Rahul Gandhi: ಅಂದು ಕನ್ಯಾಕುಮಾರಿ, ಇಂದು ಮಣಿಪುರ; ರಾಹುಲ್ ಗಾಂಧಿಯ ಎರಡನೇ ಆವೃತ್ತಿಯ ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್​ಗೆ ಗೆಲುವಿನ ವಿಶ್ವಾಸ ಮೂಡಿಸುತ್ತಾ?

|

Updated on: Jan 14, 2024 | 12:22 PM

Bharat Jodo Nyay Yatra: ರಾಹುಲ್ ಗಾಂಧಿ ಮಣಿಪುರದ ತೌಬಲ್ ಜಿಲ್ಲೆಯಿಂದ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಜನವರಿ 14ರಂದು ಆರಂಭಿಸುತ್ತಿದ್ದಾರೆ. ಮಾರ್ಚ್ 20 ಅಥವಾ 21ರಂದು ಮುಂಬೈವರೆಗೂ ನ್ಯಾಯ ಯಾತ್ರೆ ಸಾಗಲಿದ್ದು, 15 ರಾಜ್ಯಗಳಲ್ಲಿ 6,713 ಕಿಮೀ ದೂರ ಕ್ರಮಿಸುತ್ತದೆ. ಉತ್ತರಪ್ರದೇಶದ 13 ರಾಜ್ಯಗಳಲ್ಲಿ ಯಾತ್ರೆ ಸಾಗಲಿದ್ದು, ಅಯೋಧ್ಯೆಯನ್ನು ಯಾತ್ರೆಯಿಂದ ಕೈಬಿಟ್ಟಿದೆ.

Rahul Gandhi: ಅಂದು ಕನ್ಯಾಕುಮಾರಿ, ಇಂದು ಮಣಿಪುರ; ರಾಹುಲ್ ಗಾಂಧಿಯ ಎರಡನೇ ಆವೃತ್ತಿಯ ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್​ಗೆ ಗೆಲುವಿನ ವಿಶ್ವಾಸ ಮೂಡಿಸುತ್ತಾ?
ಭಾರತ್ ಜೋಡೋ ಯಾತ್ರೆ
Follow us on

ನವದೆಹಲಿ, ಜನವರಿ 14: ರಾಹುಲ್ ಗಾಂಧಿ ಎರಡು ವರ್ಷದಲ್ಲಿ ಎರಡನೇ ಬಾರಿ ಭಾರತ್ ಜೋಡೋ ಯಾತ್ರೆ (Bharat Jodo Nyay Yatra) ಕೈಗೊಂಡಿದ್ದಾರೆ. ಅಂದು ದಕ್ಷಿಣ ತುದಿಯ ತಮಿಳುನಾಡಿನ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಆರಂಭವಾಗಿತ್ತು. ಇದೀಗ ಪೂರ್ವಾಂಚಿನ ಮಣಿಪುರದ ತೌಬಲ್ ಜಿಲ್ಲೆಯಿಂದ ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭವಾಗುತ್ತಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ 10 ವರ್ಷದ ಆಡಳಿತಾವಧಿಯ ಅನ್ಯಾಯ ಕಾಲವನ್ನು ಅಂತ್ಯಗೊಳಿಸುವ ಸಂಕಲ್ಪದೊಂದಿಗೆ ರಾಹುಲ್ ಗಾಂಧಿ ನ್ಯಾಯ ಯಾತ್ರೆ ಕೈಗೊಂಡಿದ್ದಾರೆ. ಮಣಿಪುರದಿಂದ ಮುಂಬೈವರೆಗಿನ ಈ ಎರಡನೇ ಆವೃತ್ತಿಯ ಭಾರತ್ ಜೋಡೋ ಯಾತ್ರೆ ಇಂದು ಅರಂಭವಾಗಿ ಮಾರ್ಚ್ 20 ಅಥವಾ 21ರಂದು ಮುಂಬೈನಲ್ಲಿ ಪರ್ಯಾವಸಾನಗೊಳ್ಳುತ್ತದೆ. 15 ರಾಜ್ಯಗಳಲ್ಲಿ 100 ಲೋಕಸಭಾ ಕ್ಷೇತ್ರಗಳಾದ್ಯಂತ ಒಟ್ಟು 6,713 ಕಿಮೀ ದೂರ ಯಾತ್ರೆ ಸಾಗಲಿದೆ. ಬಸ್ಸು ಹಾಗೂ ಕಾಲ್ನಡಿಯಲ್ಲಿ ಯಾತ್ರೆ ಸಂಚಾರ ಇರುತ್ತದೆ.

ರಾಹುಲ್ ಗಾಂಧಿ ಅವರ ಮೊದಲ ಭಾರತ್ ಜೋಡೋ ಯಾತ್ರೆ ದಕ್ಷಿಣದಿಂದ ಉತ್ತರದವರೆಗೆ ಸಾಗಿತ್ತು. ನ್ಯಾಯ ಯಾತ್ರೆ ಪೂರ್ವದಿಂದ ಪಶ್ಚಿಮದವರೆಗೂ ಸಾಗುತ್ತಿದೆ. ಮೊದಲ ಯಾತ್ರೆ 2022ರ ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾಗಿತ್ತು. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಲ್ಲಿ 3,500 ಕಿಮೀ ದೂರ ಯಾತ್ರೆ ಸಾಗಿತ್ತು. ಮಂಡಿ ನೋವಿನ ಮಧ್ಯೆಯೂ ಬಿಸಿಲು, ಚಳಿ, ಹಿಮ ಇತ್ಯಾದಿ ವೈಪರೀತ್ಯ ಹವಾಮಾನದಲ್ಲೂ ರಾಹುಲ್ ಗಾಂಧಿ ದಿಟ್ಟವಾಗಿ ಹೆಜ್ಜೆ ಹಾಕಿದ್ದರು. ಸಾಕಷ್ಟು ಕಡೆ ಉತ್ತಮ ಬೆಂಬಲವನ್ನೂ ಪಡೆದಿದ್ದರು. ಅಷ್ಟಾದರೂ ಕೂಡ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಡ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್​ಗೆ ಗೆಲುವು ದಕ್ಕಲಿಲ್ಲ ಎಂಬುದು ಕುತೂಹಲದ ಸಂಗತಿ.

ಇದನ್ನೂ ಓದಿ: Maharashtra: ಕಾಂಗ್ರೆಸ್​ನ ಮಿಲಿಂದ್ ದೇವರಾ ರಾಜೀನಾಮೆ; ಶಿಂಧೆ ಬಣದ ಶಿವಸೇನಾ ಸೇರಲಿದ್ದಾರಾ ಮಾಜಿ ಸಂಸದ?

ಈ ಬಾರಿ ಭಾರತ್ ಜೋಡೋ ಯಾತ್ರೆ ಮಣಿಪುರದಿಂದ ಆರಂಭವಾಗುತ್ತರುವುದೂ ಕಾಂಗ್ರೆಸ್​ಗೆ ಅದೃಷ್ಟ ಬದಲಾಯಿಸುತ್ತಾ ಗೊತ್ತಿಲ್ಲ. ಜಾತಿ, ವರ್ಗಗಳ ಸಂಘರ್ಷದಿಂದ ನಲುಗುತ್ತಿರುವ ಮಣಿಪುರದ ಮೂಲಕ ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತೆ ಚಿಗುರುವ ಆಸೆ ಹೊಂದಿದೆ.

ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಫಲಿತಾಂಶ ಬಹಳ ಮುಖ್ಯ. ಒಂದು ಕಾಲದಲ್ಲಿ ಕಾಂಗ್ರೆಸ್​ನ ಅಡ್ಡಿಯಾಗಿದ್ದ ಉ.ಪ್ರ.ದಲ್ಲಿ ಆ ಪಕ್ಷ ಹೆಚ್ಚೂಕಡಿಮೆ ಹೇಳ ಹೆಸರಿಲ್ಲದಂತಾಗಿದೆ. ಈ ನ್ಯಾಯ ಯಾತ್ರೆ ಅಯೋಧ್ಯೆ ಬಿಟ್ಟು ಉತ್ತರಪ್ರದೇಶದ 23 ಜಿಲ್ಲೆಗಳಲ್ಲಿ ಸಾಗಲಿದೆ.

ಲೋಕಸಭಾ ಚುನಾವಣೆಗೆ ಕೆಲವೇ ದಿನಗಳ ಮುಂಚಿನವರೆಗೂ ಇರುವ ಭಾರತ್ ಜೋಡೋ ನ್ಯಾಯ ಯಾತ್ರೆಯಿಂದ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಒಕ್ಕೂಟಕ್ಕೆ ಬಲ ಸಿಗುತ್ತದಾ ಇಲ್ಲವಾ ಎಂಬುದು ಬಹಳ ಕುತೂಹಲದ ವಿಚಾರ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ