Ayodhya Deepotsav: ಇಂದು ಅಯೋಧ್ಯೆ ದೀಪೋತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ; ರಾಮಜನ್ಮ ಭೂಮಿಯಲ್ಲಿ ಬೆಳಗಲಿವೆ 15 ಲಕ್ಷ ದೀಪಗಳು

ಅಯೋಧ್ಯೆಯ ಆಲಯದ ಘಾಟ್​ನಲ್ಲಿ ಇಂದು (ಭಾನುವಾರ) 15 ಲಕ್ಷ ಹಣತೆಗಳು ಬೆಳಗಲಿವೆ. ಈ ಬಾರಿ ಪ್ರಧಾನಿ ಮೋದಿ ಅಯೋಧ್ಯೆಯ ದೀಪೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

Ayodhya Deepotsav: ಇಂದು ಅಯೋಧ್ಯೆ ದೀಪೋತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ; ರಾಮಜನ್ಮ ಭೂಮಿಯಲ್ಲಿ ಬೆಳಗಲಿವೆ 15 ಲಕ್ಷ ದೀಪಗಳು
ಅಯೋಧ್ಯೆ ದೀಪೋತ್ಸವದ ಸಾಂದರ್ಭಿಕ ಚಿತ್ರ
Updated By: ಸುಷ್ಮಾ ಚಕ್ರೆ

Updated on: Oct 23, 2022 | 6:27 AM

ಅಯೋಧ್ಯೆ: ಅಯೋಧ್ಯೆಯಲ್ಲಿ ಇಂದು (ಅ. 23) ದೀಪೋತ್ಸವ ಪ್ರಧಾನಿ ನರೇಂದ್ರ ಮೋದಿ (Narendra Modi) ದೀಪಾವಳಿ ಹಬ್ಬವನ್ನು (Deepavali Festival) ಆಚರಿಸಲಿದ್ದಾರೆ. ಅಯೋಧ್ಯೆಯ ದೀಪೋತ್ಸವ (Ayodhya Deepotsav) ಬಹಳ ವಿಶೇಷವಾದುದು. ಶ್ರೀರಾಮ ತನ್ನ 14 ವರ್ಷದ ವನವಾಸ ಮುಗಿಸಿ ವಾಪಾಸ್ ಬಂದ ನಂತರ ಜನರು ಇಡೀ ಅಯೋಧ್ಯೆಯನ್ನು ದೀಪಗಳಿಂದ ಅಲಂಕರಿಸಿ, ಸಂಭ್ರಮಿಸಿದ್ದರು ಎಂಬ ಪ್ರತೀತಿಯಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯ ದೀಪಾವಳಿ ಬಹಳ ಪ್ರಸಿದ್ಧಿ ಪಡೆದಿದೆ.

ಅಯೋಧ್ಯೆಯ ಆಲಯದ ಘಾಟ್​ನಲ್ಲಿ ಇಂದು (ಭಾನುವಾರ) 15 ಲಕ್ಷ ಹಣತೆಗಳು ಬೆಳಗಲಿವೆ. ಈ ಬಾರಿ ಪ್ರಧಾನಿ ಮೋದಿ ಅಯೋಧ್ಯೆಯ ದೀಪೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ಮೋದಿ ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ. ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯ ಶ್ರೀ ರಾಮಜನ್ಮ ಭೂಮಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ನಂತರ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರದ ಪ್ರವಾಸಿ ತಾಣವನ್ನು ವೀಕ್ಷಿಸುತ್ತಾರೆ. ಬಳಿಕ ಶ್ರೀರಾಮನ ‘ರಾಜ್ಯಾಭಿಷೇಕ’ ವೀಕ್ಷಿಸಲು ಪ್ರಧಾನಮಂತ್ರಿ ಶ್ರೀರಾಮ ಕಥಾ ಪಾರ್ಕ್‌ನಲ್ಲಿ ಉಪಸ್ಥಿತರಿರಲಿದ್ದಾರೆ. ಬಳಿಕ, ಸಂಜೆ 6.30ಕ್ಕೆ ಸರಯೂ ಘಾಟ್‌ನಲ್ಲಿ ಆರತಿಯಲ್ಲಿ ಭಾಗವಹಿಸಲಿದ್ದಾರೆ. ನಂತರ ರಾಮ್ ಕಿ ಪೌಡಿ ಘಾಟ್‌ಗಳಲ್ಲಿ ‘ದೀಪೋತ್ಸವ’ದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಕಲಬುರಗಿ: ದೀಪಾವಳಿ ಬೋನಸ್ ನೀಡಿಲ್ಲ ಎಂದು ಟವರ್ ಏರಿದ ಕಾರ್ಮಿಕ

ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಮೆಗಾ ‘ದೀಪೋತ್ಸವ’ವನ್ನು ಆಯೋಜಿಸುತ್ತಿದೆ. 2021ರಲ್ಲಿ ಅಯೋಧ್ಯೆಯ ಸರಯೂ ನದಿಯ ದಡದಲ್ಲಿ 9 ಲಕ್ಷಕ್ಕೂ ಹೆಚ್ಚು ಮಣ್ಣಿನ ಹಣತೆಗಳನ್ನು ಬೆಳಗಿಸುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಲಾಗಿತ್ತು. ಇದಕ್ಕೂ ಮೊದಲು 2020ರಲ್ಲಿ 5.84 ಲಕ್ಷ ದೀಪಗಳನ್ನು ಬೆಳಗಿಸಿ ದಾಖಲೆ ಸೃಷ್ಟಿಸಲಾಗಿತ್ತು. ಈ ವರ್ಷ ಶ್ರೀರಾಮನ ನಾಡಿನಲ್ಲಿ ದಾಖಲೆಯ 15 ಲಕ್ಷ ದೀಪಗಳು ಬೆಳಗಲಿವೆ. ಅಯೋಧ್ಯೆಯ ದೀಪೋತ್ಸವದಲ್ಲಿ ರಷ್ಯಾ, ಮಲೇಷ್ಯಾ, ಶ್ರೀಲಂಕಾ ಮತ್ತು ಫಿಜಿ ಕಲಾವಿದರಿಂದ ರಾಮಲೀಲಾ ಪ್ರದರ್ಶನಗಳು ನಡೆಯಲಿವೆ.

ಯೋಗಿ ಆದಿತ್ಯನಾಥ್ ಪರಿಶೀಲನೆ:
ಈ ವರ್ಷ ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಅಯೋಧ್ಯೆ ದೀಪೋತ್ಸವವು ಐತಿಹಾಸಿಕ ಮತ್ತು ಅಭೂತಪೂರ್ವವಾಗಿರಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಅಯೋಧ್ಯೆ ದೀಪೋತ್ಸವದ ಮುಖ್ಯ ಕಾರ್ಯಕ್ರಮದ ಭದ್ರತೆ ಮತ್ತು ಇತರ ವ್ಯವಸ್ಥೆಗಳನ್ನು ಪರಿಶೀಲಿಸಿದ ಯೋಗಿ ಆದಿತ್ಯನಾಥ್, ಅಯೋಧ್ಯೆ ದೀಪೋತ್ಸವ ಆಚರಣೆಗಳು ಪ್ರತಿ ವರ್ಷ ದಾಖಲೆ ಸಂಖ್ಯೆಯ ಮಣ್ಣಿನ ದೀಪಗಳನ್ನು ಬೆಳಗಿಸುವುದರೊಂದಿಗೆ ಇಲ್ಲಿನ ಖ್ಯಾತಿಯನ್ನು ಹೆಚ್ಚಿಸುತ್ತಿದೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಹೇಗೆ ನಡೆದಿದೆ? ಯಾವ ಹಂತದಲ್ಲಿದೆ? ಫೋಟೋಗಳಲ್ಲಿ ನೋಡಿ

ದೀಪೋತ್ಸವ ಆಚರಣೆಗಳು ಮುಗಿಯುವವರೆಗೆ ಅಯೋಧ್ಯೆಯಾದ್ಯಂತ ಇರುವ ದೇವಾಲಯಗಳಲ್ಲಿ ಸಂಪೂರ್ಣ ಭದ್ರತೆಯನ್ನು ವಹಿಸಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಎಲ್ಲಾ ಸ್ವಯಂಸೇವಕರು ಮಣ್ಣಿನ ದೀಪಗಳು ಆರಿಹೋಗುವವರೆಗೆ ಘಾಟ್‌ಗಳಲ್ಲಿ ಇರಬೇಕು ಎಂದು ಹೇಳಿದ ಅವರು, ದೀಪೋತ್ಸವದ ನಂತರ ದೀಪಗಳನ್ನು ಸಂಗ್ರಹಿಸಲು ಸೂಕ್ತ ವ್ಯವಸ್ಥೆ ಮಾಡಬೇಕು. ಈ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ