ಎಸ್ಪಿ, ಕಾಂಗ್ರೆಸ್ ಮೈತ್ರಿ ದೃಢ, ಚುನಾವಣೆಯಲ್ಲಿ ಒಟ್ಟಾಗಿ ಹೋರಾಡಲಿದ್ದೇವೆ ಎಂದ ಅಖಿಲೇಶ್ ಯಾದವ್
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಒಟ್ಟಾಗಿ ಸ್ಪರ್ಧಿಸುವುದಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸ್ಪಷ್ಟಪಡಿಸಿದ್ದಾರ. ಇದರಿಂದಾಗಿ ಕಾಂಗ್ರೆಸ್, ಸಮಾಜವಾದಿ ಪಕ್ಷದ ಮೈತ್ರಿ ಬಗ್ಗೆ ಇದ್ದ ಊಹಾಪೋಹಗಳು ದೂರವಾದಂತಾಗಿದೆ.
ಉತ್ತರ ಪ್ರದೇಶ(Uttar Pradesh)ದಲ್ಲಿ ಸಮಾಜವಾದಿ ಪಕ್ಷ(Samajwadi Party) ಹಾಗೂ ಕಾಂಗ್ರೆಸ್(Congress) ನಡುವಿನ ಮೈತ್ರಿಯನ್ನು ಅಖಿಲೇಶ್ ಯಾದವ್ ಖಚಿತಪಡಿಸಿದ್ದಾರೆ. ಈಗಾಗಲೇ ಸೀಟು ಹಂಚಿಕೆ ಕುರಿತು ಎರಡೂ ಪಕ್ಷಗಳ ನಡುವೆ ಭಿನ್ನಾಭಿಪ್ರಾಯವಿರುವುದು ಎಲ್ಲರಿಗೂ ಗೊತ್ತಿದೆ. ಇದೀಗ ಬಂದ ಮಾಹಿತಿ ಪ್ರಕಾರ ಎಲ್ಲವೂ ಸರಿ ಇದೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುವುದಾಗಿ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಘೋಷಿಸಿದ್ದಾರೆ.
ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ನಡೆದಿದೆ. ಸಮಾಜವಾದಿ ಪಕ್ಷವು ಶ್ರಾವಸ್ತಿ ಮತ್ತು ಲಖಿಂಪುರ ಖೇರಿ ಸ್ಥಾನಗಳನ್ನು ನೀಡಿದರೆ 17 ಸ್ಥಾನಗಳಲ್ಲಿ ಚುನಾವಣೆ ಎದುರಿಸಲು ಕಾಂಗ್ರೆಸ್ ಸಿದ್ಧವಾಗಿದೆ. ಆದರೆ ಕಾಂಗ್ರೆಸ್ ಲಖಿಂಪುರ ಖೇರಿ ಮತ್ತು ಶ್ರಾವಸ್ತಿ ಸ್ಥಾನಗಳನ್ನು ತನಗೆ ನೀಡಬೇಕೆಂದು ಬಯಸಿದೆ. ಇದಕ್ಕೆ ಪ್ರತಿಯಾಗಿ ಅವರು ಪಶ್ಚಿಮ ಉತ್ತರ ಪ್ರದೇಶದ ಬುಲಂದ್‌ಶಹರ್ ಸ್ಥಾನವನ್ನು ತೊರೆಯಲು ಸಿದ್ಧರಾಗಿದ್ದಾರೆ.
ಈ ಪ್ರಸ್ತಾವನೆಯನ್ನು ಸಮಾಜವಾದಿ ಪಕ್ಷ ಪರಿಗಣಿಸಿದ್ದು, ಅಂತಿಮ ನಿರ್ಧಾರವನ್ನು ಗುರುವಾರ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ ಯಾತ್ರೆ ಇದ್ದರೂ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಭಾಗವಹಿಸಲಿಲ್ಲ ಎನ್ನುವ ಕಾರಣ ಹಾಗೂ ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆ ವಿವಾದ ನಿನ್ನೆ ರಾತ್ರಿಯವರೆಗೂ ಮುಂದುವರೆದಿದೆ. ನ್ಯಾಯ ಯಾತ್ರೆ ಮಂಗಳವಾರ ಅಮೇಥಿ, ರಾಯ್ ಬರೇಲಿ ಮೂಲಕ ಲಕ್ನೋಗೆ ಬಂದು ಬುಧವಾರ ಬೆಳಗ್ಗೆ ಉನ್ನಾವೋಗೆ ತೆರಳಿತು.
ಮತ್ತಷ್ಟು ಓದಿ: ಸೀಟು ಹಂಚಿಕೆ ಕುರಿತು ಅಂತಿಮ ತೀರ್ಮಾನಕ್ಕೆ ಬರುವವರೆಗೂ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ: ಅಖಿಲೇಶ್
ಸಮಾಜವಾದಿ ಪಕ್ಷವು 11 ಅಭ್ಯರ್ಥಿಗಳನ್ನು ಘೋಷಿಸಿತ್ತು. ಇದರಲ್ಲಿ ಈ ಹಿಂದೆ ಕಾಂಗ್ರೆಸ್‌ಗೆ ನೀಡಲಾಗುವುದು ಎಂದು ಹೇಳಲಾಗಿದ್ದ ವಾರಾಣಸಿ ಕ್ಷೇತ್ರದಲ್ಲೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಎಸ್‌ಪಿ ಮಂಗಳವಾರ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಜನವರಿ 30ರಂದು ಎಸ್ಪಿಯ ಮೊದಲ ಪಟ್ಟಿ ಬಹಿರಂಗವಾಗಿದೆ.
ಇದರಲ್ಲಿ 16 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಇದಾದ ನಂತರ ಫೆಬ್ರವರಿ 19 ರಂದು ಎರಡನೇ ಪಟ್ಟಿ ಮತ್ತು ಫೆಬ್ರವರಿ 20 ರಂದು ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳಿಗೆ ಎಸ್‌ಪಿ ಇದುವರೆಗೆ 31 ಅಭ್ಯರ್ಥಿಗಳನ್ನು ಘೋಷಿಸಿದೆ. ಇನ್ನೊಂದೆಡೆ ಉತ್ತರ ಪ್ರದೇಶದಲ್ಲಿ ಮಾಯಾವತಿಗೆ ದೊಡ್ಡ ಆಘಾತ ಎದುರಾಗಬಹುದು ಎಂದು ಹೇಳಲಾಗಿದೆ. ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಗೆದ್ದ 10 ಬಿಎಸ್ಪಿ ಸಂಸದರು ಪಕ್ಷವನ್ನು ತೊರೆಯಬಹುದು ಎಂದು ಹೇಳಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:31 pm, Wed, 21 February 24