ಅಯೋಧ್ಯೆಯ ರಾಮ ಮಂದಿರದ ಅರ್ಚಕ ಹುದ್ದೆಗೆ ಬಂತು ಬರೋಬ್ಬರಿ 3000 ಅರ್ಜಿ!
ಅಂತಿಮವಾಗಿ, ಒಟ್ಟು 20 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮೂವರು ಸದಸ್ಯರ ಸಮಿತಿಯು ಆಯ್ಕೆ ಮಾಡಲಿದೆ. ಈ ಸಮಿತಿಯಲ್ಲಿ ವೃಂದಾವನದ ಹಿಂದೂ ಧರ್ಮ ಪ್ರಚಾರಕ ಜಯಕಾಂತ್ ಮಿಶ್ರಾ ಮತ್ತು ಇತರ ಇಬ್ಬರು ಅಯೋಧ್ಯೆಯ ಮಹಾಂತರು, ಅಂದರೆ ಸತ್ಯನಾರಾಯಣ ದಾಸ್ ಮತ್ತು ನಂದಿನಿ ಶರಣ್ ಇರಲಿದ್ದಾರೆ.

ನವದೆಹಲಿ, ನವೆಂಬರ್ 21: ಅಯೋಧ್ಯೆಯ (Ayodhya) ರಾಮಮಂದಿರದ (Ram Mandir) ಅರ್ಚಕ ಹುದ್ದೆಗೆ ರಾಮಮಂದಿರ ತೀರ್ಥ ಕ್ಷೇತ್ರ ಸೋಮವಾರ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದ ನಂತರ ಈವರೆಗೆ ಸುಮಾರು 3000 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 200 ಮಂದಿಯನ್ನು ಅರ್ಹತೆಯ ಆಧಾರದ ಮೇಲೆ ಸಂದರ್ಶನದ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ ಎಂದು ಟ್ರಸ್ಟ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಯ್ಕೆಯಾದ 200 ಅಭ್ಯರ್ಥಿಗಳು ಅಯೋಧ್ಯೆಯಲ್ಲಿರುವ ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ಕೇಂದ್ರ ಕಚೇರಿಯಾದ ಕರಸೇವಕ್ ಪುರಂನಲ್ಲಿ ಸಂದರ್ಶನವನ್ನು ಎದುರಿಸಲಿದ್ದಾರೆ.
ಅಂತಿಮವಾಗಿ, ಒಟ್ಟು 20 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮೂವರು ಸದಸ್ಯರ ಸಮಿತಿಯು ಆಯ್ಕೆ ಮಾಡಲಿದೆ. ಈ ಸಮಿತಿಯಲ್ಲಿ ವೃಂದಾವನದ ಹಿಂದೂ ಧರ್ಮ ಪ್ರಚಾರಕ ಜಯಕಾಂತ್ ಮಿಶ್ರಾ ಮತ್ತು ಇತರ ಇಬ್ಬರು ಅಯೋಧ್ಯೆಯ ಮಹಾಂತರು, ಅಂದರೆ ಸತ್ಯನಾರಾಯಣ ದಾಸ್ ಮತ್ತು ನಂದಿನಿ ಶರಣ್ ಇರಲಿದ್ದಾರೆ.
ಆಯ್ಕೆಯಾದ ಅಭ್ಯರ್ಥಿಗಳನ್ನು ಅರ್ಚಕರಾಗಿ ನೇಮಿಸಲಾಗುವುದು ಮತ್ತು ಆರು ತಿಂಗಳ ತರಬೇತಿಯ ನಂತರ ವಿವಿಧ ಹುದ್ದೆಗಳಲ್ಲಿ ನಿಯೋಜಿಸಲಾಗುವುದು. ಆಯ್ಕೆಯಾಗದವರಿಗೆ ಕೂಡ ತರಬೇತಿಗೆ ಹಾಜರಾಗಲು ಅವಕಾಶವಿದ್ದು, ಪ್ರಮಾಣಪತ್ರಗಳನ್ನು ಪಡೆಯಲಿದ್ದಾರೆ ಎಂದು ಟ್ರಸ್ಟ್ ಖಜಾಂಚಿ ಗೋವಿಂದ್ ದೇವ್ ಗಿರಿ ‘ಪಿಟಿಐ’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ತರಬೇತಿ ಪಡೆದು ಪ್ರಮಾಣಪತ್ರದೊಂದಿಗೆ ವಾಪಸಾದವರಿಗೆ ಭವಿಷ್ಯದಲ್ಲಿ ಹೆಚ್ಚುವರಿ ಅರ್ಚಕ ಹುದ್ದೆ ಸೃಷ್ಟಿಯಾದಾಗ ಮತ್ತೆ ಅವಕಾಶ ದೊರೆಯಲಿದೆ.
ತರಬೇತಿಗೆ ಇದೆ ಉಚಿತ ವಸತಿ, ಊಟ ಹಾಗೂ ಸ್ಟೈಫಂಡ್
ಉನ್ನತ ದರ್ಶಕರು ಸಿದ್ಧಪಡಿಸಿದ ಧಾರ್ಮಿಕ ಪಠ್ಯಕ್ರಮದಲ್ಲಿ ತರಬೇತಿ ನಡೆಯಲಿದೆ. ತರಬೇತಿಯ ಸಮಯದಲ್ಲಿ, ಅಭ್ಯರ್ಥಿಗಳು ಉಚಿತ ವಸತಿ ಮತ್ತು ಆಹಾರ ಸೌಲಭ್ಯಗಳನ್ನು ಪಡೆಯಲಿದ್ದಾರೆ. ಮತ್ತು 2000 ರೂಪಾಯಿಗಳನ್ನು ಸ್ಟೈಫಂಡ್ ಆಗಿ ಪಡೆಯುತ್ತಾರೆ.
ಸಂದರ್ಶನದಲ್ಲಿ ಕೇಳಲಿರುವ ಪ್ರಶ್ನೆಗಳ ಬಗ್ಗೆ ಮಾಹಿತಿ ಕೇಳಿದಾಗ ಉತ್ತರಿಸಿದ ಗಿರಿ, “ಸಂಧ್ಯಾ ವಂದನೆ’ ಎಂದರೇನು, ಅದರ ಕಾರ್ಯವಿಧಾನಗಳು ಮತ್ತು ಈ ಪೂಜೆಗೆ ‘ಮಂತ್ರಗಳು’ ಯಾವುವು? ಭಗವಾನ್ ರಾಮನನ್ನು ಆರಾಧಿಸುವ ‘ಮಂತ್ರಗಳು’ ಯಾವುವು? ‘ಕರ್ಮ ಕಾಂಡ’ ಎಂದರೇನು? ಎಂಬಿತ್ಯಾದಿ ಪ್ರಶ್ನೆಗಳು ಇರಲಿವೆ ಎಂದರು.
ಮತ್ತಷ್ಟು ಓದಿ: ಅಯೋಧ್ಯೆಯ ರಾಮಮಂದಿರದಲ್ಲಿ ಅರ್ಚಕರಿಗಾಗಿ ಪರೀಕ್ಷೆ, ಸಂದರ್ಶನ, ದಿನಕ್ಕೆ ಐದು ಬಾರಿ ನಡೆಯಲಿದೆ ಆರತಿ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವರ್ಷ ರಾಮ ಮಂದಿರವನ್ನು ಉದ್ಘಾಟಿಸಲಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ