Assam ಅಸ್ಸಾಂನ ನಾಗಾಂವ್‌ನಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣ; ಬುಲ್ಡೋಜರ್​​ನಿಂದ ಶಂಕಿತ ಆರೋಪಿಗಳ ಮನೆ ಧ್ವಂಸ ಮಾಡಿದ ಜಿಲ್ಲಾಡಳಿತ

ಭಾನುವಾರ ಬೆಳಿಗ್ಗೆ ಠಾಣೆಯಿಂದ 6 ಕಿಮೀ ದೂರದಲ್ಲಿರುವ ಗ್ರಾಮಕ್ಕೆ ಬುಲ್ಡೋಜರ್‌ ಬಂದಿದ್ದು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಭಾಗಿಯಾಗಿದ್ದವರ ಮನೆಗಳನ್ನು ಕೆಡವಿದವು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Assam ಅಸ್ಸಾಂನ ನಾಗಾಂವ್‌ನಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣ; ಬುಲ್ಡೋಜರ್​​ನಿಂದ  ಶಂಕಿತ ಆರೋಪಿಗಳ ಮನೆ ಧ್ವಂಸ ಮಾಡಿದ ಜಿಲ್ಲಾಡಳಿತ
ಶಂಕಿತ ಆರೋಪಿಗಳ ಮನೆ ಧ್ವಂಸ ಮಾಡಿರುವುದು
Updated By: ರಶ್ಮಿ ಕಲ್ಲಕಟ್ಟ

Updated on: May 22, 2022 | 5:29 PM

ಅಸ್ಸಾಂನ (Assam) ನಾಗಾಂವ್‌ (Nagaon) ಜಿಲ್ಲೆಯಲ್ಲಿ ಶನಿವಾರ ಜನರ ಗುಂಪೊಂದು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿತ್ತು. ಇದೀಗ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿರುವ ಆರೋಪಿಗಳ ಮನೆಗಳನ್ನು ನಾಗಾಂವ್‌ ಜಿಲ್ಲಾಡಳಿತದ ಅಧಿಕಾರಿಗಳು ಭಾನುವಾರ ನೆಲಸಮಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಲೋನಬೋರಿ ಗ್ರಾಮದ (Salonabori village)ಸುಮಾರು 40 ಜನರ ಗುಂಪೊಂದು ಸ್ಥಳೀಯ ನಿವಾಸಿಯೊಬ್ಬರ ಕಸ್ಟಡಿ ಸಾವಿನ ಪ್ರಕರಣದ ನಂತರ ಶನಿವಾರ ಮಧ್ಯಾಹ್ನ ಧಿಂಗ್ ಪ್ರದೇಶದ ಬಟದ್ರಾವ ಪೊಲೀಸ್ ಠಾಣೆಯ ಒಂದು ಭಾಗಕ್ಕೆ ಬೆಂಕಿ ಹಚ್ಚಿತ್ತು. ನಾಗಾಂವ್ ಜಿಲ್ಲಾಡಳಿತ ಶನಿವಾರ ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿದ್ದು, ಪೊಲೀಸರು ಬಟದ್ರಾವ ಠಾಣೆಯ ಪ್ರಭಾರಿ ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ. ಭಾನುವಾರ ಬೆಳಿಗ್ಗೆ ಠಾಣೆಯಿಂದ 6 ಕಿಮೀ ದೂರದಲ್ಲಿರುವ ಗ್ರಾಮಕ್ಕೆ ಬುಲ್ಡೋಜರ್‌ ಬಂದಿದ್ದು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಭಾಗಿಯಾಗಿದ್ದವರ ಮನೆಗಳನ್ನು ಕೆಡವಿದವು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗುಂಪಿನಲ್ಲಿ 40 ಜನರಿದ್ದರು. ನಾವು ಏಳು ಮಂದಿಯನ್ನು ಗುರುತಿಸಿ ಬಂಧಿಸಿದ್ದೇವೆ.21 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಸ್ಸಾಂ ವಿಶೇಷ ಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಜಿ ಪಿ ಸಿಂಗ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಆಪಾದಿತ ಕಸ್ಟಡಿ ಸಾವಿಗೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ ಅಂತಹ ಆರೋಪವಿದ್ದರೆ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವುದಾ? ಬೆಂಕಿ ಹಚ್ಚಲು ಅವಕಾಶ ನೀಡಲಾಗುವುದಿಲ್ಲ. ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನು ಗುರುತಿಸಲು ವಿಡಿಯೊ ತುಣುಕನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಜಿಲ್ಲಾಡಳಿತ ಆರೋಪಿಗಳ ಮನೆಗಳನ್ನು ಧ್ವಂಸಗೊಳಿಸಿರುವ ಬಗ್ಗೆ ಬರ್ಪೇಟಾದ ಕಾಂಗ್ರೆಸ್ ಸಂಸದ ಅಬ್ದುಲ್ ಖಲೀಕ್ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪೊಲೀಸ್ ಠಾಣೆ ಮೇಲಿನ ದಾಳಿಯನ್ನು ನಾವು ಎಂದಿಗೂ ಬೆಂಬಲಿಸುವುದಿಲ್ಲ. ಆದರೆ ಪೊಲೀಸರು ದಾಳಿ ನಡೆಸಿದವರ ಮನೆಗಳನ್ನು ನೆಲಸಮ ಮಾಡುವುದು ಮಾನವ ಹಕ್ಕುಗಳ ನೇರ ಉಲ್ಲಂಘನೆಯಾಗಿದೆ, ”ಎಂದು ಅವರು ಟ್ವೀಟ್ ಮಾಡಿದ್ದಾರೆ.


ಪೊಲೀಸರ ಪ್ರಕಾರ ಶುಕ್ರವಾರ ರಾತ್ರಿ ಸಲೋನಬೋರಿ ಗ್ರಾಮದ ಮೀನು ವ್ಯಾಪಾರಿ ಸೋಫಿಕುಲ್ ಇಸ್ಲಾಂ ಎಂಬಾತ ಮದ್ಯಪಾನ ಮಾಡದ್ದಾನೆ ಎಂಬ ದೂರಿನ ಆಧಾರದ ಮೇಲೆ ಠಾಣೆಗೆ ಕರೆತರಲಾಗಿತ್ತು.
ಮರುದಿನ ಬೆಳಿಗ್ಗೆ ಅವನ ಸಾವಿಗೆ ಕಾರಣವಾದ ಘಟನೆಗಳು ವಿವಾದವಾಗಿವೆ. ಆತನ ಪತ್ನಿ ಆತನನ್ನು  ಆಸ್ಪತ್ರೆಗೆ ಕರೆದೊಯ್ದ ನಂತರ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದರೆ, ಆಸ್ಪತ್ರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದರು ಎಂದು ಕುಟುಂಬದವರು ಹೇಳುತ್ತಿದ್ದಾರೆ.


ಇಸ್ಲಾಂನನ್ನು ಶನಿವಾರ ಬೆಳಿಗ್ಗೆ ಬಿಡುಗಡೆ ಮಾಡಿ ಅವನ ಹೆಂಡತಿಗೆ ಹಸ್ತಾಂತರಿಸಲಾಗಿದೆ. “ಅವನ ಹೆಂಡತಿ ಅವನಿಗೆ ಸ್ವಲ್ಪ ನೀರು,ಆಹಾರವನ್ನೂ ಕೊಟ್ಟಳು. ನಂತರ ಅವರು ಅನಾರೋಗ್ಯದ ಬಗ್ಗೆ ದೂರು ನೀಡಿದರು. ಆಮೇಲೆ ಅವನ್ನು ಎರಡು ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ದುರದೃಷ್ಟವಶಾತ್ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಅಸ್ಸಾಂನ ಪೊಲೀಸ್ ಮಹಾನಿರ್ದೇಶಕರ ಕಚೇರಿಯ ಪೊಲೀಸ್ ಹೇಳಿಕೆಯಲ್ಲಿ ಹೇಳಲಾಗಿದೆ.

ಬಟದ್ರವ ಠಾಣೆಯ ಪೊಲೀಸರು ಆತನ ಬಿಡುಗಡೆಗೆ 10,000 ರೂಪಾಯಿ ಮತ್ತು ಬಾತುಕೋಳಿಯನ್ನು ಲಂಚವಾಗಿ ಕೇಳಿದರು ಎಂದು ಇಸ್ಲಾಂನ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಇಸ್ಲಾಂ ಅವರ ಪತ್ನಿ ಶನಿವಾರ ಬೆಳಗ್ಗೆ ಬಾತುಕೋಳಿಯೊಂದಿಗೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ನಂತರ ಅವಳು ಹಣ ತೆಗೆದುಕೊಂಡು ಬಂದಾಗ ತನ್ನ ಪತಿಯನ್ನು ನಾಗಾಂವ್‌ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಆಕೆಗೆ ತಿಳಿಸಲಾಯಿತು. ಆಕೆ ಅಲ್ಲಿಗೆ ಹೋದಾಗ ಇಸ್ಲಾಂ ಮೃತಪಟ್ಟಿದ್ದ ಎಂದು ಗ್ರಾಮಸ್ಥರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಕೆಲವು ಗಂಟೆಗಳ ನಂತರ ಅಂದರೆ ಮಧ್ಯಾಹ್ನ 3.30 ರ ಸುಮಾರಿಗೆ ಗುಂಪೊಂದು ಪೊಲೀಸ್ ಠಾಣೆಗೆ ಘೇರಾವ್ ಹಾಕಿ ಒಂದು ಭಾಗವನ್ನು ಸುಟ್ಟು ಹಾಕಿತು. ಘಟನೆಯ ವಿಡಿಯೊಗಳುಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮಹಿಳೆಯೊಬ್ಬರು ಸ್ಕೂಟರ್‌ಗೆ ಇಂಧನ ಸಿಂಪಡಿಸಿ ಬೆಂಕಿ ಹಚ್ಚುತ್ತಿರುವುದನ್ನು ತೋರಿಸುತ್ತದೆ.

ಈ ಘಟನೆಗೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರು ಬಟದ್ರಾವ ಠಾಣೆಯ ಉಸ್ತುವಾರಿ ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ, ಬೆಂಕಿ ಹಚ್ಚುವಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ. ನಾವು ಯಾವುದೇ ಪೊಲೀಸ್ ಸಿಬ್ಬಂದಿಯನ್ನು ತಪ್ಪಿತಸ್ಥರೆಂದು ಗುರುತಿಸಲು ಬಿಡುವುದಿಲ್ಲವಾದರೂ, ಪೊಲೀಸ್ ಠಾಣೆಗಳನ್ನು ಸುಡುವ ಮೂಲಕ ಭಾರತೀಯ ನ್ಯಾಯ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಭಾವಿಸುವ ಅಂಶಗಳ ವಿರುದ್ಧ ನಾವು ಇನ್ನೂ ಕಠಿಣವಾಗಿ ಕಾರ್ಯನಿರ್ವಹಿಸುತ್ತೇವೆ. ನಾವು ಇದನ್ನು ಸುಲಭವಾಗಿ ಅನುಮತಿಸುವುದಿಲ್ಲ. ಎಲ್ಲಾ ಸಮಾಜವಿರೋಧಿ ಅಂಶಗಳಿಗೆ ಇದು ಮೊದಲ ಮತ್ತು ಕೊನೆಯ ಎಚ್ಚರಿಕೆಯಾಗಲಿ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 4:42 pm, Sun, 22 May 22