ಸಮಗ್ರ ಪರಿಷ್ಕರಣೆ ನಂತರ ಬಿಹಾರ ಮತದಾರರ ಅಂತಿಮ ಪಟ್ಟಿ ಬಿಡುಗಡೆ ಮಾಡಿದ ಚುನಾವಣಾ ಆಯೋಗ
Bihar final voters list release: ವಿವಾದಗಳು ಮತ್ತು ಆಕ್ಷೇಪಗಳ ಮಧ್ಯೆ ಬಿಹಾರ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಮುಗಿದಿದೆ. ಇದರ ಬೆನ್ನಲ್ಲೇ ಚುನಾವಣಾ ಆಯೋಗವು ಇಂದು (ಸೆ. 30) ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಏಳು ಕೋಟಿಗೂ ಅಧಿಕ ಮತದಾರರು ಇರುವ ಬಿಹಾರದಲ್ಲಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಆಗಬಹುದು.

ಪಾಟ್ನಾ, ಸೆಪ್ಟೆಂಬರ್ 30: ಮುಂದಿನ ಕೆಲ ತಿಂಗಳಲ್ಲಿ ಚುನಾವಣೆ ನಡೆಯಲಿರುವ ಬಿಹಾರ ರಾಜ್ಯದ ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. ತಿಂಗಳುಗಳ ಕಾಲ ನಡೆದ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಬಳಿಕ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಇಂದು ಮಂಗಳವಾರ (ಸೆ. 30) ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅದರ ಲಿಂಕ್ ಅನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ.
ಎರಡು ದಶಕಗಳ ನಂತರ (22 ವರ್ಷ) ಬಿಹಾರದಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆ ಕಾರ್ಯ (ಎಸ್ಐಆರ್) ನಡೆದಿದೆ. ಆಗಸ್ಟ್ 1ರಂದು ಕರಡು ಮತದಾರರ ಪಟ್ಟಿ ಮುದ್ರಿಸಲಾಗಿತ್ತು. 7.25 ಕೋಟಿ ಮತದಾರರ ಹೆಸರು ಈ ಕರಡು ಪಟ್ಟಿಯಲ್ಲಿ ಇದ್ದವು. ವ್ಯಕ್ತಿಗಳಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಈ ಕರಡು ಪಟ್ಟಿಯಲ್ಲಿ ಯಾವುದೇ ತಗಾದೆಗಳು ಇದ್ದರೆ ಅವನ್ನು ಸಲ್ಲಿಸಲು ಸೆಪ್ಟೆಂಬರ್ 1ರವರೆಗೂ ಅವಕಾಶ ಕೊಡಲಾಗಿತ್ತು.
ಇದನ್ನೂ ಓದಿ:
ಎಸ್ಐಆರ್ಗೆ ವಿಪಕ್ಷಗಳಿಂದ ತೀವ್ರ ಆಕ್ಷೇಪ ಬಂದಿತ್ತು. ಕೋಟ್ಯಂತರ ಪ್ರಜೆಗಳನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಹೊರಗಿಡಲು ಎಸ್ಐಆರ್ ಹೆಸರಿನಲ್ಲಿ ಮಾಡಿರುವ ಹುನ್ನಾರ ಎಂದು ಕಾಂಗ್ರೆಸ್, ಆರ್ಜೆಡಿ ಸೇರಿದಂತೆ ವಿಪಕ್ಷಗಳು ಬಾರಿ ಬಾರಿ ಆಕ್ಷೇಪಿಸುತ್ತಿವೆ. ರಾಹುಲ್ ಗಾಂಧಿ ಅವರು ‘ಮತಕಳವು’ ಅಭಿಯಾನವನ್ನೇ ದೇಶಾದ್ಯಂತ ಆರಂಭಿಸಿದ್ದಾರೆ.
ಇದೇ ವೇಳೆ ಚುನಾವಣಾ ಆಯೋಗವು ವಿಪಕ್ಷಗಳ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದೆ. ಯಾವುದೇ ಅರ್ಹ ನಾಗರಿಕರ ಹೆಸರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರ ವಹಿಸಿದ್ದೇವೆ. ಅನರ್ಹ ವ್ಯಕ್ತಿ ಈ ಪಟ್ಟಿಗೆ ಸೇರದಂತೆಯೂ ಎಚ್ಚರ ವಹಿಸಿದ್ದೇವೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಬಿಹಾರ ಚುನಾವಣೆ ಯಾವಾಗ?
ಬಿಹಾರ ವಿಧಾನಸಭೆಯ ಸದಸ್ಯಬಲ 243 ಇದೆ. ಸದ್ಯ ಇಲ್ಲಿ ಬಿಜೆಪಿ-ಜೆಡಿಯು ಇರುವ ಎನ್ಡಿಎ ಮೈತ್ರಿಕೂಟ ಅಧಿಕಾರದಲ್ಲಿದೆ. ಈ ವಿಧಾನಸಭೆಯ ಅವಧಿ ನವೆಂಬರ್ 22ಕ್ಕೆ ಮುಗಿಯುತ್ತದೆ. ಅಷ್ಟರಲ್ಲಿ ಚುನಾವಣೆ ಪ್ರಕಟಿಸುವ ನಿರೀಕ್ಷೆ ಇದೆ. ಸದ್ಯದಲ್ಲೇ ಚುನಾವಣಾ ಆಯೋಗವು ಮತದಾನಕ್ಕೆ ದಿನಾಂಕಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ:
ಬಿಹಾರ ವಿಧಾನಸಭೆಗೆ ಹಿಂದಿನ ಬಾರಿ ಚುನಾವಣೆ ಆಗಿದ್ದು ಕೋವಿಡ್ ಕಾಲಘಟ್ಟದಲ್ಲಿ. ಮೂರು ಹಂತಗಳಲ್ಲಿ ಮತದಾನ ಆಗಿತ್ತು. ಈ ಬಾರಿ ಬಿಹಾರದಲ್ಲಿ ಮಾತ್ರವೇ ಚುನಾವಣೆ ಇರುವುದರಿಂದ ಒಂದೇ ಹಂತದಲ್ಲಿ ಮತದಾನ ನಡೆಸುವ ಸಾಧ್ಯತೆ ಇಲ್ಲದಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:05 pm, Tue, 30 September 25




