ಹಲ್ದಿಯಾ: ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಲ್ದಿಯಾದಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನಿರ್ಮಿಸಿದ ಎಲ್ಪಿಜಿ ಆಮದು ಟರ್ಮಿನಲ್, ಪ್ರಧಾನ್ ಮಂತ್ರಿ ಉರ್ಜಾ ಗಂಗಾ ಯೋಜನೆಯಡಿ ನಿರ್ಮಿಸಲಾದ ದೋಭಿಗುರ್ಗಾಪುರ ನ್ಯಾಚ್ಯುರಲ್ ಗ್ಯಾಸ್ ಪೈಪ್ಲೈನ್ ಉದ್ಘಾಟಸಿದರು.
ನಂತರ ಭಾಷಣ ಪ್ರಾರಂಭ ಮಾಡಿದ ಪ್ರಧಾನಿ ಮೋದಿ ಮೊದಲು ಬಂಗಾಳಿಯಲ್ಲೇ ಮಾತನಾಡಿದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು. ಬಂಗಾಳದಲ್ಲಿ ಯಾರಾದರೂ ತಮ್ಮ ಹಕ್ಕಿನ ಬಗ್ಗೆ ಮಾತನಾಡಿದರೆ ಸಾಕು ದೀದಿ ಹತಾಶರಾಗುತ್ತಾರೆ. ಅಷ್ಟೇ ಅಲ್ಲ, ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರೂ ಅವರು ಸಹಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಮಮತಾ ಬ್ಯಾನರ್ಜಿ ಸರ್ಕಾರ ಮೊದಲ ಅವಧಿ ಪೂರೈಸಿದಾಗಲೇ ಸ್ಪಷ್ಟವಾಗಿ ಹೋಯಿತು, ಪಶ್ಚಿಮ ಬಂಗಾಳ ಪಡೆದಿದ್ದು ಪರಿವರ್ತನೆಯನ್ನಲ್ಲ, ಬದಲಿಗೆ ಎಡದ ಪುನರುಜ್ಜೀವನ ಎಂದು. ಪಶ್ಚಿಮ ಬಂಗಾಳದಲ್ಲಿ ಭ್ರಷ್ಟಾಚಾರ, ಅಪರಾಧ, ಹಿಂಸೆಯೇ ತುಂಬಿದೆ. ಇಲ್ಲಿ ಪ್ರಜಾಪ್ರಭುತ್ವದ ಮೇಲೆ ಪದೇಪದೆ ದಾಳಿಯಾಗುತ್ತಿದೆ ಎಂದು ಹೇಳಿದರು.
ಟಿಎಂಸಿ ಪದೇಪದೆ ತಪ್ಪುಗಳನ್ನು ಮಾಡುತ್ತಲೇ ಬಂದಿದೆ. ಅಧಿಕಾರ ದುರ್ಬಳಕೆ, ಹಿಂಸೆ, ಉಳಿದವರ ನಂಬಿಕೆಗಳ ಮೇಲೆ ದಾಳಿ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ನಮ್ಮ ಹೋರಾಟ ಏನಿದ್ದರೂ ಟಿಎಂಸಿ ಪಕ್ಷದೊಂದಿಗೆ. ಹಾಗೇ, ಇವರ ಗುಪ್ತ ಮಿತ್ರರ ಬಗ್ಗೆ ಎಚ್ಚರಿಕೆಯಿಂದ ಇರುತ್ತೇವೆ. ಎಡಪಕ್ಷಗಳು, ಕಾಂಗ್ರೆಸ್ ಮತ್ತು ಟಿಎಂಸಿ ಸೇರಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿವೆ. ದೆಹಲಿಯಲ್ಲಿ ಇವರು ಭೇಟಿಯಾಗಿ ಚರ್ಚೆ ಮಾಡುತ್ತಾರೆ. ಅದೇ ಕೇರಳದಲ್ಲಿ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಸೇರಿ ಇಡೀ ರಾಜ್ಯವನ್ನು ಲೂಟಿ ಹೊಡೆಯುವ ಒಪ್ಪಂದ ಮಾಡಿಕೊಂಡಿವೆ ಎಂದು ಮೋದಿ ವಾಗ್ದಾಳಿ ನಡೆಸಿದರು. ಪಶ್ಚಿಮ ಬಂಗಾಳದಲ್ಲಿ ಶೀಘ್ರದಲ್ಲೇ ಜನರು ಟಿಎಂಸಿಗೆ ರಾಮ್ ಕಾರ್ಡ್ ತೋರಿಸಲಿದ್ದಾರೆ ಎಂದೂ ಹೇಳಿದರು.
ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಜೈ ಶ್ರೀರಾಮ್ ಘೋಷಣೆಯೊಂದಿಗೇ ಬರಮಾಡಿಕೊಳ್ಳಲಾಯಿತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೋದಿಯವರ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ. ಕಳೆದ ಬಾರಿ ಜ.23ರಂದು ಸುಭಾಷ್ ಚಂದ್ರ ಬೋಸ್ ಜನ್ಮದಿನದ ಪ್ರಯುಕ್ತ ಮೋದಿಯವರು ಕೋಲ್ಕತ್ತಕ್ಕೆ ತೆರಳಿದ್ದಾಗ ಮಮತಾ ಬ್ಯಾನರ್ಜಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಅಂದು ದೀದಿ ಭಾಷಣ ಮಾಡುತ್ತಿದ್ದಂತೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ, ಸಿಟ್ಟಾಗಿ ತಮಗೆ ಅವಮಾನ ಆಯಿತು ಎಂದು ಮಾತು ಮೊಟಕುಗೊಳಿಸಿದ್ದರು.
Uttarakhand Glacier Burst: ಇಡೀ ದೇಶ ಉತ್ತರಾಖಂಡ್ ರಾಜ್ಯದ ಜನರ ಜೊತೆಗಿದೆ: ಪ್ರಧಾನಿ ನರೇಂದ್ರ ಮೋದಿ ಟ್ವೀಟ್