ಮುಂಬೈ: ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಖ್ಯಾತ ಇತಿಹಾಸಕಾರರಾಗಿದ್ದ 99 ವರ್ಷದ ಬಾಬಾಸಾಹೇಬ್ ಪುರಂದರೆ (Babasaheb Purandare) ಇಂದು ನಿಧನರಾಗಿದ್ದಾರೆ. ಕೆಲವು ದಿನಗಳ ಹಿಂದೆ ವಯೋಸಹಜ ಕಾಯಿಲೆಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ನಲ್ಲಿದ್ದರು. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಅವರು ಮೃತಪಟ್ಟಿದ್ದಾರೆ. ಬಾಬಾಸಾಹೇಬ್ ಪುರಂದರೆ ಅವರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Maharashtra Chief Minister Uddhav Thackeray) ಘೋಷಿಸಿದ್ದಾರೆ.
ಇತಿಹಾಸಕಾರ ಬಾಬಾಸಾಹೇಬ್ ಪುರಂದರೆ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಪುರಂದರೆ ಅವರ ನಿಧನದ ವಿಷಯ ತಿಳಿದು ಮಾತಿಗೂ ನಿಲುಕದಷ್ಟು ನನಗೆ ನೋವಾಗಿದೆ. ಅವರ ನಿಧನದಿಂದ ಇತಿಹಾಸ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಛತ್ರಪತಿ ಶಿವಾಜಿ ಮಹಾರಾಜ್ ಬಗ್ಗೆ ಮುಂದಿನ ಪೀಳಿಗೆಗೂ ತಿಳಿಸುವಂತೆ ಮಾಡಿದ ಪುರಂದರೆ ಅವರ ಕೆಲಸಕ್ಕೆ ನಾವು ಕೃತಜ್ಞರಾಗಿರಬೇಕು. ಅವರ ಇನ್ನಿತರ ಕೆಲಸಗಳು ಕೂಡ ಇತಿಹಾಸದಲ್ಲಿ ಅಜರಾಮರವಾಗಿರಲಿವೆ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಬಲವಂತ ಮೋರೇಶ್ವರ ಪುರಂದರೆಯಾಗಿ ಜನಿಸಿದ ಬಾಬಾಸಾಹೇಬರು ಛತ್ರಪತಿ ಶಿವಾಜಿಯ ಕುರಿತು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಇತಿಹಾಸ ಮತ್ತು ಸಂಶೋಧನೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಅವರಿಗೆ 2019ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಮತ್ತು 2015ರಲ್ಲಿ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
I am pained beyond words. The demise of Shivshahir Babasaheb Purandare leaves a major void in the world of history and culture. It is thanks to him that the coming generations will get further connected to Chhatrapati Shivaji Maharaj. His other works will also be remembered. pic.twitter.com/Ehu4NapPSL
— Narendra Modi (@narendramodi) November 15, 2021
ಪದ್ಮವಿಭೂಷಣ ಬಾಬಾಸಾಹೇಬ್ ಪುರಂದರೆ ಅವರು ಇಂದು ಬೆಳಗ್ಗೆ 5 ಗಂಟೆಗೆ ಪುಣೆಯ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ನಿಧನರಾದರು. ಪುಣೆಯ ವೈಕುಂಠ ಚಿತಾಗಾರದಲ್ಲಿ ಇಂದು ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ಇತಿಹಾಸಕಾರ ಹಾಗೂ ಲೇಖಕ ಬಾಬಾಸಾಹೇಬ ಪುರಂದರೆ ಶನಿವಾರ ಬಾತ್ರೂಂನಲ್ಲಿ ಬಿದ್ದು ಗಾಯಗೊಂಡಿದ್ದರಿಂದ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ: ನರೇಂದ್ರ ಮೋದಿಯವರಿಗೆ ಸೀರೆ ಉಡುಗೊರೆ ಕೊಟ್ಟ ಪದ್ಮಶ್ರೀ ಪುರಸ್ಕೃತ; ಗಿಫ್ಟ್ ನೋಡಿ ಪ್ರಧಾನಿಗೆ ಖುಷಿಯೋ ಖುಷಿ !
Published On - 10:55 am, Mon, 15 November 21