Mehul Choksi: ಡೊಮಿನಿಕಾ ಸ್ಥಳೀಯ ಕೋರ್ಟ್​ನಿಂದ ಮೆಹುಲ್ ಚೋಕ್ಸಿಗೆ ವೈದ್ಯಕೀಯ ಜಾಮೀನು ಮಂಜೂರು

| Updated By: ganapathi bhat

Updated on: Jul 12, 2021 | 9:35 PM

ಪಂಜಾಬ್ ನೇಷನಲ್ ಬ್ಯಾಂಕ್​ಗೆ ವಂಚನೆ ಮಾಡಿ ಪರಾರಿ ಆಗಿರುವ ಭಾರತದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಗೆ ವೈದ್ಯಕೀಯ ಜಾಮೀನು ಮಂಜೂರಾಗಿದೆ. ಡೊಮಿನಿಕಾ ದೇಶದ ಸ್ಥಳೀಯ ಕೋರ್ಟ್‌ನಿಂದ ಜಾಮೀನು ನೀಡಲಾಗಿದೆ.

Mehul Choksi: ಡೊಮಿನಿಕಾ ಸ್ಥಳೀಯ ಕೋರ್ಟ್​ನಿಂದ ಮೆಹುಲ್ ಚೋಕ್ಸಿಗೆ ವೈದ್ಯಕೀಯ ಜಾಮೀನು ಮಂಜೂರು
ಮೆಹುಲ್ ಚೋಕ್ಸಿ
Follow us on

ದೆಹಲಿ: ಪಂಜಾಬ್ ನೇಷನಲ್ ಬ್ಯಾಂಕ್​ಗೆ ವಂಚನೆ ಮಾಡಿ ಪರಾರಿ ಆಗಿರುವ ಭಾರತದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಗೆ ವೈದ್ಯಕೀಯ ಜಾಮೀನು ಮಂಜೂರಾಗಿದೆ. ಡೊಮಿನಿಕಾ ದೇಶದ ಸ್ಥಳೀಯ ಕೋರ್ಟ್‌ನಿಂದ ಜಾಮೀನು ನೀಡಲಾಗಿದೆ. ಆಂಟಿಗುವಾಗೆ ತೆರಳಲು ಅನುಮತಿ ನೀಡಿರುವ ಕೋರ್ಟ್‌ ಜಾಮೀನು ನೀಡಿದೆ. ಪಂಜಾಬ್ ನೇಷನಲ್ ಬ್ಯಾಂಕ್ (ಪಿಎನ್​ಬಿ) ಹಗರಣಕ್ಕೆ ಸಂಬಂಧಿಸಿದಂತೆ ಜೂನ್​ 10ರಂದು ಕೇಂದ್ರೀಯ ತನಿಖಾ ದಳವು ಮೆಹುಲ್ ಚೋಕ್ಸಿ ಮತ್ತು ಇತರ 21 ಜನರ ವಿರುದ್ಧ ಹೊಸ ಚಾರ್ಜ್​ಶೀಟ್​ ದಾಖಲಿಸಿದ್ದು ಭಾರತದಿಂದ ಕಣ್ಮರೆಯಾಗಿರುವ ವಜ್ರ ವ್ಯಾಪಾರಿಯು ಸಾಕ್ಷ್ಯ ನಾಶಪಡಿಸಿರುವ ಅರೋಪನ್ನು ಚಾರ್ಜ್​ಶೀಟ್​ನಲ್ಲಿ ಮೊದಲ ಬಾರಿಗೆ ಸೇರಿಸಿತ್ತು. 2017ರಲ್ಲಿ ಪಿಎನ್​ಬಿ ಅಧಿಕಾರಿಗಳ ಸಹಾಯದಿಂದ ಚೊಕ್ಸಿಯು 165 ಲೆಟರ್ಸ್ ಆಫ್ ಅಂಡರ್​ಸ್ಟ್ಯಾಂಡಿಂಗ್ (ಎಲ್​ಒಯು) 58 ಎಫ್​ಎಲ್​ಸಿಗಳನ್ನು (ಫಾರಿನ್ ಲೆಟರ್ಸ್​ ಆಫ್​ ಕ್ರೆಡಿಟ್) ಮೋಸದಿಂದ ಪಡೆದು ಬ್ಯಾಂಕಿಗೆ ರೂ. 6,097 ಕೋಟಿ ವಂಚನೆ ಎಸಗಿದ ನಂತರ ಅದನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದನೆಂದು ತಾನು ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ಸಿಬಿಐ ಆರೋಪಿಸಿತ್ತು.

ಪೂರಕ ಚಾರ್ಜ್​ಶೀಟ್​ಗಳಲ್ಲಿ ಚೋಕ್ಸಿಯ ವಿರುದ್ಧ ಸೆಕ್ಷನ್ 201 (ಸಾಕ್ಷ್ಯ ನಾಶ), ವಂಚನೆ, ಕ್ರಿಮಿನಲ್ ಪತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಅರೋಪಗಳನ್ನು ತನಿಖಾ ದಳ ಮಾಡಿತ್ತು. ಈ ಎಲ್ಲ ಆರೋಪಗಳನ್ನು ಮಾಡಿರುವ ಚಾರ್ಜ್​ಶೀಟ್ ಪ್ರತಿಯನ್ನು ಡೊಮಿನಿಕಾದ ಅಧಿಕಾರಿಗಳು ಮತ್ತು ಕೊರ್ಟ್​ಗೆ ನೀಡಿದರೆ, ಚೋಕ್ಸಿಯನ್ನು ವಶಕ್ಕೆ ಪಡೆಯಲು ನೆರವಾಗುತ್ತದೆ ಎಂದು ವಿಷಯದ ಬಗ್ಗೆ ಮಾಹಿತಿ ಹೊಂದಿರುವ ಅಧಿಕಾರಿಗಳು ಹೇಳಿದ್ದರು.

ಮೆಹುಲ್​ ಚೋಕ್ಸಿ ಈಗಲೂ ಭಾರತದ ಪ್ರಜೆ ಎಂದು ಡೊಮಿನಿಕಾ ಕೋರ್ಟ್​​ನಲ್ಲಿ ಅಫಿಡಿವಿಟ್​ ಸಲ್ಲಿಸಲು ಅವಕಾಶ ಕೊಡುವಂತೆ ಜಾರಿ ನಿರ್ದೇಶನಾಲಯ (ಇಡಿ) ಡೊಮಿನಿಕಾ ಸರ್ಕಾರಕ್ಕೆ ಮನವಿ ಸಲ್ಲಿಸಲು ಎಲ್ಲ ರೀತಿಯ ಸಿದ್ಧತೆಯನ್ನೂ ಈ ಹಿಂದೆ ಮಾಡಿತ್ತು.

ಪಂಜಾಬ್​ ನೇಷನಲ್​ ಬ್ಯಾಂಕ್​ ಹಗರಣ ಆರೋಪಿ ಮೆಹುಲ್ ಚೋಕ್ಸಿ 2018ರಲ್ಲಿ ಭಾರತವನ್ನು ತೊರೆದು ಆಂಟಿಗುವಾಕ್ಕೆ ಪರಾರಿಯಾಗಿದ್ದರು. ಅಲ್ಲಿನ ಪೌರತ್ವ ಪಡೆದಿದ್ದ ಚೋಕ್ಸಿ, ತಮ್ಮ ವಿರುದ್ಧ ಕಾನೂನು ಪ್ರಕ್ರಿಯೆಗಳು ಶುರುವಾಗುತ್ತಿದ್ದಂತೆ ಅಕ್ರಮವಾಗಿ ಡೊಮಿನಿಕಾ ದ್ವೀಪರಾಷ್ಟ್ರವನ್ನು ನುಸುಳಿ, ಅಲ್ಲಿನ ಪೊಲೀಸರಿಂದ ಬಂಧಿತರಾಗಿದ್ದರು.

ಬಂಧಿತ ಚೋಕ್ಸಿ ವಾಪಸ್​ ಬರಲು ಅವಕಾಶ ಕೊಡುವುದಿಲ್ಲ ಎಂದು ಆಂಟಿಗುವಾ ಪ್ರಧಾನಿ ಹೇಳಿದ್ದರು. ಬಳಿಕ ಭಾರತದ ಜಾರಿ ನಿರ್ದೇಶನಾಲಯ ತನ್ನ ಪ್ರಕ್ರಿಯೆಗಳನ್ನು ಶುರು ಮಾಡಿತ್ತು. ಮೆಹುಲ್ ಚೋಕ್ಸಿ ಒಬ್ಬ ದೇಶಭ್ರಷ್ಟ ವ್ಯಾಪಾರಿ. ಆತ ಭಾರತದ ಪ್ರಜೆ ಎಂದು ಬುಧವಾರ ಡೊಮಿನಿಕಾ ಕೋರ್ಟ್​ನಲ್ಲಿ ಅಫಿಡಿವಿಟ್​ ಸಲ್ಲಿಸಲು ಮುಂದಾಗಿತ್ತು.

ಇದನ್ನೂ ಓದಿ: ಮಲ್ಯ, ಚೋಕ್ಸಿ, ನೀರವ್​ರಿಂದ ನಷ್ಟ ಅನುಭವಿಸಿದ ಸಾರ್ವಜನಿಕ ಬ್ಯಾಂಕ್​ಗಳಿಗೆ 8441 ಕೋಟಿ ರೂ. ಆಸ್ತಿ ವರ್ಗಾಯಿಸಿದ ಇ.ಡಿ.

Mehul Choksi: ಉದ್ಯಮಿ ಮೆಹುಲ್ ​ಚೋಕ್ಸಿ ಪರಾರಿಯಾಗುವ ಸಾಧ್ಯತೆಯಿದೆ, ಜಾಮೀನು ನೀಡೊಲ್ಲ ಎಂದ ಡೊಮಿನಿಕಾ ಕೋರ್ಟ್​!

Published On - 9:32 pm, Mon, 12 July 21