ಹೈದರಾಬಾದ್: ಇನ್ಶೂರೆನ್ಸ್ ಸೇರಿದಂತೆ ಇನ್ನಿತರ ಕಲ ಸವಲತ್ತುಗಳನ್ನು ನೀಡಬೇಕೆಂದು ಎಂದು ಮದ್ಯಪಾನ (Alcohol) ಪ್ರಿಯರ ಹೋರಾಟ ಸಂಘ ಇತ್ತೀಚೆಗೆ ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು. ಅದರಂತೆ ಇಲ್ಲೊಂದು ಬೋಳು ತಲೆ ಪುರುಷರ ಸಂಘ (Bald Head Men Group) ತಮಗೆ ತಿಂಗಳಿಗೆ 6 ಸಾವಿರ ರೂ. ಪಿಂಚಣಿ(pension) ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದೆ.
ಇದನ್ನೂ ಓದಿ: ಮದ್ಯಪಾನ ಪ್ರಿಯರಿಗೂ ಇನ್ಶೂರೆನ್ಸ್ ಸೌಲಭ್ಯ ಒದಗಿಸಬೇಕು: ಮದ್ಯಪಾನ ಪ್ರಿಯರ ಹೋರಾಟ ಸಂಘದ ಅಧ್ಯಕ್ಷ ಒತ್ತಾಯ
ಹೌದು…ತಿಂಗಳಿಗೆ 6000 ರೂ. ಪಿಂಚಣಿ ನೀಡುವಂತೆ ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ತಂಗಲ್ಲಪಲ್ಲಿ ಗ್ರಾಮದ ಬೋಳು ತಲೆಯ ಪುರುಷರ ಸಂಘ ಸರ್ಕಾರವನ್ನು ಒತ್ತಾಯಿಸಿದ್ದು, ಬೋಳು ತಲೆಯ ಪುರುಷರಿಗೆ ಸಂಕ್ರಾಂತಿ ಉಡುಗೊರೆಯಾಗಿ ಪಿಂಚಣಿಯನ್ನು ಘೋಷಿಸಬೇಕು ಎಂದು ಮನವಿ ಮಾಡಿದೆ. ವೃದ್ಧರು, ವಿಧವೆಯರು, ದೈಹಿಕ ವಿಕಲಚೇತನರು ಮತ್ತು ಇತರರಿಗೆ ಸರ್ಕಾರ ಪಿಂಚಣಿ ನೀಡುತ್ತಿದೆ. ಅದರಂತೆ ನಮ್ಮನ್ನೂ ಪರಿಗಣಿಸಿ ನಮ್ಮ ಈ ಮನವಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಬೋಳು ತಲೆ ಪುರುಷರ ಸಂಘ ಆಗ್ರಹಿಸಿದೆ.
ತಲೆಯಲ್ಲಿ ಕೂದಲು ಇಲ್ಲದೆ ಸಾಕಷ್ಟು ಮುಜುಗರ ಅನುಭವಿಸುತ್ತಿರುವುದಲ್ಲದೆ, ಕೆಲವರು ನಮ್ಮನ್ನು ನೋಡಿ ಅಪಹಾಸ್ಯ ಮಾಡುತ್ತಿರುವುದರಿಂದ ಸಾಕಷ್ಟು ಕುಗ್ಗಿ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದೇವೆ. ಹೀಗಾಗಿ ಸರ್ಕಾರ ನಮ್ಮ ಬಗ್ಗೆ ವಿಶೇಷ ಗಮನಹರಿಸಬೇಕು ಎಂದು ಬೋಳು ತಲೆಯ ಪುರುಷರ ಸಂಘ ತೆಲಂಗಾಣ ಸರ್ಕಾರಕ್ಕ ಮನವಿ ಸಲ್ಲಿಸಿದೆ.
ಜನವರಿ 5 ರಂದು ಗ್ರಾಮದಲ್ಲಿ ಬೋಳು ತಲೆ ಪುರುಷರ ಸಂಘ ಅನೌಪಚಾರಿಕ ಸಭೆಯನ್ನು ಕರೆದು ಚರ್ಚಿಸಿದೆ. ಅಲ್ಲದೆ, ಸಂಕ್ರಾಂತಿ ನಂತರ ಮತ್ತೊಂದು ಸಭೆ ನಡೆಸಲು ನಿರ್ಧರಿಸಿದೆ. ಇದರಲ್ಲಿ ಕೂದಲು ಕಳೆದುಕೊಂಡಿರುವ 30 ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸಂಘದ ಸದಸ್ಯ 41 ವರ್ಷದ ಪಿ ಅಂಜಿ ಮಾತನಾಡಿ, ಜನರು ನಮ್ಮ ಮೇಲೆ ಮಾಡುವ ಕಾಮೆಂಟ್‌ಗಳು ನಮಗೆ ನೋವುಂಟುಮಾಡುತ್ತವೆ. ನಮ್ಮನ್ನು ನೋಡಿ ಅವರು ನಗುತ್ತಾರೆ. ಏಕೆಂದರೆ ನಮ್ಮ ತಲೆಯಲ್ಲಿ ಕೂದಲು ಕಡಿಮೆಯಾಗುತ್ತಿದೆ ಮತ್ತು ಇದು ನಮಗೆ ಮಾನಸಿಕ ಹಿಂಸೆಯನ್ನು ನೀಡುತ್ತಿದೆ. ನಾವು ಈಗಾಗಲೇ ನಮ್ಮ ಬೋಳುತನದ ಬಗ್ಗೆ ಚಿಂತಿತರಾಗಿರುವಾಗ ನಮ್ಮನ್ನು ಆಗಾಗ ಅಪಹಾಸ್ಯ ಮಾಡಲಾಗುತ್ತದೆ. ಇದು ನಮಗೆ ಮತ್ತೊಂದು ಕಳವಳಕಾರಿಯಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಇನ್ನು ಸಂಘದ ಸದಸ್ಯರೊಬ್ಬರು ಕೇವಲ 22 ವರ್ಷ ವಯಸ್ಸಿಗೆ ತಲೆಯಲ್ಲಿನ ಕೂದಲು ಕಳೆದುಕೊಂಡಿದ್ದಾರೆ. 20ರ ಹರೆಯದಲ್ಲಿ ನನಗೆ ಕೂದಲು ಉದುರುತ್ತಿತ್ತು ಎಂದು ಅಂಜಿ ಹೇಳಿದ್ದಾರೆ. ಸರ್ಕಾರಿ ಪಿಂಚಣಿ ನೀಡಿದರೆ, ಆ ಮೊತ್ತವನ್ನು ಏನು ಮಾಡುತ್ತೀರಿ ಎಂದು ಪ್ರಶ್ನಿಸಿದಾಗ, ಸಾಧ್ಯವಾದರೆ ನಾವು ಕೂದಲು ಹೊಂದಲು ಚಿಕಿತ್ಸೆ ಪಡೆಯುತ್ತೇವೆ. ಈ ಹಿನ್ನೆಲೆಯಲ್ಲಿ ಪಿಂಚಣಿಯನ್ನು ನಮಗೆ ಚಿಕಿತ್ಸಾ ವೆಚ್ಚವೆಂದು ಪರಿಗಣಿಸಬೇಕು ಎಂದು ಹೇಳಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ