ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಈಗಲೇ ಏಕೆ? ಕಾರಣ ಕೊಟ್ಟ ಪೇಜಾವರ ಶ್ರೀ

ರಾಮಮಂದಿರ ಅತ್ಯಂತ ಸುಂದರವಾಗಿದೆ. ಮಂದಿರ ಕಟ್ಟಲು ಅನೇಕ ಸವಾಲುಗಳನ್ನು ಎದುರಿಸಿದ್ದೇವೆ. ಮಂದಿರ‌ದ ತಳದ‌ ನಿರ್ಮಾಣ ತಯಾರು ಮಾಡುವುದೇ ಕಷ್ಟವಾಗಿತ್ತು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​​ನ ಟ್ರಸ್ಟಿಯೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ತಿಳಿಸಿದರು.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಈಗಲೇ ಏಕೆ? ಕಾರಣ ಕೊಟ್ಟ ಪೇಜಾವರ ಶ್ರೀ
ಪೇಜಾವರ ಶ್ರೀ
Follow us
TV9 Web
| Updated By: Ganapathi Sharma

Updated on: Jan 18, 2024 | 6:55 AM

ಅಯೋಧ್ಯೆ, ಜನವರಿ 18: ಅಯೋಧ್ಯೆಯ ರಾಮ ಮಂದಿರ (Ayodhya Ram Mandir) ಅಪೂರ್ಣ, ತರಾತುರಿಯ ಉದ್ಘಾಟನೆ ಮಾಡಲಾಗುತ್ತಿದೆ ಎಂಬ ಆರೋಪಗಳಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​​ನ ಟ್ರಸ್ಟಿಯೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ (Vishwaprasanna Tirtha Swamiji) ಪ್ರತಿಕ್ರಿಯಿಸಿದ್ದಾರೆ. ಮಂದಿರದ ಗರ್ಭಗುಡಿ ಪರಿಪೂರ್ಣವಾಗಿದೆ. ಮಂದಿರವನ್ನು ಅಲ್ಲೇ ಕಟ್ಟಬೇಕು ಎಂಬುದು ಶತಮಾನಗಳ ಕನಸಾಗಿದೆ. ಮಂದಿರ ಅಲ್ಲೇ‌ ಕಟ್ಟುವೆವು ಎನ್ನುವುದು ಘೋಷಣೆಯೂ ಆಗಿತ್ತು. ಅಯೋಧ್ಯೆ ಸಂಬಂಧ ತೀರ್ಪು ಬರುವ ಮುಂಚೆಯೇ ಕುಹಕದ ಮಾತುಗಳನ್ನು ಆಡುತ್ತಿದ್ದರು. ಇದೀಗ ಇಷ್ಟೆಲ್ಲ ಆದರೂ ವಿರೋಧಿಗಳು ಕುಹಕದ ಮಾತುಗಳನ್ನು ಆಡುತ್ತಿದ್ದಾರೆ. ತೀರ್ಪು ಬಂದ ಎರಡೂವರೆ ವರ್ಷದಲ್ಲಿ ಮಂದಿರ ನಿರ್ಮಾಣ ಆಗಬೇಕಿತ್ತು. ಮಂದಿರ‌ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಾಗ ಸಾಕಷ್ಟು ಸವಾಲು ಎದುರಾಗಿತ್ತು. ತಳಪಾಯ ನಿರ್ಮಾಣ ಮಾಡುವುದು ಕಷ್ಟವಾಗಿತ್ತು. ಇದೀಗ ಭಕ್ತರ ತಾಳ್ಮೆ ಕೆಡಬಾರದು ಎನ್ನುವ ಕಾರಣಕ್ಕೆ ಪ್ರಾಣ ಪ್ರತಿಷ್ಠೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ರಾಮಮಂದಿರ ಅತ್ಯಂತ ಸುಂದರವಾಗಿದೆ. ಮಂದಿರ ಕಟ್ಟಲು ಅನೇಕ ಸವಾಲುಗಳನ್ನು ಎದುರಿಸಿದ್ದೇವೆ. ಮಂದಿರ‌ದ ತಳದ‌ ನಿರ್ಮಾಣ ತಯಾರು ಮಾಡುವುದೇ ಕಷ್ಟವಾಗಿತ್ತು. ಈಗ ಬಾಲರಾಮ ಪ್ರತಿಮೆ ಒಳಬಂದು ಕುಳಿತಿದೆ. ಅದನ್ನಿಂದು (ಗುರುವಾರ) ಗರ್ಭಗುಡಿಯಲ್ಲಿ ನಿಲ್ಲಿಸಲಾಗುತ್ತದೆ. ಪೂಜಾ ವಿಧಾನಗಳು ಮುಂದೆ ನಡೆಯಲಿವೆ ಎಂದು ಪೇಜಾವರ ಶ್ರೀ ಹೇಳಿದರು.

ಪ್ರಾಣ ಪ್ರತಿಷ್ಠೆಗೆ ಮೂರು ಮೂರ್ತಿಗಳಲ್ಲಿ ಒಂದನ್ನು ಆಯ್ಕೆ‌ಮಾಡುವುದೇ ಕಷ್ಟವಾಗಿತ್ತು. ಅರುಣ್ ಯೋಗಿರಾಜ್ ಕೆತ್ತಿರುವ ಮೂರ್ತಿ ವಿಶೇಷವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಮೂರ್ತಿ ಹೇಗಿದೆ ಎನ್ನುವುದನ್ನು ಗರ್ಭಗುಡಿಯಲ್ಲೇ ನೋಡಲಿದ್ದಿರಿ. ಯೋಗಿರಾಜ್ ಅವರ ಕೆತ್ತನೆಯ ಮೂರ್ತಿಯ ಪ್ರಬಾವಳಿಯಲ್ಲಿ ದಶಾವತರವಿದೆ ಎಂದು ಅವರು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯಿಂದ ಪ್ರಾಣ ಪ್ರತಿಷ್ಠಾಪನೆಗೆ ಕೆಲವು ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲರನ್ನೂ ಸಂತಸಪಡಿಸಲು ಸಾಧ್ಯವಿಲ್ಲ. ಟ್ರಸ್ಟನ ಮೂಲಕ ಇದು ಚರ್ಚೆಗೆ ಬಂದಿಲ್ಲ ಎಂದರು.

ಶಂಕರಾಚಾರ್ಯರಿಗೆ ಆಹ್ವಾನ ನೀಡದ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲರನ್ನೂ ಮಂದಿರ ಉದ್ಘಾಟನೆಗೆ ಕರೆಯಲು ಸಾಧ್ಯವಿಲ್ಲ. ಯಾಕೆಂದರೆ ಪ್ರಧಾನಿ ಬರೋದ್ರಿಂದ ತುಂಬಾ ಜನರನ್ನು ಕರೆಯಲು ಸಾಧ್ಯವಾಗಿಲ್ಲ. ಹತ್ತಾರು ಜನ ಗುಂಪು ಬರುವಂತೆ ಇಲ್ಲ. ಒಂದು ಕಿ.ಮಿ ನಡೆದುಕೊಂಡೇ ಬರಬೇಕಿದೆ. ಹೀಗಾಗಿ ಈವಾಗ ಅವರು ಬರೋದು ಬೇಡ. ಮುಂಬರುವ ದಿನಗಳಲ್ಲಿ ವೈಭೋವೋಪೇತವಾಗಿ ಬರಬಹುದು ಎಂದರು.

ಇದನ್ನೂ ಓದಿ: ರಾಮನ ಬಂಟ ಹನುಮಂತನ ಜನ್ಮಸ್ಥಳ ಗಂಗಾವತಿಯ ಅಂಜನಾದ್ರಿಯಲ್ಲಿ ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ? ವಿವರ ಇಲ್ಲಿದೆ

ಮಸೀದಿ ಕೆಡವಿದ ಜಾಗದಲ್ಲೇ ಮಂದಿರ ಕಟ್ಟುತ್ತಿಲ್ಲ ಎನ್ನುವ ಶಿವ ಸೇನಾ ಉದ್ಧವ್ ಬಣದ ನಾಯಕ ಸಂಜಯ್ ರಾವತ್ ಆರೋಪಕ್ಕೆ ತಿರುಗೇಟು ನೀಡಿದ ಪೇಜಾವರ ಶ್ರೀ, ಎಲ್ಲೋ ಕುಳಿತು ಏನೇನೋ ಮಾತನಾಡುತ್ತಿದ್ದಾರೆ. ಯಾರು ಮಂದಿರವೇ ಬೇಡ ಎನ್ನುತ್ತಿದ್ದಾರೆಯೋ ಅವರಿಗೆ ಮಂದಿರ ಎಲ್ಲಿ ಕಟ್ಟಿದರೆ ಏನು ಎಂದು ಪ್ರಶ್ನಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ