ನವದೆಹಲಿ: ಮಹಾರಾಷ್ಟ್ರದ ಶಾಸಕರ ಅನರ್ಹತೆಯ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ತುರ್ತು ವಿಚಾರಣೆ ಕೈಗೆತ್ತಿಕೊಳ್ಳುವುದಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳು ಇತ್ಯರ್ಥವಾಗುವವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಕುರಿತು ಉದ್ಧವ್ ಠಾಕ್ರೆ (Uddhav Thackeray) ಬಣ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ. ಬಂಡಾಯ ಸೇನೆಯ ಶಾಸಕರನ್ನು ಸರ್ಕಾರವನ್ನು ರಚಿಸಲು ಆಹ್ವಾನಿಸುವ ಮಹಾರಾಷ್ಟ್ರದ ರಾಜ್ಯಪಾಲರ ನಿರ್ಧಾರವನ್ನು ಅರ್ಜಿಯಲ್ಲಿ ವಿರೋಧಿಸಲಾಗಿತ್ತು.
ಈ ಪ್ರಕರಣದ ವಿಚಾರಣೆಯನ್ನು ನಾಳೆ ನಡೆಸಲು ಸಾಧ್ಯವಿಲ್ಲ. ಅದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 16 ಬಂಡಾಯ ಶಿವಸೇನೆ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಮಹಾರಾಷ್ಟ್ರದ ಸ್ಪೀಕರ್‌ಗೆ ತಿಳಿಸುವಂತೆ ಸಾಲಿಸಿಟರ್ ಜನರಲ್‌ಗೆ ಆದೇಶಿಸಿದೆ. 16 ಬಂಡಾಯ ಶಿವಸೇನೆ ಶಾಸಕರ ವಿರುದ್ಧ ಬಾಕಿ ಉಳಿದಿರುವ ಅನರ್ಹತೆ ಅರ್ಜಿಗಳು, ಹೊಸದಾಗಿ ಚುನಾಯಿತ ಸ್ಪೀಕರ್‌ನಿಂದ ವಿಧಾನಸಭೆಯಲ್ಲಿ ಮುಖ್ಯ ಸಚೇತಕರ ನೇಮಕ, ವಿಶ್ವಾಸ ಮತ ವಿಚಾರಗಳ ಕುರಿತ ಅರ್ಜಿಗಳ ವಿಚಾರಣೆಯನ್ನು ಪೀಠ ನಡೆಸಿತು.
ಇದನ್ನೂ ಓದಿ: Eknath Shinde: ಫಡ್ನವಿಸ್ ಜೊತೆ ಇಂದು ಸಿಎಂ ಏಕನಾಥ್ ಶಿಂಧೆ ದೆಹಲಿಗೆ ಭೇಟಿ; ಮಹಾರಾಷ್ಟ್ರ ಸಂಪುಟದ ಬಗ್ಗೆ ಚರ್ಚೆ ಸಾಧ್ಯತೆ
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಮತ್ತು ಸಿಎಂ ಏಕನಾಥ್ ಶಿಂಧೆ ನಡುವೆ ಹಗ್ಗಜಗ್ಗಾಟ ಇನ್ನೂ ಮುಂದುವರೆದಿದೆ. ಏಕನಾಥ್ ಶಿಂಧೆ ಬಣ ಮತ್ತು ಉದ್ಧವ್ ಠಾಕ್ರೆ ಬಣದ ವಿರುದ್ಧ ಬಾಕಿ ಉಳಿದಿರುವ ಅನರ್ಹತೆ ಅರ್ಜಿಗಳನ್ನು ಮುಂದೂಡುವಂತೆ ಮಹಾರಾಷ್ಟ್ರ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಮಹಾರಾಷ್ಟ್ರದಲ್ಲಿ ಹೊಸದಾಗಿ ಚುನಾಯಿತರಾದ ವಿಧಾನಸಭಾ ಸ್ಪೀಕರ್ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ರಾಹುಲ್ ನಾರ್ವೇಕರ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಶಿವಸೇನೆಯ ಇತರ ಭಿನ್ನಮತೀಯ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳನ್ನು ನಿರ್ಧರಿಸಲು ಕಾನೂನಿನಲ್ಲಿ ಅಧಿಕಾರ ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಲಾಯಿತು. ಈಗ ಅನರ್ಹತೆಯ ಪ್ರಕ್ರಿಯೆಗಳನ್ನು ಸ್ಪೀಕರ್ ಕೈಗೊಳ್ಳುತ್ತಾರೆಯೇ ಹೊರತು ಉಪಸಭಾಪತಿಯಲ್ಲ ಎಂದು ವಿಧಾನಸಭೆಯ ಕಾರ್ಯದರ್ಶಿ ಹೇಳಿದ್ದರು.
ಇದನ್ನೂ ಓದಿ: ಇಂದು ದೇವೇಂದ್ರ ಫಡ್ನವಿಸ್- ಏಕನಾಥ್ ಶಿಂಧೆಯಿಂದ ಪ್ರಧಾನಿ ಮೋದಿ ಭೇಟಿ; ಅಂತಿಮವಾಗುತ್ತಾ ಸಚಿವರ ಪಟ್ಟಿ?
ಭಾನುವಾರ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದ ಸಿಎಂ ಏಕನಾಥ್ ಶಿಂಧೆ, ಕೆಲವರು ತಾವು ಆಳ್ವಿಕೆ ಮಾಡಲೆಂದೇ ಹುಟ್ಟಿದವರು ಎಂದು ಭಾವಿಸಿರುತ್ತಾರೆ. ನಾನು ಚಿನ್ನದ ಚಮಚದೊಂದಿಗೆ ಹುಟ್ಟಿದವನಲ್ಲ. ಸಾಮಾನ್ಯ ವ್ಯಕ್ತಿಯೊಬ್ಬರು ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಕ್ಕೆ ಅವರಿಗೆ ಹೆಮ್ಮೆಯಾಗಬೇಕಿತ್ತು. ಆದರೆ, ನಮ್ಮ ವಿರುದ್ಧ ಹಗಲೂ ರಾತ್ರಿ ಅರ್ಜಿ ಸಲ್ಲಿಸುತ್ತಿದ್ದಾರೆ. ಆಡಳಿತ ನಡೆಸಲು ನಮಗೆ ಬಹುಮತವಿದೆ ಎಂಬುದು ನ್ಯಾಯಾಲಯಕ್ಕೂ ಗೊತ್ತಿದೆ. ನಾವು ಕಾನೂನುಬಾಹಿರವಾಗಿ ಏನನ್ನೂ ಮಾಡಿಲ್ಲ ಎಂದು ಹೇಳಿದ್ದರು.
Published On - 11:32 am, Mon, 11 July 22