ಶಾಲೆಗೆ ಚಕ್ಕರ್ ಹೊಡೆದು ಒಟ್ಟಿಗೇ ವಿಷ ಕುಡಿದ ಮೂವರು ಬಾಲಕಿಯರು; ಇಬ್ಬರು ಸಾವು, ಒಬ್ಬಳು ಬಚಾವ್
ಇಂದೋರ್‌ಗೆ ಹೋಗಿ ವಿಷ ಖರೀದಿಸಿದ ಅವರು ಆ ವಿಷ ಕುಡಿದಿದ್ದಾರೆ. ಮೂವರಲ್ಲಿ ಇಬ್ಬರು ಬಾಲಕಿಯರು ಮೃತಪಟ್ಟಿದ್ದು, ಇನ್ನೊಬ್ಬಳ ಸ್ಥಿತಿ ಚಿಂತಾಜನಕವಾಗಿದೆ. ವಿಷ ಸೇವಿಸಲು ಕಾರಣವೇನೆಂದು ಇನ್ನೂ ಖಚಿತವಾಗಿಲ್ಲ.
ಇಂದೋರ್: ಶಾಲೆಗೆ ಬಂಕ್ ಮಾಡಿದ ಮೂವರು ಬಾಲಕಿಯರು ಒಟ್ಟಿಗೇ ವಿಷ ಸೇವಿಸಿರುವ ಘಟನೆ ಇಂದೋರ್ನಲ್ಲಿ (Indore) ನಡೆದಿದೆ. ಇಲ್ಲಿನ 16 ವರ್ಷದ ಮೂವರು ಬಾಲಕಿಯರು ಶಾಲೆಗೆ ಚಕ್ಕರ್ ಹಾಕಿದ್ದರು. ಪೇಟೆಗೆ ಹೋಗಿ ವಿಷ ಖರೀದಿಸಿದ ಅವರು ಆ ವಿಷ ಕುಡಿದಿದ್ದಾರೆ. ಮೂವರಲ್ಲಿ ಇಬ್ಬರು ಬಾಲಕಿಯರು ಮೃತಪಟ್ಟಿದ್ದು, ಇನ್ನೊಬ್ಬಳ ಸ್ಥಿತಿ ಚಿಂತಾಜನಕವಾಗಿದೆ. ವಿಷ ಸೇವಿಸಲು ಕಾರಣವೇನೆಂದು ಇನ್ನೂ ಖಚಿತವಾಗಿಲ್ಲ.
ಹೆಚ್ಚುವರಿ ಡಿಸಿಪಿ ಪ್ರಶಾಂತ್ ಚೌಬೆ ಈ ಬಗ್ಗೆ ಮಾಹಿತಿ ನೀಡಿದ್ದು, ಹುಡುಗಿಯರು ಮೊದಲೇ ವಿಷವನ್ನು ಖರೀದಿಸಿ, ಇಂದೋರ್‌ಗೆ 120 ಕಿಮೀ ಪ್ರಯಾಣಿಸಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಆದರೆ, ಇದಕ್ಕೆ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ.
ತನಿಖಾ ವರದಿಯ ಪ್ರಕಾರ, ಆ ಮೂವರಲ್ಲಿ ಒಬ್ಬಳು ಹುಡುಗಿ ತನ್ನ ಗೆಳೆಯನನ್ನು ಭೇಟಿಯಾಗಲು ಬಂದಿದ್ದಳು. ಒಂದುವೇಳೆ ಅವನು ತನ್ನನ್ನು ಭೇಟಿಯಾಗಲು ನಿರಾಕರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳಲು ವಿಷವನ್ನು ತೆಗೆದುಕೊಂಡು ಹೋಗಿದ್ದಳು. ಅವಳ ಜೊತೆ ಹೋಗಿದ್ದ ಇನ್ನೊಬ್ಬಳು ಹುಡುಗಿ ಕೌಟುಂಬಿಕ ಕಲಹಗಳಿಂದಾಗಿ ಆತ್ಮಹತ್ಯೆಗೆ ನಿರ್ಧರಿಸಿದ್ದಳು. ತನ್ನ ಇಬ್ಬರು ಸ್ನೇಹಿತೆಯರು ವಿಷ ಕುಡಿದಿದ್ದನ್ನು ನೋಡಿ ಮೂರನೆಯ ಬಾಲಕಿ ವಿಷ ಸೇವಿಸಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ: ತೋಟದಲ್ಲಿ ವಿಷ ಬೆರೆಸಿಟ್ಟಿದ್ದ ಅಕ್ಕಿಯನ್ನು ತಿಂದು 5 ಜಾನುವಾರುಗಳು ಸಾವು: ಕಣ್ಣೀರಿಟ್ಟ ಮಾಲೀಕರು
ಆ ಹುಡುಗಿಯರು ಇಂದೋರ್ ನಗರದಲ್ಲಿ ಸ್ವಲ್ಪ ಸಮಯದವರೆಗೆ ಸುತ್ತಾಡಿದರು. ನಂತರ ಭನ್ವಾರ್ಕುವಾನ್ ಪ್ರದೇಶದ ಆಸ್ಪತ್ರೆಯೊಂದರ ಬಳಿಯ ಪಾರ್ಕ್ನಲ್ಲಿ ವಿಷ ಸೇವಿಸಿದರು. ತಕ್ಷಣ ಮೂವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ವೇಳೆ ಇಬ್ಬರು ಮೃತಪಟ್ಟಿದ್ದಾರೆ. ಅವರ ಕುಟುಂಬಸ್ಥರಿಗೆ ವಿಷಯ ತಿಳಿಸಲಾಗಿದ್ದು, ತನಿಖೆ ಮುಂದುವರೆದಿದೆ.