ಸರ್ಕಾರ -ಸೆರಮ್ ನಡುವೆ ಲಸಿಕೆ ಬೆಲೆ ಒಪ್ಪಂದದಲ್ಲಿ ಯಾವುದೇ ಬಿರುಕು ಇಲ್ಲ; ಚೌಕಾಸಿ ನಡೆದಿಲ್ಲ: ಪೂನಾವಾಲಾ
ಸೆರಮ್ ಮತ್ತು ಕೇಂದ್ರ ಸರ್ಕಾರದ ನಡುವೆ ಕೊರೊನಾ ಲಸಿಕೆ ದರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಮಾತುಗಳನ್ನು ಸ್ಪಷ್ಟವಾಗಿ ನಿರಾಕರಿಸಿರುವ ಸೆರಮ್ ಮುಖ್ಯಸ್ಥ ಅದರ್ ಪೂನಾವಾಲಾ ಒಪ್ಪಂದದ ವಿಚಾರದಲ್ಲಿ ಯಾವುದೇ ಬಿರುಕುಗಳಿಲ್ಲ ಸೋಮವಾರದ ನಂತರ ಲಸಿಕೆ ತಲುಪಿಸುವ ಪ್ರಯತ್ನ ಆಗಲಿದೆ ಎಂದು ಹೇಳಿದ್ದಾರೆ.
ಪುಣೆ: ದೇಶದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಅಥವಾ ನಾಳೆ ಎಲ್ಲಾ ರಾಜ್ಯಗಳಿಗೆ ಲಸಿಕೆ ತಲುಪಲಿದೆ ಎಂಬ ಮಾತು ಕೇಳಿಬರುತ್ತಿರುವಾಗಲೇ ಲಸಿಕೆ ವಿತರಣೆ ಕೊಂಚ ತಡವಾಗಲಿದೆ ಎಂದು ಸೆರಮ್ ಸಂಸ್ಥೆ ಹೇಳಿದೆ. ವಿಮಾನಗಳ ಮೂಲಕ ಕೊರೊನಾ ಲಸಿಕೆ ಸಾಗಿಸುವ ಮುನ್ನ ಕೆಲ ಪ್ರಕ್ರಿಯೆಗಳನ್ನು ಪಾಲಿಸಬೇಕಿದೆ. ಆದ್ದರಿಂದ ಲಸಿಕೆಗಳ ಸಾಗಣೆ 48 ಗಂಟೆಗಳ ಕಾಲ ಮುಂದೆ ಹೋಗಬಹುದು ಎಂದು ಸೆರಮ್ ಅಭಿಪ್ರಾಯಪಟ್ಟಿದೆ.
ಈ ನಡುವೆ, ಸೆರಮ್ ಮತ್ತು ಕೇಂದ್ರ ಸರ್ಕಾರದ ನಡುವೆ ಕೊರೊನಾ ಲಸಿಕೆ ದರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಅದನ್ನು ಸ್ಪಷ್ಟವಾಗಿ ನಿರಾಕರಿಸಿರುವ ಸೆರಮ್ ಮುಖ್ಯಸ್ಥ ಅದರ್ ಪೂನಾವಾಲಾ ಒಪ್ಪಂದದ ವಿಚಾರದಲ್ಲಿ ಯಾವುದೇ ಬಿರುಕುಗಳಿಲ್ಲ. ತಾಂತ್ರಿಕ ಕಾರಣಗಳಿಗಾಗಿ ಪೂರೈಕೆ ವಿಳಂಬವಾಗುತ್ತಿದೆಯಷ್ಟೇ. ಅದಾಗ್ಯೂ ಸೋಮವಾರದ ನಂತರ ಲಸಿಕೆ ತಲುಪಿಸುವ ಪ್ರಯತ್ನ ಆಗಲಿದೆ ಎಂದು ಹೇಳಿದ್ದಾರೆ.
ಕೊರೊನಾ ಲಸಿಕೆ ದರಕ್ಕೆ ಸಂಬಂಧಿಸಿದಂತೆ ಸೆರಮ್ ಸಂಸ್ಥೆ ಕೆಲ ದಿನಗಳ ಹಿಂದೆಯಷ್ಟೇ ವಿವರಣೆ ನೀಡಿತ್ತು. ಮೊದಲ 10 ಕೋಟಿ ಕೊರೊನಾ ಲಸಿಕೆ ಡೋಸ್ಗಳನ್ನು ಒಂದು ಡೋಸ್ಗೆ ₹200ರಂತೆ ರಿಯಾಯಿತಿ ದರದಲ್ಲಿ ಸರ್ಕಾರಕ್ಕೆ ನೀಡುತ್ತೇವೆ. ನಂತರ ಖಾಸಗಿ ಮಾರುಕಟ್ಟೆಯಲ್ಲಿ ಒಂದು ಡೋಸ್ಗೆ ₹1000ದಷ್ಟು ದರ ನಿಗದಿಪಡಿಸಲಾಗುವುದು ಎಂದು ತಿಳಿಸಿತ್ತು.
ಈಗಾಗಲೇ ಪುಣೆಯ ಮಂಜರಿ ಕೇಂದ್ರದಲ್ಲಿ 5ಕೋಟಿ ಡೋಸ್ ಲಸಿಕೆ ಸಿದ್ಧವಿದೆ. ಸದ್ಯ ತಿಂಗಳಿಗೆ 5ರಿಂದ 6ಕೋಟಿ ಡೋಸ್ ಲಸಿಕೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಪೂನಾವಾಲಾ ಹೇಳಿದ್ದಾರೆ. ಇತ್ತ ವಿಮಾನ ನಿಲ್ದಾಣಗಳಲ್ಲಿ ಲಸಿಕೆ ಸಾಗಾಟ ಮಾಡಲು ಸಕಲ ಸಿದ್ಧತೆಗಳೂ ಆಗಿವೆ. ಯಾವ ಕ್ಷಣದಲ್ಲಿ ಆದೇಶ ಬಂದರೂ ನಾವು ಸಿದ್ಧರಿದ್ದೇವೆ ಎಂದು ಪುಣೆ ವಿಮಾನ ನಿಲ್ದಾಣದ ನಿರ್ದೇಶಕ ಕುಲ್ದೀಪ್ ಸಿಂಗ್ ತಿಳಿಸಿದ್ದಾರೆ. ಹೀಗಾಗಿ ಇನ್ನೊಂದು ವಾರದಲ್ಲಿ ಲಸಿಕೆ ವಿತರಣೆ ಆರಂಭವಾಗುವ ಸಾಧ್ಯತೆ ಇದೆ.
ಕರ್ನಾಟಕಕ್ಕೆ ಯಾವ ಕಂಪೆನಿಯ ಲಸಿಕೆ ಬರಲಿದೆ.. ಕೊವ್ಯಾಕ್ಸಿನ್ ಅಥವಾ ಕೊವಿಶೀಲ್ಡ್?