ದೆಹಲಿ: ಮಹಾರಾಷ್ಟ್ರದಲ್ಲಿ ಔರಂಗಾಬಾದ್ಗೆ ಸಂಭಾಜಿನಗರ ಎಂದು ಹೆಸರಿಡುವ ವಿಚಾರಕ್ಕೆ ಶಿವಸೇನೆ ಮತ್ತು ಕಾಂಗ್ರೆಸ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ.
ಔರಂಗಾಬಾದ್ಗೆ ಸಂಭಾಜಿನಗರವೆಂದು ನಾಮಕರಣ ಮಾಡಲು ಶಿವಸೇನೆ ತುದಿಗಾಲಿನಲ್ಲಿ ನಿಂತಿದ್ದರೂ, ಅದರ ಮೈತ್ರಿ ಪಕ್ಷ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ. ಈ ಬಗ್ಗೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಸೇನೆ ಸಂಸದ ಸಂಜಯ್ ರಾವತ್, ನಮಗೇನೂ ಗೊತ್ತಿಲ್ಲ..ಔರಂಗಾಬಾದ್ ಇನ್ನು ಮುಂದೆ ಸಂಭಾಜಿನಗರ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಮಗೆ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ. ಹಾಗೇ ಮುಂದುವರಿಯಲಿದೆ ಕೂಡ ಎಂದು ತಿಳಿಸಿದ್ದಾರೆ.
ಆದರೆ ಈ ವಿಚಾರಕ್ಕೆ ಕಾಂಗ್ರೆಸ್ ಯಾಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ನಿರ್ಧಾರವನ್ನಂತೂ ತೆಗೆದುಕೊಂಡು ಆಗಿದೆ. ಇದು ಜನರ ಭಾವನೆಗೆ ಸಂಬಂಧಪಟ್ಟ ವಿಷಯ ಆಗಿದ್ದರಿಂದ ಕಾಂಗ್ರೆಸ್ ವಿರೋಧಿಸುತ್ತಿರಬಹುದು. ನಾವು ಈ ಬಗ್ಗೆ ಚರ್ಚಿಸುತ್ತೇವೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಸಾಮ್ನಾದಲ್ಲಿ ಅಸಮಾಧಾನ
ಇನ್ನು ಔರಂಗಾಬಾದ್ಗೆ ಸಂಭಾಜಿನಗರ ಎಂದು ನಾಮಕರಣ ಮಾಡಲು ವಿರೋಧಿಸುತ್ತಿರುವ ಕಾಂಗ್ರೆಸ್ ಬಗ್ಗೆ ಶಿವಸೇನಾ ನಿನ್ನೆ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿತ್ತು. ಔರಂಗಾಬಾದ್ ಹೆಸರು ಬದಲಾವಣೆ ಮಾಡುವುದರಿಂದ ಮುಸ್ಲಿಂ ಸಮುದಾಯಕ್ಕೆ ಬೇಸರವಾಗಬಹುದು ಎಂಬ ಕಾರಣಕ್ಕೆ ಕೆಲವು ಜಾತ್ಯತೀತಗಳು ವಿರೋಧ ಮಾಡುತ್ತಿವೆ. ಆ ಪಕ್ಷಗಳಿಗೆ ತಮ್ಮ ವೋಟ್ಬ್ಯಾಂಕ್ ಬಗ್ಗೆ ಚಿಂತೆಯಾಗಿರಬಹುದು ಎಂದು ಹೇಳಿತ್ತು.
ಔರಂಗಜೇಬ್ಗೆ ಇತರ ಧರ್ಮಗಳ ಬಗ್ಗೆ ಅತಿಯಾದ ದ್ವೇಷ ಇತ್ತು. ಹಿಂದು ಮತ್ತು ಸಿಖ್ರಿಗೆ ಆತ ತುಂಬ ಹಿಂಸೆ ನೀಡಿದ್ದಾನೆ. ಔರಂಗಜೇಬನಿಗೆ ಸಂಬಂಧಪಟ್ಟ ಅವಶೇಷ, ಹೆಸರಿನ ಬಗ್ಗೆ ನಾವು ಗಮನಹರಿಸಬೇಕಿಲ್ಲ. ಅಷ್ಟಕ್ಕೂ ಔರಂಗಜೇಬ್ ಯಾರು? ಅದನ್ನು ನಾವು ವಿವರಿಸುವ ಅಗತ್ಯವಿಲ್ಲ ಎಂದುಕೊಳ್ಳುತ್ತೇವೆ. ಒಬ್ಬ ನಿಜವಾದ ಮರಾಠಿಗ, ಹಿಂದೂಗಳು ಈ ಔರಂಗಜೇಬನ ವಿಚಾರದಲ್ಲಿ ಆಸಕ್ತಿ ಹೊಂದುವ ಅಗತ್ಯವಿಲ್ಲ ಎಂದು ಕಟುವಾಗಿ ಪತ್ರಿಕೆಯಲ್ಲಿ ಬರೆಯಲಾಗಿತ್ತು.
ಶಿವಸೇನೆಯದ್ದು ಬೂಟಾಟಿಕೆ ಎಂದ ಕಾಂಗ್ರೆಸ್
ಹಾಗೇ ಔರಂಗಾಬಾದ್ಗೆ ಮರುನಾಮಕರಣ ಮಾಡಲು ಮುಂದಾಗಿದ್ದು ಶಿವಸೇನೆಯ ಬೂಟಾಟಿಕೆ ಎಂದು ಮಹಾರಾಷ್ಟ್ರ ಕಂದಾಯ ಸಚಿವ, ಕಾಂಗ್ರೆಸ್ ನಾಯಕ ಬಾಳಾಸಾಹೇಬ್ ಥೋರಟ್ ಹೇಳಿದ್ದಾರೆ. ಅಷ್ಟೇ ಅಲ್ಲ, ಕಳೆದ ಐದು ವರ್ಷಗಳಲ್ಲಿ ಈ ಬಗ್ಗೆ ಮಾತನಾಡದ ಶಿವಸೇನೆ ಈಗ್ಯಾಕೆ ಮಾತನಾಡುತ್ತಿದೆ ಎಂದೂ ಪ್ರಶ್ನಿಸಿದ್ದಾರೆ. ತಮ್ಮ ರಾಜಕೀಯ ಅನುಕೂಲಕ್ಕಾಗಿ ಇವರು ಔರಂಗಾಬಾದ್ಗೆ ಬೇರೆ ಹೆಸರಿಡಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂದು ಠಾಕ್ರೆಗೆ ಏನೇ ಗೊಂದಲಗಳಿದ್ದರೂ ಅವರು ಕಾಂಗ್ರೆಸ್ ಪಕ್ಷವನ್ನೇ ಪ್ರಶ್ನಿಸಬೇಕು -ಸಿ.ಟಿ. ರವಿ