ರಾಜಕೀಯದಲ್ಲಿ ಶಾಶ್ವತ ಮಿತ್ರರಾಗಲಿ, ಶತ್ರುವಾಗಲೀ ಇರುವುದಿಲ್ಲ ಎಂಬುದಕ್ಕೆ ರಾಹುಲ್ ಗಾಂಧಿ(Rahul Gandhi), ಅಖಿಲೇಶ್ ಯಾದವ್(Akhilesh Yadav) ಸಾಕ್ಷಿ. ಏಕೆಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಸಮಾಜವಾದಿ ಪಕ್ಷದ ಹೀನಾಯ ಸೋಲಿನ ನಂತರ ಮುರಿದುಬಿದ್ದ ಸ್ನೇಹ 2024ರ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತೆ ಚಿಗುರುತ್ತಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಲು ರಣತಂತ್ರ ಹೆಣೆಯಲು ಸಿದ್ಧವಾಗಿದ್ದಾರೆ.
ಸೀಟು ಹಂಚಿಕೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವವರೆಗೂ ಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದ ಅಖಿಲೇಶ್ ಯಾದವ್, ಇಂದು ಆಗ್ರಾದಲ್ಲಿ ನಡೆಯುತ್ತಿರುವ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಹುಲ್ ಗಾಂಧಿ ಆಗ್ರಾ ಸಮೀಪಿಸುತ್ತಿದ್ದಂತೆ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮಲ್ಲಿಕಾರ್ಜುನ ಖರ್ಗೆ ಅಖಿಲೇಶ್ ಯಾದವ್ ಅವರನ್ನು ಆಹ್ವಾನಿಸಿದ್ದರು.
ಇದೇ ವೇಳೆ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಮತ್ತು ಕಾಂಗ್ರೆಸ್ ನಾಯಕ ಪಿಎಲ್ ಪುನಿಯಾ ಖುದ್ದು ಲಕ್ನೋದಲ್ಲಿರುವ ಎಸ್ಪಿ ಕೇಂದ್ರ ಕಚೇರಿಗೆ ಆಗಮಿಸಿ ಅಖಿಲೇಶ್ಗೆ ಆಹ್ವಾನ ಪತ್ರಿಕೆಯನ್ನು ಹಸ್ತಾಂತರಿಸಿದ್ದರು. ಆಗ್ರಾದಲ್ಲಿ ನಡೆಯಲಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೂಡ ಪಾಲ್ಗೊಳ್ಳುವ ಸಾಧ್ಯತೆ ಇದೆ. ರಾಹುಲ್ ಗಾಂಧಿ ತೆಹ್ರಾ ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಮತ್ತಷ್ಟು ಓದಿ: ಎಸ್ಪಿ, ಕಾಂಗ್ರೆಸ್ ಮೈತ್ರಿ ದೃಢ, ಚುನಾವಣೆಯಲ್ಲಿ ಒಟ್ಟಾಗಿ ಹೋರಾಡಲಿದ್ದೇವೆ ಎಂದ ಅಖಿಲೇಶ್ ಯಾದವ್
ಮುಂಬರುವ ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ನಡುವೆ ಮೈತ್ರಿ ಇದೆ. ರಾಯ್ಬರೇಲಿ, ಅಮೇಥಿ, ಕಾನ್ಪುರ ನಗರ, ಫತೇಪುರ್ ಸಿಕ್ರಿ, ಬನ್ಸ್ಗಾಂವ್, ಸಹರಾನ್ಪುರ, ಪ್ರಯಾಗ್ರಾಜ್, ಮಹಾರಾಜ್ಗಂಜ್, ವಾರಾಣಸಿ, ಅಮ್ರೋಹಾ, ಝಾನ್ಸಿ, ಬುಲಂದ್ಶಹರ್, ಗಾಜಿಯಾಬಾದ್, ಮಥುರಾ, ಸೀತಾಪುರ್, ಬಾರಾಬಂಕಿ, ಡಿಯೋರಿಯಾ ಸೇರಿದಂತೆ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ. ಎಸ್ಪಿ ಹಾಗೂ ಇಂಡಿಯಾ ಒಕ್ಕೂಟದ ಇತರೆ ಅಭ್ಯರ್ಥಿಗಳು ಉಳಿದ 63 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದಾರೆ. ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಸ್ಥಾನಗಳಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ