ಮುಂಬೈ: ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ 10 ನವಜಾತ ಶಿಶುಗಳು ಮರಣಿಸಿರುವ ದಾರುಣ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಭಂಡಾರ ಸರ್ಕಾರಿ ಆಸ್ಪತ್ರೆಯಲ್ಲಿ, ಇಂದು ಮುಂಜಾನೆ ಸಂಭವಿಸಿದೆ.
ರಾತ್ರಿ 1.30ರ ವೇಳೆಗೆ ಆಸ್ಪತ್ರೆಯ ಹೊರವಿಭಾಗದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಆ ಸಮಯದಲ್ಲಿ, ಮಕ್ಕಳ ವಾರ್ಡ್ನಲ್ಲಿ ಇಬ್ಬರು ದಾದಿಯರು ಹಾಗೂ ಓರ್ವ ಸಹಾಯಕಿ ಇದ್ದರು. ಅವರು ಕೂಡಲೆ ಜಾಗೃತರಾಗಿ, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆದರೆ, ದುರಾದೃಷ್ಟವಷಾತ್ ಅಗ್ನಿಶಾಮಕ ವಾಹನ ಸ್ಥಳಕ್ಕೆ ಆಗಮಿಸುವ ಮೊದಲೇ 10 ಹಸುಳೆಗಳು ಮರಣ ಹೊಂದಿವೆ. ಆಸ್ಪತ್ರೆಯ ಸಿಬ್ಬಂದಿಗಳು ರಕ್ಷಣಾ ಕಾರ್ಯಕ್ಕೆ ಪ್ರಯತ್ನಿಸಿದರು. ಆ ಮೂಲಕ ಏಳು ಶಿಶುಗಳನ್ನು ರಕ್ಷಿಸಲಾಯಿತು ಎಂದು ಜಿಲ್ಲಾ ಕಲೆಕ್ಟರ್ ಸಂದೀಪ್ ಕಡಮ್ ತಿಳಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಸಂಭವಿಸಿರುವ ಸಾಧ್ಯತೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಭಂಡಾರ ಜಿಲ್ಲಾ ಆರೋಗ್ಯ ಅಧಿಕಾರಿ, ಡಾ. ಪ್ರಶಾಂತ್ ಉಯಿಕೆ, 36 ಹಾಸಿಗೆಗಳಿರುವ ವಾರ್ಡ್ನಲ್ಲಿ ಶುಕ್ರವಾರ ರಾತ್ರಿ 17 ಮಕ್ಕಳಿದ್ದರು. ಅದರಲ್ಲಿ 7 ಮಕ್ಕಳನ್ನು ರಕ್ಷಿಸಲಾಗಿದೆ. ಅವರನ್ನು ಮತ್ತೊಂದು ವಾರ್ಡ್ಗೆ ಸ್ಥಳಾಂತರಿಸಲಾಗಿದೆ. ಬೇರೆ ಆಸ್ಪತ್ರೆಗೆ ಕಳುಹಿಸುವ ಬಗ್ಗೆ ಯೋಚನೆ ಇಲ್ಲ ಎಂದು ಹೇಳಿದ್ದಾರೆ.
ತೀರಿಕೊಂಡಿರುವ ಶಿಶುಗಳಲ್ಲಿ ಹಲವು ಹಸುಳೆಗಳು, ಉಸಿರಾಟದ ಸಮಸ್ಯೆಯಿಂದಲೇ ಮರಣಿಸಿವೆ. ಹೊಗೆಯನ್ನು ಉಸಿರಾಡಿ ಸಾವನ್ನಪ್ಪಿವೆ. ಒಂದೆರಡು ಶಿಶುಗಳು ಮಾತ್ರ ಅಗ್ನಿ ಅವಘಡದಿಂದ ಗಾಯಗೊಂಡು ತೀರಿಕೊಂಡಿವೆ ಎಂದು ಸಿವಿಲ್ ಸರ್ಜನ್ ಡಾ. ಪ್ರಮೋದ್ ಖಂಡಾತೆ ತಿಳಿಸಿದ್ದಾರೆ. ಮೃತ ಶಿಶುಗಳು ಬೇರೆ ಆಸ್ಪತ್ರೆಯಲ್ಲಿ ಹುಟ್ಟಿದವರಾಗಿದ್ದಾರೆ. ಹಾಗೂ ಈ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲೆಗೊಂಡವರಾಗಿದ್ದಾರೆ. ಹಾಗಾಗಿ, ಮೃತರಲ್ಲಿ ಎಷ್ಟು ಶಿಶುಗಳು ಗಂಡು ಹಾಗೂ ಎಷ್ಟು ಹೆಣ್ಣು ಎಂದು ಈಕೂಡಲೇ ಮಾಹಿತಿ ಲಭ್ಯವಿಲ್ಲ ಎಂದೂ ಅವರು ಮಾತನಾಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ಘಟನೆಯ ಬಗ್ಗೆ, ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪೆ, ಭಂಡಾರ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಬಳಿ ಮಾತನಾಡಿ ತನಿಖಾ ತಂಡವೊಂದನ್ನು ರಚಿಸಲು ಆದೇಶಿಸಿದ್ದಾರೆ. ಜೊತೆಗೆ, ಸರ್ಕಾರ ರಾಜ್ಯದ ಎಲ್ಲಾ ನವಜಾತ ಶಿಶು ಕೇಂದ್ರದ ಪರಿಶೋಧನೆ ನಡೆಸುವುದಾಗಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ. ಮೃತ ಶಿಶುಗಳ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಮರಣೋತ್ತರ ಪರೀಕ್ಷೆ ನಡೆಸದೆ, ಮೃತ ಶಿಶುಗಳ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಇದು ಹೃದಯ ವಿದ್ರಾವಕ ಘಟನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಮೃತ ಶಿಶುಗಳ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಕೇಳಿಕೊಂಡಿದ್ದಾರೆ. ಗಾಯಗೊಂಡಿರುವ ಮಕ್ಕಳು, ಆದಷ್ಟು ಶೀಘ್ರವಾಗಿ ಗುಣಮುಖರಾಗಲಿ ಎಂದು ಕೇಳಿಕೊಂಡಿದ್ದಾರೆ.
Heart-wrenching tragedy in Bhandara, Maharashtra, where we have lost precious young lives. My thoughts are with all the bereaved families. I hope the injured recover as early as possible.
— Narendra Modi (@narendramodi) January 9, 2021
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮೃತರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ನೀಡಲಿ. ಸರ್ಕಾರ ಕುಟುಂಬಸ್ಥರಿಗೆ ಸೂಕ್ತ ಸಹಾಯ ಮಾಡಲಿ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
The fire accident in Bhandara district hospital, Maharashtra is very unfortunate. I am pained beyond words. My thoughts and condolences are with bereaved families. May God give them the strength to bear this irreparable loss.
— Amit Shah (@AmitShah) January 9, 2021
The unfortunate incident of fire at Bhandara District General Hospital in Maharashtra is extremely tragic.
My condolences to the families of the children who lost their lives.
I appeal to Maha Govt to provide every possible assistance to the families of the injured & deceased.
— Rahul Gandhi (@RahulGandhi) January 9, 2021
Published On - 1:18 pm, Sat, 9 January 21