ಗಂಗಾ ನದಿಯಲ್ಲಿ ತೇಲಿ ಬಂತು 96 ಮೃತದೇಹ; ಬಿಹಾರ, ಉತ್ತರ ಪ್ರದೇಶದಲ್ಲಿ ಹೆಚ್ಚಿದ ಆತಂಕ
Dead Bodies Found Floating in Ganga: ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ 71 ಮೃತದೇಹಗಳು ಪತ್ತೆಯಾಗಿದ್ದು, ಉತ್ತರ ಪ್ರದೇಶದ ಗಾಜೀಪುರ್ ಜಿಲ್ಲೆಯಲ್ಲಿ 25 ಶವಗಳು ಪತ್ತೆಯಾಗಿವೆ. ಮೃತದೇಹಗಳು ಕೊವಿಡ್ ರೋಗಿಗಳದ್ದು ಎಂದು ಎರಡೂ ಜಿಲ್ಲೆಗಳ ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ
ಬಿಹಾರ: ಕಳೆದ ಕೆಲವು ದಿನಗಳಿಂದ ಗಂಗಾ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿರುವ ಮೃತದೇಹಗಳು ತೇಲಿ ಬರುತ್ತಲೇ ಇದೆ. ಇಲ್ಲಿಯವರೆಗೆ ಸುಮಾರು 96 ಶವಗಳು ತೇಲಿ ಬಂದಿದ್ದು , ಕೊವಿಡ್ ರೋಗಿಗಳ ಶವ ಇದಾಗಿರಬಹುದೆಂದು ಶಂಕಿಸಲಾಗಿದ್ದು ,ಬಿಹಾರ ಮತ್ತು ಉತ್ತರ ಪ್ರದೇಶದ ಜನರಲ್ಲಿ ಆತಂಕ ಸೃಷ್ಟಿಸಿದೆ. ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ 71 ಮೃತದೇಹಗಳು ಪತ್ತೆಯಾಗಿದ್ದು, ಉತ್ತರ ಪ್ರದೇಶದ ಗಾಜೀಪುರ್ ಜಿಲ್ಲೆಯಲ್ಲಿ 25 ಶವಗಳು ಪತ್ತೆಯಾಗಿವೆ. ಮೃತದೇಹಗಳು ಕೊವಿಡ್ ರೋಗಿಗಳದ್ದು ಎಂದು ಎರಡೂ ಜಿಲ್ಲೆಗಳ ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ . ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಬಕ್ಸಾರ್‌ನ ಪೊಲೀಸರು ಉತ್ತರ ಪ್ರದೇಶದ ಘಾಜಿಪುರದಿಂದ ಶವಗಳು ತೇಲಿ ಬಂದಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಂಗಳವಾರ ಉಭಯ ರಾಜ್ಯಗಳ ತನಿಖೆಗಾಗಿ ಕೋರಿದ್ದಾರೆ. ಬಿಹಾರದ ಬಕ್ಸಾರ್‌ನ ಗಂಗಾದಲ್ಲಿ ತೇಲುತ್ತಿರುವ ದೇಹಗಳು ದುರದೃಷ್ಟಕರ. ಇದು ಖಂಡಿತವಾಗಿಯೂ ತನಿಖೆಯ ವಿಷಯವಾಗಿದೆ. ತಾಯಿ ಗಂಗೆಯ ಸ್ವಚ್ಛತೆ ಮತ್ತು ನಿರಂತರತೆಯನ್ನು ಕಾಪಾಡಿಕೊಳ್ಳಲು ಮೋದಿ ಸರ್ಕಾರ ಬದ್ಧವಾಗಿದೆ. ಸಂಬಂಧಪಟ್ಟ ರಾಜ್ಯಗಳು (ಬಿಹಾರ ಮತ್ತು ಯುಪಿ) ಈ ವಿಷಯದಲ್ಲಿ ತಕ್ಷಣವೇ ಗಮನಹರಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.
ನಾವು ಇಲ್ಲಿಯವರೆಗೆ ಗಂಗಾದಲ್ಲಿ 71 ಶವಗಳನ್ನು ಹೊರತೆಗೆದಿದ್ದೇವೆ. ನಾವು ಎಲ್ಲಾ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ್ದೇವೆ. ಡಿಎನ್‌ಎ ಮತ್ತು ಕೊವಿಡ್ ಪರೀಕ್ಷೆಗಾಗಿ ಮಾದರಿಗಳನ್ನು ಸಹ ತೆಗೆದುಕೊಂಡಿದ್ದೇವೆ. ಸರ್ಕಾರಿ ಕೊವಿಡ್ ಮಾರ್ಗಸೂಚಿ ಪ್ರಕಾರ ಶವಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಬಕ್ಸರ್ ಎಸ್ಪಿ ನೀರಜ್ ಕುಮಾರ್ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಶವಗಳು ಸ್ಥಳೀಯ ನಿವಾಸಿಗಳದ್ದೇ ಎಂದು ಕಂಡುಹಿಡಿಯಲು ಪೊಲೀಸರು ಈ ಪ್ರದೇಶದಲ್ಲಿ ತಪಾಸಣೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು. ಕೆಲವು ಮೃತದೇಹಗಳು ಉತ್ತರ ಪ್ರದೇಶದಿಂದ ತೇಲಿ ಬಂದಿದೆ ಈ ಬಗ್ಗೆ ಬಿಹಾರ ಮತ್ತು ಉತ್ತರ ಪ್ರದೇಶದ ಪೊಲೀಸರು ತನಿಖೆಯ ವಿಷಯವಾಗಿದೆ ಎಂದು ಅವರು ಹೇಳಿದರು. ಶವಗಳು ಬಿಹಾರದಲ್ಲಿ ಪತ್ತೆಯಾಗಿವೆ. ಇವುಗಳ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದು ಬಿಹಾರ ಸರ್ಕಾರದ ಜವಾಬ್ದಾರಿಯಾಗಿದೆ. ಉತ್ತರ ಪ್ರದೇಶವನ್ನು ದೂಷಿಸುವುದು ಸರಿಯಲ್ಲ ಎಂದು ಉತ್ತರ ಪ್ರದೇಶದ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಶವಗಳನ್ನು ನದಿಯಲ್ಲಿ ಎಸೆಯಲು ಅನುಮತಿಸದಂತೆ ಸ್ಥಳೀಯ ಆಡಳಿತವು ಗಂಗಾ ಘಾಟ್ ಬಗ್ಗೆ ನಿಗಾ ಇಟ್ಟಿದೆ ಎಂದು ಬಕ್ಸಾರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮನ್ ಸಮೀರ್ ಹೇಳಿದ್ದಾರೆ. ಬಕ್ಸಾರ್ ಇದುವರೆಗೆ 1,172 ಸಕ್ರಿಯ ಕೋವಿಡ್ ಪ್ರಕರಣಗಳನ್ನು ಹೊಂದಿದೆ. ಜಿಲ್ಲೆಯಲ್ಲಿ ಸೋಮವಾರದವರೆಗೆ 26 ಕೊವಿಡ್ ರೋಗಿಗಳು ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶ ಸರ್ಕಾರವು ಈಗಾಗಲೇ ಜಲ್ ಸಮಾಧಿಯನ್ನು ನಿಲ್ಲಿಸುವಂತೆ ಜನರಿಗೆ ನಿರ್ದೇಶನ ನೀಡುವ ಆದೇಶವನ್ನು ಅಂಗೀಕರಿಸಿದೆ – ಈ ಆಚರಣೆಯನ್ನು ಕೆಲವು ಸಮುದಾಯಗಳು ಅನುಸರಿಸುತ್ತವೆ, ಇದರಲ್ಲಿ ದೇಹಗಳನ್ನು ನದಿಯಲ್ಲಿ ಎಸೆಯುವ ಮೂಲಕ ವಿಲೇವಾರಿ ಮಾಡಲಾಗುತ್ತದೆ. ಈ ಆದೇಶವನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ ಎಂದು ಎಡಿಜಿ ಕುಮಾರ್ ಹೇಳಿದರು.
ಬಕ್ಸಾರ್‌ನಲ್ಲಿರುವ ಶವಗಳನ್ನು ಸೋಮವಾರ ಬಕ್ಸಾರ್‌ನ ಚೌಸಾ ಗ್ರಾಮದಲ್ಲಿ ನದಿಯ ಪಕ್ಕದಲ್ಲಿರುವ ಮಹಾದೇವ ಸ್ಮಶಾನದ ಬಳಿ ಗ್ರಾಮಸ್ಥರು ಮೊದಲು ಗಮನಿಸಿದರು ನಂತರ ಅವರು ಜಿಲ್ಲೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಕಳೆದ ಎರಡು ದಿನಗಳಲ್ಲಿ ಗಂಗಾದಲ್ಲಿ ಕನಿಷ್ಠ 25 ಅಪರಿಚಿತ ಶವಗಳು ತೇಲುತ್ತಿರುವುದು ಕಂಡುಬಂದಿದೆ ಎಂದು ಗಾಜಿಪುರದಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ. ವಾರಣಾಸಿ ವಲಯದ ಐಜಿ ಸುವೇಂದ್ರ ಕೆ ಭಗತ್ ಅವರು ಮಂಗಳವಾರ ನಿಖರ ಸಂಖ್ಯೆಯನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಆದರೆ ಕನಿಷ್ಠ 25 ಶವಗಳನ್ನು ಪತ್ತೆ ಮಾಡಿದ್ದೇವೆ. ಎರಡು ವಿಧದ ಮೃತದೇಹಗಳು ನದಿಯಲ್ಲಿ ತೇಲುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ, ಎಂದು ಅವರು ಹೇಳಿದರು. ಕೆಲವು ಸಮುದಾಯಗಳು ಜಲ ಸಮಾಧಿ ಅಥವಾ ಜಲ ಪ್ರವಾಹವನ್ನು ಅನುಸರಿಸುತ್ತವೆ. ಅಂದರೆ ಶವಗಳನ್ನು ನದಿಯಲ್ಲಿ ವಿಲೇವಾರಿ ಮಾಡಲಾಗುತ್ತದೆ. ಇನ್ನೊಂದು ವಿಧವೆಂದರೆ ಅರ್ಧ ಸುಟ್ಟ ಶವಗಳನ್ನು ದಹನ ಮಾಡುವ ಜನರು ನದಿಯಲ್ಲಿ ಎಸೆಯುತ್ತಾರೆ.
ಗಂಗಾ ನದಿಯುದ್ದಕ್ಕೂ ಈ ಪದ್ಧತಿಗಳನ್ನು ನಿಲ್ಲಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಐಜಿ ಹೇಳಿದರು. ನದಿಗಳಲ್ಲಿ ಶವಗಳನ್ನು ಎಸೆಯದಂತೆ ನೋಡಿಕೊಳ್ಳಲು ನಾವು ನದಿಯ ಪಕ್ಕದ ಹಳ್ಳಿಗಳಲ್ಲಿ ಗಸ್ತು ಹೆಚ್ಚಿಸಿದ್ದೇವೆ ಎಂದು ಐಜಿ ಹೇಳಿದ್ದಾರೆ.
ಶವಗಳು ಇತರ ಜಿಲ್ಲೆಗಳಿಂದ ತೇಲುತ್ತಿರಬಹುದೇ ಎಂಬ ಸಾಧ್ಯತೆಯ ಬಗ್ಗೆ ಮಾತನಾಡಿದ ಭಗತ್ ಶವಗಳು ಎಲ್ಲಿಂದ ಬಂದವು ಎಂದು ಕಂಡುಹಿಡಿಯುವುದು ಕಷ್ಟ. ಆದರೆ ಅವರು ಮೇಲಿನಿಂದ ಹರಿದು ಬಂದಿರಬಹುದು. ಈ ಮೃತದೇಹಗಳು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿವೆ ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಗಂಗಾನದಿಯು ಕಾನ್ಪುರ್, ಹಮೀರ್ಪುರ್, ಪ್ರಯಾಗ್ ರಾಜ್ , ಚಂದೌಲಿ, ವಾರಣಾಸಿ, ಗಾಜಿಪುರದ ಮೂಲಕ ಹರಿಯುತ್ತದೆ ಮತ್ತು ನಂತರ ಬಿಹಾರದ ಬಕ್ಸಾರ್ ಜಿಲ್ಲೆಗೆ ಪ್ರವೇಶಿಸುತ್ತದೆ.
ಇದನ್ನೂ ಓದಿ: 40 ಕೊರೊನಾ ಸೋಂಕಿತರ ಮೃತದೇಹಗಳು ಗಂಗಾ ನದಿಯಲ್ಲಿ ತೇಲುತ್ತಿರುವುದು ಕಾಣಿಸಿವೆ
ಗಂಗಾ ನದಿಯಲ್ಲಿ ಮೃತದೇಹಗಳು ತೇಲಿ ಬಂದಿರುವುದು ದುರದೃಷ್ಟಕರ: ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೆಖಾವತ್
Published On - 2:07 pm, Wed, 12 May 21