‘ಭಾರತ್ ಮಾತಾ ಕೀ ಜೈ’, ‘ಜೈ ಹಿಂದ್’ ಘೋಷಣೆ ಮುಸ್ಲಿಮರ ಕೊಡುಗೆ: ಕೇರಳ ಸಿಎಂ ಪಿಣರಾಯಿ ವಿಜಯನ್
ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ಹುಟ್ಟುಹಾಕಿದವರು ಯಾರು? ಸಂಘಪರಿವಾರದ ನಾಯಕರೇ? ಇದು ಸಂಘಪರಿವಾರಕ್ಕೆ ತಿಳಿದಿದೆಯೇ ಎಂದು ನನಗೆ ಗೊತ್ತಿಲ್ಲ. ಆ ಘೋಷಣೆ ಕೊಟ್ಟವರ ಹೆಸರು ಅಜೀಮುಲ್ಲಾ ಖಾನ್, ಅವರು ಸಂಘಪರಿವಾರದ ನಾಯಕರಲ್ಲ”ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ತಿರುವನಂತಪುರಂ ಮಾರ್ಚ್ 26: ‘ಭಾರತ್ ಮಾತಾ ಕೀ ಜೈ’ ಮತ್ತು ‘ಜೈ ಹಿಂದ್’ ಘೋಷಣೆ ಕೊಟ್ಟಿದ್ದೇ ಮುಸ್ಲಿಮರು ಎಂದು ಕೇರಳ (Kerala) ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಹೇಳಿದ್ದಾರೆ. ಈಗ ಕೆಲವು ಕಾರ್ಯಕ್ರಮಗಳಲ್ಲಿ ಕೆಲವು ಸಂಘಪರಿವಾರದ ನಾಯಕರು ಭಾರತ್ ಮಾತಾ ಕಿ ಜೈ ಎಂದು ಕೂಗುವುದನ್ನು ಕೇಳುತ್ತೇವೆ. ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ಹುಟ್ಟುಹಾಕಿದವರು ಯಾರು? ಸಂಘಪರಿವಾರದ ನಾಯಕರೇ? ಇದು ಸಂಘಪರಿವಾರಕ್ಕೆ ತಿಳಿದಿದೆಯೇ ಎಂದು ನನಗೆ ಗೊತ್ತಿಲ್ಲ. ಆ ಘೋಷಣೆ ಕೊಟ್ಟವರ ಹೆಸರು ಅಜೀಮುಲ್ಲಾ ಖಾನ್, ಅವರು ಸಂಘಪರಿವಾರದ ನಾಯಕರಲ್ಲ”ಎಂದು ಕೇರಳ ಸಿಎಂ (Kerala CM) ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಅಜೀಮುಲ್ಲಾ ಖಾನ್ 19 ನೇ ಶತಮಾನದಲ್ಲಿ ಮರಾಠ ಪೇಶ್ವೆ ನಾನಾ ಸಾಹೇಬರಿಗೆ ಪ್ರಧಾನ ಮಂತ್ರಿಯಾಗಿದ್ದರು. ಅವರು ಭಾರತ್ ಮಾತಾ ಕಿ ಜೈ ಎಂಬ ಪದವನ್ನು ಸೃಷ್ಟಿಸಿದರು. ಈ ಘೋಷಣೆಯನ್ನು ಮುಸ್ಲಿಮರು ರೂಪಿಸಿದ್ದರಿಂದ ಸಂಘಪರಿವಾರವು ಅದನ್ನು ಪಠಿಸದಿರಲು ನಿರ್ಧರಿಸುತ್ತದೆಯೇ? ಎಂದು ಸೋಮವಾರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನದ ವಿರುದ್ಧದ ರ‍್ಯಾಲಿಯಲ್ಲಿ ಮಾತನಾಡಿದ ವಿಜಯನ್ ಹೇಳಿದ್ದಾರೆ.
ಮಾಜಿ ರಾಜತಾಂತ್ರಿಕ ಅಬಿದ್ ಹಸನ್ ಅವರು ಜೈ ಹಿಂದ್ ಎಂಬ ಪದವನ್ನು ಹುಟ್ಟುಹಾಕಿದ್ದಾರೆ. ಹಾಗಾಗಿ ಜೈ ಹಿಂದ್ ಮುಸ್ಲಿಮರ ಕೊಡುಗೆಯಾಗಿದೆ. ಮುಸ್ಲಿಮರು ಭಾರತ ಬಿಡಬೇಕು, ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಹೇಳುತ್ತಿರುವ ಸಂಘಪರಿವಾರ ಈ ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನಾನು ಹೇಳುತ್ತೇನೆ ಎಂದಿದ್ದಾರೆ ಪಿಣರಾಯಿ ವಿಜಯನ್.
ಸಿಎಎ ಅನುಷ್ಠಾನದ ಬಗ್ಗೆ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಿಜಯನ್ ವಾಗ್ದಾಳಿ ನಡೆಸಿದ್ದು, ಪ್ರಧಾನಿ ಧರ್ಮದ ಆಧಾರದ ಮೇಲೆ ಪೌರತ್ವವನ್ನು ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: Sonam Wangchuk: “ಹೋರಾಟ ಮುಂದುವರಿಯಲಿದೆ”: 21 ದಿನಗಳ ಉಪವಾಸ ಅಂತ್ಯಗೊಳಿಸಿದ ಸೋನಮ್ ವಾಂಗ್‌ಚುಕ್
ಬಿಜೆಪಿ ತಿರುಗೇಟು
ಪಿಣರಾಯಿ ವಿಜಯನ್ ಹೇಳಿಕೆಗೆ ತಿರುಗೇಟು ನೀಡಿದ ಕೇರಳ ಬಿಜೆಪಿ ನಾಯಕ ಪಿ ಕೆ ಕೃಷ್ಣದಾಸ್, ಸಿಎಂ ಮತ್ತು ಇತರ ಎಡಪಕ್ಷಗಳ ನಾಯಕರು ಮುಸ್ಲಿಮರು ಕೊಟ್ಟ ಘೋಷಣೆಗಳನ್ನು ಕೂಗಲು ಸಿದ್ಧರಿದ್ದಾರೆಯೇ ಎಂದು ಕೇಳಿದ್ದಾರೆ.
ಇದಕ್ಕೂ ಮುನ್ನ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಕೂಡ ವಿಜಯನ್ ವಿರುದ್ಧ ವಾಗ್ದಾಳಿ ನಡೆಸಿ, ಮತಕ್ಕಾಗಿ ವಿಭಜಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಜನರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಇರುವುದರಿಂದ ಅವರು ಇಂತಹ “ಹಳಸಿದ ಮತ್ತು 100 ವರ್ಷಗಳ” ರಾಜಕೀಯವು ವಿರೋಧ ಪಕ್ಷಗಳಿಗೆ ಯಾವುದೇ ಸಕಾರಾತ್ಮಕ ಫಲಿತಾಂಶವನ್ನು ನೀಡುವುದಿಲ್ಲ ಎಂದಿದ್ದಾರೆ ತ್ರಿವೇದಿ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:02 pm, Tue, 26 March 24