ಅಯೋಧ್ಯೆ ಜನವರಿ 22: ಅಯೋಧ್ಯೆಯ ರಾಮಮಂದಿರವನ್ನು (Ram mandir) ನಾಳೆಯಿಂದ( ಜನವರಿ 23) ಸಾರ್ವಜನಿಕರಿಗೆ ತೆರೆಯಲಾಗುವುದು. ಭಗವಾನ್ ರಾಮ ಲಲ್ಲಾನ (Ram Lalla) ‘ದರ್ಶನ’ಕ್ಕಾಗಿ ಪ್ರತಿದಿನ ಸಾವಿರಾರು ಭಕ್ತರು ಮತ್ತು ಯಾತ್ರಿಕರು ಭವ್ಯವಾದ ದೇವಾಲಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi)ಅವರು ಇಂದು(ಜನವರಿ 22) ದೇವಾಲಯದಲ್ಲಿ ರಾಮಲಲ್ಲಾನ ‘ಪ್ರಾಣ ಪ್ರತಿಷ್ಠೆ’ ಮಾಡಿದ್ದರು. ಸುಂದರವಾಗಿ ಅಲಂಕರಿಸಿದ ಭವ್ಯ ದೇಗುಲದಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆ ನಡೆದಿದೆ.
ರಾಮನ ಜನ್ಮಸ್ಥಳದಲ್ಲಿ ನೆಲೆಗೊಂಡಿದೆ ಎಂದು ನಂಬುವ ಲಕ್ಷಾಂತರ ಭಕ್ತರು ಮತ್ತು ಹಿಂದೂ ಧರ್ಮದ ಅನುಯಾಯಿಗಳಿಗೆ ರಾಮ ಮಂದಿರವು ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ. 51 ಇಂಚು ಎತ್ತರದ ರಾಮಲಲ್ಲಾ ವಿಗ್ರಹವನ್ನು ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ರಚಿಸಿದ್ದಾರೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ವೆಬ್‌ಸೈಟ್ ಪ್ರಕಾರ, ಈ ಕೆಳಗಿನ ಸಮಯದ ಸ್ಲಾಟ್‌ಗಳ ಪ್ರಕಾರ ಭಗವಾನ್ ರಾಮ ಲಲ್ಲಾನ ‘ದರ್ಶನ’ವನ್ನು ಮಾಡಬಹುದು.
ಬೆಳಿಗ್ಗೆ – 7:00 ರಿಂದ 11:30 ರವರೆಗೆ
ಮಧ್ಯಾಹ್ನ – 2:00 ರಿಂದ 7:00 ರವರೆಗೆ
ಜಾಗರಣ/ ಶೃಂಗಾರ ಆರತಿ- ಬೆಳಗ್ಗೆ 6:30
ಸಂಧ್ಯಾ ಆರತಿ- ಸಂಜೆ 7:30
“ಆರತಿ” ಗಾಗಿ ಉಚಿತ ಪಾಸ್‌ಗಳನ್ನು ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಪಡೆಯಬಹುದು. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ವೆಬ್‌ಸೈಟ್ ಪ್ರಕಾರ, ಮಾನ್ಯ ಸರ್ಕಾರಿ ಐಡಿ ದಾಖಲೆ ಒದಗಿಸಿದ ನಂತರ ಶ್ರೀ ರಾಮ ಜನ್ಮಭೂಮಿಯಲ್ಲಿರುವ ಶಿಬಿರ ಕಚೇರಿಯಿಂದ ಆಫ್‌ಲೈನ್ ಪಾಸ್‌ಗಳನ್ನು ಪಡೆಯಬಹುದು.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರರಾಮ ಜ್ಯೋತಿ ಬೆಳಗಿದ ಮೋದಿ
ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ನಂತರ ದೇವಾಲಯದಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಇಂದು ನಮ್ಮೆಲ್ಲರ ರಾಮ ಬಂದಿದ್ದಾನೆ. ವರ್ಷಗಳ ಹೋರಾಟದ ಬಳಿಕ ರಾಮ ಬಂದಿದ್ದಾನೆ.ಈ ಶುಭ ಘಳಿಗೆಯಲ್ಲಿ ಎಲ್ಲರಿಗೂ ಶುಭಾಶಯ ಎಂದಿದ್ದಾರೆ. ಹೇಳಲು ಎಷ್ಟೊಂದು ವಿಷಯಗಳು ಇವೆ. ಆದರೆ ಮಾತುಗಳು ಹೊರಳದೇ ಗಂಟಲು ಕಟ್ಟುತ್ತಿದೆ. ನಮ್ಮ ರಾಮಲಲ್ಲಾ ಇನ್ಮುಂದೆ ಟೆಂಟ್ನಲ್ಲಿ ಇರಲ್ಲ . ನಮ್ಮ ರಾಮಲಲ್ಲಾ ದಿವ್ಯ ಮಂದಿರದಲ್ಲಿ ಇರುತ್ತಾನೆ. ಈ ಕ್ಷಣ ಅತ್ಯಂತ ಪವಿತ್ರವಾದದ್ದು. 2024 ರ ಜನವರಿ 22 ಇದು ಕೇವಲ ದಿನಾಂಕ ಅಲ್ಲ, ಹೊಸ ಕಾಲಚಕ್ರದ ಉದಯ. ಗುಲಾಮಿ ಮನಸ್ಥಿತಿಯನ್ನು ಎದುರಿಸಿ ನಮ್ಮ ರಾಷ್ಟ್ರ ಎದ್ದು ನಿಂತ ಕ್ಷಣವಿದು ಎಂದು ಮೋದಿ ಹೇಳಿದ್ದಾರೆ.
ಇಂದಿನಿಂದ ದೇಶದಲ್ಲಿ ಹೊಸ ಇತಿಹಾಸದ ಉದಯವಾಗಲಿದೆ. ದೇಶದಲ್ಲಿ ಇಂದು ಪ್ರತಿದಿನವೂ ಒಂದು ವಿಶ್ವಾಸ ಮೂಡುತ್ತಿದೆ. ಈ ಕ್ಷಣ ದೈವಿಕ ಅನುಭವವನ್ನು ಪಡೆಯುತ್ತಿದ್ದೇನೆ. ಪ್ರಭು ಶ್ರೀರಾಮನ ಬಳಿ ನಾನು ಕ್ಷಮೆಯಾಚಿಸುತ್ತೇನೆ. ಇಷ್ಟು ವರ್ಷಗಳ ಕಾಲ ನಾವು ಸಮಯ ತೆಗೆದುಕೊಂಡಿದ್ದಕ್ಕೆ ಕ್ಷಮೆಯಾಚಿಸುವೆ. ಪ್ರಭು ಶ್ರೀರಾಮನ ಆಗಮನದಿಂದ ಇಡೀ ದೇಶ ಸಂಭ್ರಮಗೊಂಡಿದೆ ಎಂದಿದ್ದಾರೆ ಮೋದಿ.
ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲು ನಾವು ಜೀವಂತವಾಗಿರುವುದೇ ಒಂದು ಸೌಭಾಗ್ಯ ಎಂದರು. ಸಾವಿರಾರು ವರ್ಷಗಳ ನಂತರವೂ ಜನರು ಈ ದಿನಾಂಕ, ಕ್ಷಣವನ್ನು ನೆನಪಿಸಿಕೊಳ್ಳುತ್ತಾರೆ. ಇದನ್ನು ನಾವು ನೋಡುತ್ತಿರುವುದು ರಾಮನ ಪರಮ ಆಶೀರ್ವಾದ” ಎಂದು ಮೋದಿ ಹೇಳಿದ್ದಾರೆ. ಪ್ರಭು ಶ್ರೀರಾಮನಲ್ಲಿ ಕ್ಷಮೆ ಕೋರಿದ ಪ್ರಧಾನಿ ಏನಾದರೂ ಲೋಪ ಸಂಭವಿಸಿದ್ದರಿಂದಲೇ ಈ ಹಂತವನ್ನು ತಲುಪಲು ತುಂಬಾ ಸಮಯ ತೆಗೆದುಕೊಂಡಿದ್ದಿರಬಹುದು ಎಂದು ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ