್ನ ಗಂಡನನ್ನು ಕೊಲೆ ಮಾಡದಿದ್ರೆ ಆತ್ಮಹತ್ಯೆ: ಪ್ರಿಯಕರನೊಂದಿಗಿನ ಮಹಿಳೆಯ ನೌಟಂಕಿ ಆಟ ಬಯಲು
ಆದರೆ, ಪೊಲೀಸರು ಆಕೆ ಒಬ್ಬಳೇ ಈ ಕೃತ್ಯ ಎಸಗಿದ್ದಾಳೆ ಎಂದು ನಂಬಲು ತಯಾರಿಲ್ಲ. ಆಕೆ ಒಬ್ಬಳೇ ಮನೆಯ ಅಂಗಳದ ಬಳಿ ಅಷ್ಟು ದೊಡ್ಡ ಗುಂಡಿ ತೆಗೆದು ಹೆಣ ಹೂಳಲು ಸಾಧ್ಯವಿಲ್ಲ ಎಂದು ಅನುಮಾನಿಸಿರುವ ಪೊಲೀಸರು ಇದಕ್ಕೆ ಸಹಾಯ ಮಾಡಿರುವ ಬೇರೆಯವರ ಸುಳಿವಿಗಾಗಿ ತನಿಖೆ ನಡೆಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ