ಅಯೋಧ್ಯೆಯ ರಾಮ ಮಂದಿರದ ಆವರಣದಲ್ಲಿ ಮೊಬೈಲ್​ ಬಳಕೆ ನಿಷೇಧ

|

Updated on: May 26, 2024 | 12:52 PM

ಇನ್ನುಮುಂದೆ ಅಯೋಧ್ಯೆಯ ರಾಮ ಮಂದಿರದ ಆವರಣದಲ್ಲಿ ಮೊಬೈಲ್​ ಬಳಸುವಂತಿಲ್ಲ ಎಂದು ಶ್ರೀ ರಾಮ ಮಂದಿರ ಟ್ರಸ್ಟ್​ ಹೇಳಿದೆ. ರಾಮಮಂದಿರ ಟ್ರಸ್ಟ್‌ನ ಪದಾಧಿಕಾರಿಗಳು ಐಜಿ ಹಾಗೂ ಕಮಿಷನರ್‌ ಜೊತೆಗಿನ ಸಭೆಯಲ್ಲಿ ಮೊಬೈಲ್‌ ಫೋನ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಅಯೋಧ್ಯೆಯ ರಾಮ ಮಂದಿರದ ಆವರಣದಲ್ಲಿ ಮೊಬೈಲ್​ ಬಳಕೆ ನಿಷೇಧ
ರಾಮ ಮಂದಿರ
Follow us on

ಅಯೋಧ್ಯೆ(Ayodhya)ಯ ರಾಮಮಂದಿರ(Ram Mandir)ದ ಆವರಣದಲ್ಲಿ ಮೊಬೈಲ್ ಫೋನ್​ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಶನಿವಾರ ನಡೆದ ರಾಮಮಂದಿರ ಟ್ರಸ್ಟ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ದೇವಸ್ಥಾನದಲ್ಲಿ ಸಾರ್ವಜನಿಕರು ಮೊಬೈಲ್ ಕೊಂಡೊಯ್ಯುವುದನ್ನು ಈಗಾಗಲೇ ನಿಷೇಧಿಸಲಾಗಿತ್ತು ಆದರೆ ಈಗ ವಿಐಪಿಗಳು ಮತ್ತು ವಿವಿಐಪಿಗಳು ಮೊಬೈಲ್ ಫೋನ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.

ರಾಮಮಂದಿರ ಟ್ರಸ್ಟ್‌ನ ಪದಾಧಿಕಾರಿಗಳು ಐಜಿ ಹಾಗೂ ಕಮಿಷನರ್‌ ಜೊತೆಗಿನ ಸಭೆಯಲ್ಲಿ ಮೊಬೈಲ್‌ ಫೋನ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟ್ರಸ್ಟ್ ಟ್ರಸ್ಟಿ ಅನಿಲ್ ಮಿಶ್ರಾ ಹೇಳಿದ್ದಾರೆ. ಎಲ್ಲಾ ಸಂದರ್ಶಕರು ಈ ವ್ಯವಸ್ಥೆಯನ್ನು ಅನುಸರಿಸಲು ಮತ್ತು ಯಾರಿಗೂ ಯಾವುದೇ ಅನಾನುಕೂಲತೆ ಉಂಟಾಗದಂತೆ ಸಹಕರಿಸಲು ವಿನಂತಿಸಲಾಗಿದೆ.

ರಾಮ ಮಂದಿರಕ್ಕೆ ಬರುವ ಭಕ್ತರ ಮೊಬೈಲ್‌ಗಳನ್ನು ಇಡಲು ಸೂಕ್ತ ವ್ಯವಸ್ಥೆ ಇದೆ ಎಂದು ಮಿಶ್ರಾ ಹೇಳಿದರು. ಜನರು ತಮ್ಮ ಮೊಬೈಲ್ ಜೊತೆಗೆ ಇತರ ಬೆಲೆಬಾಳುವ ವಸ್ತುಗಳನ್ನು ಇಟ್ಟುಕೊಳ್ಳಬಹುದು. ಇಂತಹ ಪರಿಸ್ಥಿತಿಯಲ್ಲಿ ಜನರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ದೇವಸ್ಥಾನದ ಆವರಣದಲ್ಲಿ ಸುವ್ಯವಸ್ಥೆ ಕಾಪಾಡಲು ಟ್ರಸ್ಟ್‌ಗೆ ಸಹಕರಿಸಬೇಕು. ಭಕ್ತರು ಲಾಕರ್ ಸೌಲಭ್ಯ ಪಡೆದು ತಮ್ಮ ಮೊಬೈಲ್ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಅದರಲ್ಲಿಟ್ಟು ದರ್ಶನ ಪಡೆಯಬಹುದಾಗಿದೆ.

ಮತ್ತಷ್ಟು ಓದಿ: ಕನ್ನಡಿಗರಿಗೆ ಮತ್ತೊಂದು ಗರಿ; ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಬಹುಪಾಲು ಜವಾಬ್ದಾರಿ ಕರ್ನಾಟಕದವರದ್ದು

ಕನಿಷ್ಠ ಸಾಮಾನುಗಳನ್ನು ತೆಗೆದುಕೊಂಡು ಹೋಗಲು ಮನವಿ
ಭಕ್ತರು ತಮ್ಮೊಂದಿಗೆ ಕನಿಷ್ಠ ಸಾಮಾನುಗಳನ್ನು ಕೊಂಡೊಯ್ಯುವಂತೆ ಟ್ರಸ್ಟ್ ಮನವಿ ಮಾಡಿದೆ. ನೀವು ಹೆಚ್ಚು ಲಗೇಜ್ ಕೊಂಡೊಯ್ದರೆ ತಪಾಸಣೆ ಮತ್ತು ಸ್ಕ್ಯಾನಿಂಗ್ ಸಮಯ ತೆಗೆದುಕೊಳ್ಳುತ್ತದೆ ಮತ್ತು ಇತರರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರೆ, ದೇವಾಲಯವನ್ನು ತಲುಪುವ ಮೊದಲು ನಿಮ್ಮ ಹೆಚ್ಚಿನ ವಸ್ತುಗಳನ್ನು ಅಲ್ಲಿಯೇ ಬಿಡಲು ಪ್ರಯತ್ನಿಸಿ ಎಂದು ಹೇಳಿದ್ದಾರೆ.

ದೇವಾಲಯದ ಶಂಕುಸ್ಥಾಪನೆ ಜನವರಿ 22 ರಂದು ನಡೆಯಿತು
ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಮಂದಿರದ ಪ್ರಾಣ ಪ್ರತಿಷ್ಠೆಯನ್ನು ಈ ವರ್ಷದ ಜನವರಿ 22 ರಂದು ಪ್ರಧಾನಿ ಮೋದಿಯವರು ನೆರವೇರಿಸಿದರು. ಪ್ರಾಣ ಪ್ರತಿಷ್ಠೆಯಿಂದ ಲಕ್ಷಾಂತರ ಜನರು ಭೇಟಿ ನೀಡಿದ್ದಾರೆ. ದೇವಸ್ಥಾನ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ