ಬೆಂಗಳೂರಿಗೆ ಹೊರಟಿದ್ದ ವಿಮಾನದಲ್ಲಿ ಬೆಂಕಿ; ಟೇಕಾಫ್​ಗೂ ಮುನ್ನವೇ ಬಂದಿತ್ತೇ ವೈಫಲ್ಯದ ಸಂದೇಶ?

| Updated By: Ganapathi Sharma

Updated on: Oct 29, 2022 | 10:09 AM

ಇಂಡಿಗೋ ವಿಮಾನದ ಎರಡನೇ ಎಂಜಿನ್​ ವೈಫಲ್ಯದ ಸಂದೇಶ ನೀಡಿತ್ತು ಎಂದಿವೆ ಡಿಜಿಸಿಎ ಮೂಲಗಳು.

ಬೆಂಗಳೂರಿಗೆ ಹೊರಟಿದ್ದ ವಿಮಾನದಲ್ಲಿ ಬೆಂಕಿ; ಟೇಕಾಫ್​ಗೂ ಮುನ್ನವೇ ಬಂದಿತ್ತೇ ವೈಫಲ್ಯದ ಸಂದೇಶ?
ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಚಿತ್ರ
Image Credit source: PTI
Follow us on

ನವದೆಹಲಿ: ಬೆಂಗಳೂರಿಗೆ ಹೊರಟಿದ್ದ ಇಂಡಿಗೋ (IndiGo) ವಿಮಾನದ ಎಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಗೆ ಸಂಬಂಧಿಸಿ ವಿಸ್ತೃತ ತನಿಖೆ ನಡೆಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ (DGCA) ಶನಿವಾರ ಬೆಳಿಗ್ಗೆ ತಿಳಿಸಿದೆ. ದೆಹಲಿಯಿಂದ ಬೆಳಗೂರಿಗೆ ಹೊರಟಿದ್ದ 6E-2131 ನಂಬರಿನ ಇಂಡಿಗೋ ವಿಮಾನ ಟೇಕಾಫ್‌ ಆಗುತ್ತಿದ್ದಂತೆ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಪೈಲಟ್ ವಿಮಾನವನ್ನು ಲ್ಯಾಂಡ್ ಮಾಡಿದ್ದರು. ವಿಮಾನದಲ್ಲಿದ್ದ 184 ಮಂದಿಗೆ ಯಾವುದೇ ಅಪಾಯವಾಗಿಲ್ಲ.

‘ವಿಸ್ತೃತ ತನಿಖೆ ನಡೆಸುವುದು ನಮ್ಮ ಆದ್ಯತೆಯಾಗಿದೆ. ಎಂಜಿನ್​ನಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದನ್ನು ಪತ್ತೆ ಮಾಡಬೇಕಿದೆ. ಅದೃಷ್ಟವಶಾತ್, ಬೆಂಕಿಯನ್ನು ನಂದಿಸಲಾಗಿದ್ದು, ವಿಮಾನ ಸುರಕ್ಷಿತವಾಗಿದೆ’ ಎಂದು ಡಿಜಿಸಿಎ ಮುಖ್ಯಸ್ಥ ಅರುಣ್ ಕುಮಾರ್ ‘ಪಿಟಿಐ’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು- ದೆಹಲಿ ವಿಮಾನದಲ್ಲಿ ಬೆಂಕಿಯ ವಿಡಿಯೋ ವೈರಲ್; ವರದಿ ಕೇಳಿದ ವಿಮಾನಯಾನ ಸಚಿವಾಲಯ

IAEV2500 ಎಂಜಿನ್​ಗೆ ಬೆಂಕಿ ತಗುಲಿತ್ತು. ಈ ಎಂಜಿನ್​ ಅನ್ನು ‘ಇಂಟರ್​ನ್ಯಾಷನಲ್ ಏರೋ ಎಂಜಿನ್ಸ್ ಎಜಿ’ ನಿರ್ಮಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಈ ಎಂಜಿನ್​ನಲ್ಲಿ ಈ ಹಿಂದೆ ಎಂದಾದರೂ ಇಂಥ ಘಟನೆ ಸಂಭವಿಸಿತ್ತೇ ಎಂಬುದನ್ನು ಡಿಜಿಸಿಎ ಅಧ್ಯಯನ ನಡೆಸಲಿದೆ. ಜತೆಗೆ, ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದನ್ನೂ ಶೋಧಿಸಲಿದೆ. ವಿಸ್ತೃತ ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಡಿಜಿಸಿಎ ತಿಳಿಸಿದೆ.

6E-2131 ನಂಬರಿನ ಇಂಡಿಗೋ ವಿಮಾನದ ಎರಡನೇ ಎಂಜಿನ್​ ವೈಫಲ್ಯದ ಸಂದೇಶ ನೀಡಿತ್ತು. ಟೇಕಾಫ್ ಸಂದರ್ಭದಲ್ಲೇ ಈ ಸಂದೇಶ ಬಂದಿತ್ತು. ಭಾರಿ ಸದ್ದಿನೊಂದಿಗೆ ಬೆಂಕಿ ನಂದಿಸುವ ಸಾಧನ ತೆರೆದುಕೊಂಡಿತ್ತು ಎಂದು ಡಿಜಿಸಿಎ ಮೂಲಗಳು ಹೇಳಿವೆ. ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಘಟನೆ ಬಗ್ಗೆ ಶೀಘ್ರ ವರದಿ ನೀಡುವಂತೆ ವಿಮಾನಯಾನ ಸಚಿವಾಲಯ ಡಿಜಿಸಿಎಗೆ ಸೂಚಿಸಿದೆ.

ಈ ಮಧ್ಯೆ, ಘಟನೆಗೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ: ಬೆಂಗಳೂರಿಗೆ ಹೊರಟಿದ್ದ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ: ದಿಲ್ಲಿ ನಿಲ್ದಾಣದಲ್ಲಿ ಹೈಅಲರ್ಟ್