Vijay Mallya: ಉದ್ಯಮಿ ವಿಜಯ್ ಮಲ್ಯಗೆ 4 ತಿಂಗಳು ಜೈಲು, 2 ಸಾವಿರ ದಂಡ, 4 ಕೋಟಿ ಡಾಲರ್ ಹಿಂದಿರುಗಿಸಲು ಸೂಚನೆ
Supreme Court: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಉದ್ಯಮಿ ವಿಜಯ ಮಲ್ಯಗೆ ನಾಲ್ಕು ತಿಂಗಳ ಜೈಲುಶಿಕ್ಷೆ, ₹ 2 ಸಾವಿರ ದಂಡ ವಿಧಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಉದ್ಯಮಿ ವಿಜಯ ಮಲ್ಯಗೆ (Vijay Mallya) ನಾಲ್ಕು ತಿಂಗಳ ಜೈಲುಶಿಕ್ಷೆ, ₹ 2 ಸಾವಿರ ದಂಡ ವಿಧಿಸಿ ಸುಪ್ರೀಂಕೋರ್ಟ್ (Supreme Court of India) ತೀರ್ಪು ನೀಡಿದೆ. ‘ಮಲ್ಯ ಯಾವುದೇ ಪಶ್ಚಾತ್ತಾಪ ತೋರಿಲ್ಲ. ಹೀಗಾಗಿ ಅವರು ಶಿಕ್ಷೆ ಅನುಭವಿಸಬೇಕಾದ್ದು ಕಡ್ಡಾಯ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಾಲಯದ ಆದೇಶ ಉಲ್ಲಂಘಿಸಿ ವಿಜಯ್ ಮಲ್ಯ ವರ್ಗಾವಣೆ ಮಾಡಿರುವ 4 ಕೋಟಿ ಡಾಲರ್ ಮೊತ್ತವನ್ನು ಹಿಂದಿರುಗಿಸಬೇಕು ಎಂದು ಮಲ್ಯ ಅವರ ಕುಟುಂಬಕ್ಕೆ ಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್.ರವೀಂದ್ರಭಟ್ ಮತ್ತು ಪಿ.ಎಸ್.ನರಸಿಂಹ ಅವರಿಂದ್ದ ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸಿತು. ಕಳೆದ ಮಾರ್ಚ್ 10ರಂದು ನ್ಯಾಯಪೀಠವು ತನ್ನ ಆದೇಶ ಕಾಯ್ದಿರಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿಕಸ್ ಕ್ಯೂರಿ ಜೈದೀಪ್ ಗುಪ್ತ ಅವರ ವಾದ ಆಲಿಸಿದ್ದ ನ್ಯಾಯಾಲಯವು ಮಾರ್ಚ್ 15ರವರೆಗೂ ವಿಜಯ್ ಮಲ್ಯ ಅವರ ಪರವಾಗಿ ಪ್ರತಿಕ್ರಿಯೆ ದಾಖಲಿಸಲು ಅವಕಾಶ ನೀಡಿತ್ತು. ಆದರೆ ಇಂಗ್ಲೆಂಡ್ನಲ್ಲಿರುವ ಮಲ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ವಿಜಯ್ ಮಲ್ಯ ಪರ ವಾದಿಸಲು ಆಗುತ್ತಿಲ್ಲ ಎಂದು ಜೈದೀಪ್ ಗುಪ್ತ ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಸಾಕಷ್ಟು ಅವಕಾಶ ನೀಡಿದ ನಂತರವೂ ಮಲ್ಯ ಅವರು ನ್ಯಾಯಾಲಯದ ಎದುರು ಹಾಜರಾಗಿಲ್ಲ. ವಕೀಲರ ಮನವಿಗೂ ಸ್ಪಂದಿಸಿಲ್ಲ. ಅವರಿಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ಸಾಕಷ್ಟು ಅವಕಾಶ ನೀಡಿದ ನಂತರ ನ್ಯಾಯಾಲಯವು ತೀರ್ಪು ಪ್ರಕಟಿಸಲು ನಿರ್ಧರಿಸಿತ್ತು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕರ್ಗಳ ಒಕ್ಕೂಟವು ವಿಜಯ್ ಮಲ್ಯ ಪಾವತಿ ಮಾಡದ ₹ 9,000 ಕೋಟಿ ವಸೂಲಿಗಾಗಿ ನ್ಯಾಯಾಲಯದ ಮೆಟ್ಟಿಲು ಏರಿದ್ದವು. ತಮ್ಮ ಆಸ್ತಿಗಳನ್ನು ಘೋಷಿಸದ ವಿಜಯ್ ಮಲ್ಯ ಅವನ್ನು ಮಕ್ಕಳ ಹೆಸರಿಗೆ ವರ್ಗಾಯಿಸುತ್ತಿದ್ದಾರೆ ಎಂದು ದೂರಲಾಗಿತ್ತು. ಇದು ನ್ಯಾಯಾಲಯವು ಸೂಚಿಸಿರುವ ಯಥಾಸ್ಥಿತಿ ಪಾಲನೆ ಆದೇಶದ ಉಲ್ಲಂಘನೆ ಎಂದು ಬ್ಯಾಂಕ್ಗಳು ವಾದಿಸಿದ್ದವು.
ನ್ಯಾಯಾಲಯದ ಆದೇಶ ಉಲ್ಲಂಘಿಸಿ 4 ಕೋಟಿ ಡಾಲರ್ ವರ್ಗಾವಣೆ ಮಾಡಿರುವ ಮಲ್ಯರಿಂದ ನ್ಯಾಯಾಂಗ ನಿಂದನೆಯಾಗಿದೆ ಎಂದು 2017ರಲ್ಲಿಯೇ ದೋಷಿ ಎಂದು ಘೋಷಿಸಿತ್ತು. ಪ್ರಕರಣದ ಮರುಪರಿಶೀಲನೆಗಾಗಿ 2017ರಲ್ಲಿ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು.
ಮಾರ್ಚ್ 2016ರಿಂದಲೂ ವಿಜಯ್ ಮಲ್ಯ ಬ್ರಿಟನ್ನಲ್ಲಿದ್ದಾರೆ. ಅವರನ್ನು ಅಲ್ಲಿಂದ ಭಾರತಕ್ಕೆ ತರೆತರುವ ಪ್ರಯತ್ನಗಳು ನಡೆಯುತ್ತಿವೆ. ಏಪ್ರಿಲ್ 18, 2017ರಲ್ಲಿ ಅವರು ಬ್ರಿಟನ್ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ.
Supreme Court awards 4-month jail sentence and imposes Rs 2000 fine on fugitive businessman Vijay Mallya who was found guilty of contempt of court in 2017 for withholding information from the court pic.twitter.com/Z8zP5P8qdf
— ANI (@ANI) July 11, 2022
Published On - 10:55 am, Mon, 11 July 22