ಅರವಿಂದ್ ಕೇಜ್ರಿವಾಲ್ ಅವರ ಕುರ್ಚಿಯಲ್ಲಿ ಕೂರದೆ ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಅತಿಶಿ

|

Updated on: Sep 23, 2024 | 4:30 PM

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ರಾಜೀನಾಮೆ ನಂತರ ದೆಹಲಿಯ 8ನೇ ಮುಖ್ಯಮಂತ್ರಿಯಾಗಿ ಎಎಪಿ ನಾಯಕ ಅತಿಶಿ ಇಂದು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹಿಂದೂ ಮಹಾಕಾವ್ಯ ರಾಮಾಯಣವನ್ನು ಉಲ್ಲೇಖಿಸಿರುವ ಸಿಎಂ ಅತಿಶಿ "ನನ್ನ ಪರಿಸ್ಥಿತಿಯು ರಾಮಾಯಣ ಕಾಲದ ಭಾರತದಂತಿದೆ. ಭಗವಾನ್ ಶ್ರೀರಾಮನು ವನವಾಸಕ್ಕೆ ಹೋದಾಗ ಅವನ ಅನುಪಸ್ಥಿತಿಯಲ್ಲಿ ಭರತ ಆಳಬೇಕಾಯಿತು" ಎಂದಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರ ಕುರ್ಚಿಯಲ್ಲಿ ಕೂರದೆ ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಅತಿಶಿ
ಅತಿಶಿ
Follow us on

ನವದೆಹಲಿ: ದೆಹಲಿ ಮುಖ್ಯಮಂತ್ರಿಯಾಗಿ ಅತಿಶಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಕಚೇರಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಕುರ್ಚಿ ಪಕ್ಕದಲ್ಲಿ ಬೇರೊಂದು ಕುರ್ಚಿಯನ್ನು ತರಿಸಿಕೊಂಡು ಅತಿಶಿ ಅಧಿಕಾರ ಸ್ವೀಕರಿಸುವ ಮೂಲಕ ತಮ್ಮ ಗುರುವಿಗೆ ಗೌರವ ತೋರಿಸಿದ್ದಾರೆ. 43 ವರ್ಷದ ಸಿಎಂ ಅತಿಶಿ ಅವರು ಮುಂಬರುವ ಚುನಾವಣೆಗಳವರೆಗೆ ಮುಂದಿನ 4 ತಿಂಗಳ ಕಾಲ ಸರ್ಕಾರವನ್ನು ನಡೆಸುವುದಾಗಿ ಪ್ರತಿಜ್ಞೆ ಮಾಡಿದರು. ಭರತನು ಭಗವಾನ್ ರಾಮನ ಸಿಂಹಾಸನದಲ್ಲಿ ಕೂರದೆ, ಆ ಸಿಂಹಾಸನದಲ್ಲಿ ರಾಮನ ಪಾದುಕೆಯಿಟ್ಟು ಆಳ್ವಿಕೆ ನಡೆಸಿದಂತೆಯೇ ನಾನು ಕೇಜ್ರಿವಾಲ್ ಅವರ ಬದಲು ಆಡಳಿತ ನಡೆಸಲಿದ್ದೇನೆ ಎಂದಿದ್ದಾರೆ.

ಅಧಿಕಾರ ವಹಿಸಿಕೊಂಡ ನಂತರ, ಅತಿಶಿ ತನ್ನ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕಡೆಗೆ ಸಾಂಕೇತಿಕ ಸೂಚಕದಲ್ಲಿ ತನ್ನ ಪಕ್ಕದಲ್ಲಿ ಅವರು ಕೂರುತ್ತಿದ್ದ ಖಾಲಿ ಕುರ್ಚಿಯನ್ನು ಇರಿಸಿದ್ದಾರೆ. “ಈ ಕುರ್ಚಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸೇರಿದ್ದು, ದೆಹಲಿಯ ಜನರು 4 ತಿಂಗಳ ನಂತರ ಅವರನ್ನು ಪುನಃ ಸ್ಥಾಪಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ” ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಒಂದು ವಾರದೊಳಗೆ ಅಧಿಕೃತ ಸಿಎಂ ನಿವಾಸ ಖಾಲಿ ಮಾಡಲಿದ್ದಾರೆ ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್ ಸರ್ಕಾರದಿಂದ ಪ್ರಮುಖ ಸದಸ್ಯರು ತಮ್ಮ ಖಾತೆಗಳನ್ನು ಉಳಿಸಿಕೊಂಡು ಶನಿವಾರದಂದು ಅತಿಶಿ ಅವರು ತಮ್ಮ ಸಂಪುಟದೊಂದಿಗೆ ಪ್ರಮಾಣ ವಚನ ಸ್ವೀಕರಿಸಿದರು. ಅತಿಶಿ ಸ್ವತಃ ಶಿಕ್ಷಣ, ಹಣಕಾಸು, ವಿದ್ಯುತ್, ಮತ್ತು PWDಯಂತಹ ನಿರ್ಣಾಯಕ ಇಲಾಖೆಗಳನ್ನು ನೋಡಿಕೊಳ್ಳುತ್ತಿದ್ದರು. ಒಟ್ಟು 13 ಪೋರ್ಟ್‌ಫೋಲಿಯೊಗಳನ್ನು ನಿರ್ವಹಿಸುತ್ತಿದ್ದರು. 8 ಖಾತೆಗಳನ್ನು ಹೊಂದಿರುವ ಸೌರಭ್ ಭಾರದ್ವಾಜ್ ಸಚಿವರಾಗಿ ಅದೇ ದಿನ ಅಧಿಕಾರ ವಹಿಸಿಕೊಂಡರು.


ಸುಷ್ಮಾ ಸ್ವರಾಜ್ ಮತ್ತು ಶೀಲಾ ದೀಕ್ಷಿತ್ ನಂತರ ಅತಿಶಿ ಅವರು ದೇಶದ 17ನೇ ಮಹಿಳಾ ಮುಖ್ಯಮಂತ್ರಿಯಾದರು. ಅಧಿಕಾರ ವಹಿಸಿಕೊಂಡ ನಂತರ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅತಿಶಿ, ರಾಮಾಯಣದಲ್ಲಿ ಶ್ರೀರಾಮ ವನವಾಸಕ್ಕೆ ಹೋದಾಗ ಭರತ ಸಿಂಹಾಸನದ ಮೇಲೆ ಶ್ರೀರಾಮನ ಪಾದುಕೆ ಇಟ್ಟು ಆಳ್ವಿಕೆ ಮಾಡಿದ್ದ. ಹಾಗೆಯೇ ನಾನು ಇಂದು ಕೇಜ್ರಿವಾಲ್ ಬದಲಾಗಿ ದೆಹಲಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಇಂದು ನನ್ನ ಹೃದಯದಲ್ಲಿ ಭರತ ಅನುಭವಿಸಿದ ಅದೇ ನೋವು ಇದೆ. ಭರತ ಭಗವಾನ್ ಶ್ರೀರಾಮನ ‘ಖದೌನ್’ ಇಟ್ಟುಕೊಂಡು ಕೆಲಸ ಮಾಡಿದಂತೆಯೇ ಮುಂದಿನ ದಿನಗಳಲ್ಲಿ ನಾನು 4 ತಿಂಗಳು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಕೇಜ್ರಿವಾಲ್ ಅವರನ್ನು ಮತ್ತೆ ದೆಹಲಿ ಸಿಎಂ ಮಾಡುವುದೇ ನಮ್ಮ ಗುರಿ; ಪ್ರಮಾಣ ವಚನದ ಬಳಿಕ ಅತಿಶಿ ಸುದ್ದಿಗೋಷ್ಠಿ

ಅತಿಶಿ ಅವರು ಶನಿವಾರ ತಮ್ಮ ಹೊಸ ಮಂತ್ರಿ ಮಂಡಳಿಯೊಂದಿಗೆ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪಕ್ಷವು ಘೋಷಿಸಿದ ಹೊಸ ಸಚಿವ ಸಂಪುಟದಲ್ಲಿ ಸುಲ್ತಾನ್‌ಪುರ್ ಮಜ್ರಾ ಶಾಸಕ ಮುಖೇಶ್ ಅಹ್ಲಾವತ್, ಸಚಿವರಾದ ಗೋಪಾಲ್ ರಾಯ್, ಕೈಲಾಶ್ ಗಹ್ಲೋಟ್, ಸೌರಭ್ ಭಾರದ್ವಾಜ್ ಮತ್ತು ಇಮ್ರಾನ್ ಹುಸೇನ್ ಅವರು ಸೇರಿದ್ದಾರೆ. ಎಎಪಿ ಶಾಸಕರು ಈ ವಾರದ ಆರಂಭದಲ್ಲಿ ಸಭೆ ನಡೆಸಿ ಅತಿಶಿ ಅವರನ್ನು ಸಿಎಂ ಆಗಿ ಸರ್ವಾನುಮತದಿಂದ ಆಯ್ಕೆ ಮಾಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:10 pm, Mon, 23 September 24