ಗಂಗಾ ನದಿಯಲ್ಲಿ ಮೃತದೇಹಗಳು ತೇಲಿ ಬಂದಿರುವುದು ದುರದೃಷ್ಟಕರ: ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೆಖಾವತ್

ಬಿಹಾರದ ಬಕ್ಸಾರ್ ಪ್ರದೇಶದಲ್ಲಿ ಗಂಗಾ ನದಿಯಲ್ಲಿ ಶವಗಳು ತೇಲಿ ಬಂದ ಘಟನೆ ದುರದೃಷ್ಟಕರ. ಇದು ಖಂಡಿತವಾಗಿಯೂ ತನಿಖೆಯ ವಿಷಯವಾಗಿದೆ. ಮೋದಿ ಸರ್ಕಾರ 'ತಾಯಿ' ಗಂಗೆಯ ಸ್ವಚ್ಛತೆಗೆ ಬದ್ಧವಾಗಿದೆ ಎಂದು ಶೆಖಾವತ್ ಟ್ವೀಟ್ ಮಾಡಿದ್ದಾರೆ.

ಗಂಗಾ ನದಿಯಲ್ಲಿ ಮೃತದೇಹಗಳು ತೇಲಿ ಬಂದಿರುವುದು ದುರದೃಷ್ಟಕರ: ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೆಖಾವತ್
ಗಂಗಾನದಿ
Follow us
ರಶ್ಮಿ ಕಲ್ಲಕಟ್ಟ
|

Updated on: May 11, 2021 | 3:07 PM

ದೆಹಲಿ: ಬಿಹಾರದ ಗಂಗಾ ನದಿಯಲ್ಲಿ ಮೃತದೇಹಗಳು ತೇಲಿ ಬಂದಿರುವುದು ದುರದೃಷ್ಟಕರ ಎಂದು ಹೇಳಿದ ಜಲಶಕ್ತಿ ಸಚಿವಾಲಯದ ಕೇಂದ್ರ ಸಚಿವ ಗಜೇಂದ್ರಸಿಂಗ್ ಶೆಖಾವತ್, ಇದಕ್ಕೆ ಸಂಬಂಧಪಟ್ಟ ರಾಜ್ಯಗಳು ಗಮನ ಹರಿಸಬೇಕು ಎಂದು ಹೇಳಿದ್ದಾರೆ. ಬಿಹಾರದ ಬಕ್ಸಾರ್ ಪ್ರದೇಶದಲ್ಲಿ ಗಂಗಾ ನದಿಯಲ್ಲಿ ಶವಗಳು ತೇಲಿ ಬಂದ ಘಟನೆ ದುರದೃಷ್ಟಕರ. ಇದು ಖಂಡಿತವಾಗಿಯೂ ತನಿಖೆಯ ವಿಷಯವಾಗಿದೆ. ಮೋದಿ ಸರ್ಕಾರ ‘ತಾಯಿ’ ಗಂಗೆಯ ಸ್ವಚ್ಛತೆಗೆ ಬದ್ಧವಾಗಿದೆ. ಈ ಘಟನೆ ಅನಿರೀಕ್ಷಿತವಾಗಿದೆ. ಸಂಬಂಧಪಟ್ಟ ರಾಜ್ಯಗಳು ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಶೆಖಾವತ್ ಟ್ವೀಟ್ ಮಾಡಿದ್ದಾರೆ. ಬಿಹಾರದ ಬಕ್ಸಾರ್‌ನ ಗಂಗಾ ನದಿಯಲ್ಲಿ ಸೋಮವಾರ ಸುಮಾರು ಒಂದು ಡಜನ್ ಶವಗಳು ಪತ್ತೆಯಾಗಿವೆ. ಗಂಗಾದಲ್ಲಿ ಕಾಣಿಸಿಕೊಂಡ 10 ರಿಂದ 12 ಶವಗಳು ದೂರದಿಂದ ತೇಲಿ ಬಂದಿವೆ. ಈ ಶವಗಳು ಕಳೆದ ಐದರಿಂದ ಏಳು ದಿನಗಳಿಂದ ತೇಲುತ್ತಿದ್ದವು ಎಂದು ತೋರುತ್ತದೆ. ಮೃತದೇಹಗಳನ್ನು ನದಿಗಳಿಗೆ ಬಿಸಾಡುವ ಸಂಪ್ರದಾಯ ನಮ್ಮಲ್ಲಿ ಇಲ್ಲ ಈ ಶವಗಳನ್ನು ಅಂತ್ಯಸಂಸ್ಕಾರ ಮಾಡಲು ನಾವು ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಬಕ್ಸಾರ್ ಉಪ ವಿಭಾಗೀಯ ಅಧಿಕಾರಿ (ಎಸ್‌ಡಿಒ) ಕೆ.ಕೆ.ಉಪಾಧ್ಯಾಯ್ ಹೇಳಿದರು.

ಈ ಶವಗಳು ವಾರಣಾಸಿ, ಅಲಹಾಬಾದ್ ಅಥವಾ ಇನ್ನಾವುದೇ ಸ್ಥಳದಿಂದ ಬಂದಿದೆಯೆ ಎಂದು ಪತ್ತೆಹಚ್ಚಬೇಕಿದೆ ಎಂದಿದ್ದಾರೆ ಉಪಾಧ್ಯಾಯ್.

ಬಿಹಾರದ ಬಕ್ಸರ್ ನಗರದ ಬಳಿಯ ಗಂಗಾ ನದಿಯಲ್ಲಿ ಸೋಮವಾರ ಸುಮಾರು ನೂರಕ್ಕೂ ಹೆಚ್ಚು ಕೊಳೆತ ಮತ್ತು ಉಬ್ಬಿದ ಸ್ಥಿತಿಯಲ್ಲಿರುವ ಮೃತದೇಹಗಳು ಪತ್ತೆಯಾಗಿವೆ. ಕೊವಿಡ್​ನಿಂದ ಮೃತಪಟ್ಟವರ ದೇಹವನ್ನು ಅಂತ್ಯಸಂಸ್ಕಾರ ನಡೆಸದೇ ಗಂಗಾ ನದಿಯಲ್ಲಿ ತೇಲಿಬಿಡಲಾಗಿದೆ ಎಂದು ಮೇಲ್ನೋಟಕ್ಕೆ ಶಂಕೆ ವ್ಯಕ್ತವಾಗಿದೆ. ಗಂಗಾ ನದಿಯಲ್ಲಿ ನೆರೆ ರಾಜ್ಯ ಉತ್ತರ ಪ್ರದೇಶದಿಂದ ಕೊವಿಡ್​ನಿಂದ ಮೃತಪಟ್ಟವರ ಮೃತದೇಹಗಳನ್ನು ತೇಲಿಬಿಡಲಾಗಿದೆ ಎಂದು ಸ್ಥಳಿಯ ಆಡಳಿತ ಅಭಿಪ್ರಾಯಪಟ್ಟಿದೆ.

ಸುಮಾರು 40ರಿಂದ 45 ಮೃತದೇಹಗಳು ನದಿಯಲ್ಲಿ ತೇಲುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿವೆ ಎಂದು ಚೌಸಾ ಜಿಲ್ಲಾಡಳಿತದ ಅಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದಾರೆ. ಇನ್ನು ಕೆಲವರ ಪ್ರಕಾರ ನೂರಕ್ಕೆ ಹೆಚ್ಚು ಮೃತದೇಹಗಳು ಗಂಗಾ ನದಿಯಲ್ಲಿ ತೇಲುತ್ತಿವೆ. ಯಾರೋ ದುಷ್ಕರ್ಮಿಗಳು ಈ ಮೃತದೇಹಗಳನ್ನು ನದಿಗೆ ಎಸೆದಿರುವ ಶಂಕೆಯಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಮೃತದೇಹವೊಂದಕ್ಕೆ ತಲಾ ₹ 500 ನೀಡಿ ಅಂತ್ಯಸಂಸ್ಕಾರ ನಡೆಸಲಾಗುತ್ತಿದ್ದು ಸುಮಾರು ಐದರಿಂದ ಏಳು ದಿನಗಳಿಂದಲೂ ಮೃತದೇಹಗಳು ನೀರಿನಲ್ಲಿರುವ ಶಂಕೆ ವ್ಯಕ್ತವಾಗಿದೆ.

ಬಿಹಾರದ ಈ ಭಾಗದಲ್ಲಿ ಮೃತದೇಹಗಳನ್ನು ನದಿಗೆ ಎಸೆಯುವ ಪದ್ಧತಿ ಇಲ್ಲ. ಹೀಗಾಗಿ ಈ ಮೃತದೇಹಗಳು ಉತ್ತರ ಪ್ರದೇಶದಿಂದಲೆ ಬಂದಿವೆ. ಆದರೆ ಉತ್ತರ ಪ್ರದೇಶದ ಯಾವ ಭಾಗದಿಂದ ತೇಲಿಬಂದಿವೆ ಎಂಬುದನ್ನು ತನಿಖೆ ಮಾಡಬೇಕಿದೆ ಎಂದು ಎನ್​ಡಿಟಿವಿಗೆ ಸ್ಥಳೀಯ ಆಡಳಿತದ ಅಧಿಕಾರಿಯೋರ್ವರು ತಿಳಿಸಿದ್ದಾರೆ. ವಾರಣಾಸಿ, ಅಲಹಾಬಾದ್ ಅಥವಾ ಬಹ್ರೇಚ್​ ಭಾಗಗಳಿಂದ ಈ ಮೃತದೇಹಗಳನ್ನು ಗಂಗಾ ನದಿಯಲ್ಲಿ ತೇಲಿಬಿಡಲಾಗಿದೆ ಎಂದು ಹಲವರು ಅಭಿಪ್ರಾಯಪಡುತ್ತಾರೆ.

ಇದನ್ನೂ  ಓದಿ:  ಗಂಗಾ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿರುವ ಮೃತದೇಹಗಳು ಪತ್ತೆ; ಕೊವಿಡ್ ಸೋಂಕಿನಿಂದ ಮೃತಪಟ್ಟ ಶಂಕೆ

(Corpses found floating in Ganga river in Bihar is unfortunate says Jal Shakti minister Gajendra Singh Shekhawat)