ಬಿಜೆಪಿ ಪಾಪಗಳನ್ನು ತೊಳೆಯುವ ವಾಶಿಂಗ್ ಮಶೀನ್.. ಭ್ರಷ್ಟರನ್ನೂ ಸಾಧುಗಳನ್ನಾಗಿಸುತ್ತದೆ: ಮಮತಾ ಬ್ಯಾನರ್ಜಿ ವ್ಯಂಗ್ಯ
ಬೇರೆ ಪಕ್ಷಗಳ ನಾಯಕರನ್ನು ತನ್ನೆಡೆಗೆ ಸೆಳೆಯುವ ಬಿಜೆಪಿ ಕಸದ ತೊಟ್ಟಿ ಇದ್ದಂತೆ. ಭ್ರಷ್ಟ ಮತ್ತು ಹಳಸಲು ನಾಯಕರಿಂದ ಅದು ತುಂಬಿಕೊಳ್ಳುತ್ತಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ಕೆಲವರು ಬಿಜೆಪಿಗೆ ಹೋಗಿದ್ದಾರೆ. ಆದರೆ, ಅವರು ಜನರ ಹಣವನ್ನು ಲೂಟಿ ಹೊಡೆದು ಹೋಗಿದ್ದಾರೆ.
ಕೋಲ್ಕತ್ತಾ: ಬಿಜೆಪಿಯ ಏಕಪಕ್ಷೀಯ ನಿಲುವು ಮತ್ತು ನಿರಂತರವಾಗಿ ನಡೆಯುತ್ತಿರುವ ರೈತರ ಪ್ರತಿಭಟನೆಯಿಂದಾಗಿ ದೇಶದಲ್ಲಿ ಆಹಾರಕ್ಕೂ ತತ್ವಾರ ಉಂಟಾಗಲಿದೆ. ಊಟಕ್ಕೂ ಗತಿಯಿಲ್ಲದೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಒಂದು ಹಾಳು (ಜಂಕ್) ಪಕ್ಷ. ಅದರಲ್ಲಿರುವವರೆಲ್ಲಾ ಬೇರೆ ಬೇರೆ ಪಕ್ಷದಿಂದ ಅಲ್ಲಿಗೆ ಬಂದಿರುವ ‘ಹಳಸಲು’ ನಾಯಕರು ಎಂದು ವಾಗ್ದಾಳಿ ನಡೆಸಿದ್ದಾರೆ. ಒಂದುವೇಳೆ ಬಿಜೆಪಿ ತನ್ನ ಜಡ ನಿಲುವನ್ನು ಬದಲಾಯಿಸಿಕೊಳ್ಳದೇ ಇದ್ದರೆ ದೇಶದಲ್ಲಿ ಆಹಾರದ ಕೊರತೆ ಗಂಭೀರವಾಗಿ ಎದುರಾಗಲಿದೆ. ರೈತರು ನಮ್ಮ ದೇಶದ ಆಸ್ತಿ ಎನ್ನುವುದನ್ನು ಮರೆಯಬಾರದು. ಅನ್ನದಾತರ ಹಿತಾಸಕ್ತಿಗೆ ವಿರುದ್ಧವಾಗಿ ಹೆಜ್ಜೆ ಇಡಬಾರದು ಎಂದು ಹೇಳಿದ್ದಾರೆ.
ಬೇರೆ ಪಕ್ಷಗಳ ನಾಯಕರನ್ನು ತನ್ನೆಡೆಗೆ ಸೆಳೆಯುವ ಬಿಜೆಪಿ ಕಸದ ತೊಟ್ಟಿ ಇದ್ದಂತೆ. ಭ್ರಷ್ಟ ಮತ್ತು ಹಳಸಲು ನಾಯಕರಿಂದ ಅದು ತುಂಬಿಕೊಳ್ಳುತ್ತಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ಕೆಲವರು ಬಿಜೆಪಿಗೆ ಹೋಗಿದ್ದಾರೆ. ಆದರೆ, ಅವರು ಜನರ ಹಣವನ್ನು ಲೂಟಿ ಹೊಡೆದು ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಪಾಪಗಳನ್ನು ತೊಳೆಯುವ ವಾಶಿಂಗ್ ಮಶೀನ್ ಇದ್ದಂತೆ. ಎಂತಹ ಭ್ರಷ್ಟರು ಅಲ್ಲಿಗೆ ಹೋದರೂ ಕ್ಷಣ ಮಾತ್ರದಲ್ಲಿ ಸಾಧುಗಳಾಗಿ, ಪ್ರಾಮಾಣಿಕರಾಗಿ ಪರಿವರ್ತನೆ ಹೊಂದಬಹುದು. ಅಮೆರಿಕಾದಲ್ಲಿ ಟ್ರಂಪ್ ಬೆಂಬಲಿಗರು ಹೇಗೋ ಇಲ್ಲಿನ ಬಿಜೆಪಿ ಬೆಂಬಲಿಗರೂ ಹಾಗೆಯೇ. ಬಿಜೆಪಿ ಚುನಾವಣೆಯಲ್ಲಿ ಸೋತ ನಂತರ ಅದರ ಬೆಂಬಲಿಗರು ಅಂತಹದ್ದೇ ದುರ್ವರ್ತನೆ ತೋರಿದರೆ ಅಚ್ಚರಿಯಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
Published On - 3:24 pm, Mon, 11 January 21