ಮೋದಿ-ಯೋಗಿ ವಿರುದ್ಧ ದ್ವೇಷ ಭಾಷಣ: ಶಾಸಕ ಸ್ಥಾನ ಕಳೆದುಕೊಂಡ ಅಜಂ ಖಾನ್‌

ಮೋದಿ ಹಾಗೂ ಯೋಗಿ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಅಜಂ ಖಾನ್‌ ಶಾಸಕ ಸ್ಥಾನ ಕಳೆದುಕೊಂಡಿದ್ದಾರೆ.

ಮೋದಿ-ಯೋಗಿ ವಿರುದ್ಧ ದ್ವೇಷ ಭಾಷಣ: ಶಾಸಕ ಸ್ಥಾನ ಕಳೆದುಕೊಂಡ ಅಜಂ ಖಾನ್‌
Azam Khan, 3 Years Jail,Yogi Adityanath, Hate Speech
Updated By: ರಮೇಶ್ ಬಿ. ಜವಳಗೇರಾ

Updated on: Oct 28, 2022 | 9:12 PM

ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕ ಅಜಂ ಖಾನ್ ದೋಷಿ ಎಂದು ಕೋರ್ಟ್ ಆದೇಶಿಸಿ ಮೂರು ವರ್ಷ ಜೈಲು ಶಿಕ್ಷೆ ನೀಡಿತ್ತು. ಇದಾದ ಬೆನ್ನಲ್ಲೇ ಇದೀಗ ಅಜಂ ಖಾನ್ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ.

2013ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕ್ರಿಮಿನಲ್ ಮೊಕದ್ದಮೆಯಲ್ಲಿ ಎಂಎಲ್ಎ, ಎಂಎಲ್ಸಿ ಅಥವಾ ಎಂಪಿ ತಪ್ಪಿತಸ್ಥರಾಗಿದ್ದರೆ ಮತ್ತು ಕನಿಷ್ಠ ಎರಡು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾದರೆ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಧಾನಸಭೆಯ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದೆ. ಈ ತೀರ್ಪಿನಂತೆ ಅಜಂ ಖಾನ್‌ ಈಗ ತಪ್ಪಿತಸ್ಥರಾಗಿರುವ ಕಾರಣ ರಾಂಪುರ ಶಾಸಕ ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ದ್ವೇಷ ಭಾಷಣ ಪ್ರಕರಣ; ಎಸ್​ಪಿ ನಾಯಕ ಅಜಂ ಖಾನ್ ದೋಷಿ ಎಂದು ಘೋಷಣೆ

ಘಟನೆ ಹಿನ್ನೆಲೆ
2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಂಪುರದಲ್ಲಿ ನಡೆದ ಸಭೆಯಲ್ಲಿ ಅಜಂ ಖಾನ್ ಅವರು ಪ್ರಧಾನಿ ಮೋದಿ ಹಾಗೂ ಯೋಗಿ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದರು. ಇದೇ ಭಾಷಣದಲ್ಲಿ ಅಜಂ ಖಾನ್ ಎರಡು ಸಮುದಾಯಗಳ ನಡುವೆ ದ್ವೇಷ ಬಿತ್ತುವ ಹೇಳಿಕೆಯನ್ನು ನೀಡಿ ನೀತಿಸಂಹಿತೆ ಉಲ್ಲಂಘಿಸಿದ್ದರು. ಈ ಕುರಿತು ರಾಂಪುರದ ಮಿಲಕ್ ಕೋಟ್ವಾಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು 153a, 505-1 ಸೆಕ್ಷನ್ ಅಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ರಾಂಪುರ ವಿಶೇಷ ಕೋರ್ಟ್ ವಿಚಾರಣೆ ನಡೆಸಿತ್ತು.

ಅಜಂ ಖಾನ್ 2019 ರ ಲೋಕಸಭೆ ಚುನಾವಣೆಯಲ್ಲಿ ರಾಂಪುರದಿಂದ ಜಯಿಸಿದ್ದರು. ಆದರೆ ಮಾರ್ಚ್ 2022ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆಗೆ ಆಯ್ಕೆಯಾದ ನಂತರ ಅವರು ಎಂಪಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದ್ರೆ, ಇದೀಗ ಆ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ.

Published On - 9:04 pm, Fri, 28 October 22