
ನವದೆಹಲಿ, ಅಕ್ಟೋಬರ್ 6: ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದಿಂದ (Election Commission) ಸುದ್ದಿಗೋಷ್ಠಿ ನಡೆದಿದ್ದು, ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ನವೆಂಬರ್ 6 ಮತ್ತು 11ರಂದು 2 ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ನವೆಂಬರ್ 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದಿದ್ದಾರೆ.
ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ 2 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 6ರಂದು 121 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯಲಿದೆ. ಅಕ್ಟೋಬರ್ 10ರಂದು ಮೊದಲ ಹಂತದ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದೆ. ಅ.17ರಂದು ಮೊದಲ ಹಂತದಲ್ಲಿ ನಾಮಪತ್ರ ಸಲ್ಲಿಸಲು ಕೊನೇ ದಿನ. ಅ.18ರಂದು ಚುನಾವಣಾ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ನಡೆಸಲಾಗುವುದು. ಅ.20ರಂದು ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ಕೊನೆ ದಿನ. ನವೆಂಬರ್ 14ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಬಿಹಾರದಲ್ಲಿ ಒಟ್ಟು 7.24 ಕೋಟಿ ಮತದಾರರು ಈ ಬಾರಿ ಮತ ಚಲಾಯಿಸಲಿದ್ದಾರೆ. ಅವರಲ್ಲಿ 1725 ತೃತೀಯ ಲಿಂಗಿ ಮತದಾರರಿದ್ದಾರೆ.
ಇದನ್ನೂ ಓದಿ: Bihar Assembly Election: ಇಂದು ಸಂಜೆ 4ಕ್ಕೆ ಬಿಹಾರ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟ
243 ಸದಸ್ಯರ ಬಿಹಾರ ವಿಧಾನಸಭೆಯ ಪ್ರಸ್ತುತ ಅವಧಿ ನವೆಂಬರ್ 22ರಂದು ಕೊನೆಗೊಳ್ಳುತ್ತದೆ. ಮುಂಬರುವ ಚುನಾವಣೆಯು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಮತ್ತು ರಾಷ್ಟ್ರೀಯ ಜನತಾ ದಳದ (RJD) ತೇಜಸ್ವಿ ಯಾದವ್ ನೇತೃತ್ವದ ವಿರೋಧ ಪಕ್ಷ ಮಹಾಘಟಬಂಧನ್ ನಡುವಿನ ನೇರ ಸ್ಪರ್ಧೆಯಾಗುವ ನಿರೀಕ್ಷೆಯಿದೆ.
2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 3 ಹಂತಗಳಲ್ಲಿ ಮತದಾನ ನಡೆಯಿತು. ಚುನಾವಣೆಯ ನಂತರ, ಬಿಜೆಪಿ ಬೆಂಬಲಿತ ನಿತೀಶ್ ಕುಮಾರ್ ರಾಜ್ಯದಲ್ಲಿ ಸರ್ಕಾರವನ್ನು ರಚಿಸಿದರು. ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮುಂದುವರೆದರು. ಆದರೆ, ಆಗಸ್ಟ್ 2022ರಲ್ಲಿ, ಅವರ ಜೆಡಿಯು ಪಕ್ಷವು NDA ಜೊತೆಗಿನ ಸಂಬಂಧವನ್ನು ಮುರಿದು RJD ನೇತೃತ್ವದ ಮಹಾಘಟಬಂಧನ್ ಜೊತೆ ಸೇರಿಕೊಂಡಿತು. ಜನವರಿ 2024ರಲ್ಲಿ ಜೆಡಿಯು ಮತ್ತೆ ಆರ್‌ಜೆಡಿ ನೇತೃತ್ವದ ಮೈತ್ರಿಕೂಟದಿಂದ ಬೇರ್ಪಟ್ಟು ಎನ್‌ಡಿಎಗೆ ಮರಳಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:44 pm, Mon, 6 October 25