ಕೃಷಿ ಕಾಯ್ದೆಗಳ ಕುರಿತು ‘ತಪ್ಪು ಕಲ್ಪನೆ’ ದೂರ ಮಾಡಲು ಯತ್ನ: ರೈತ ಸಮುದಾಯದ ಮನವೊಲಿಸಲು ಹೊರಟ ಬಿಜೆಪಿ
ದೇಶದ ಕೃಷಿಕರು ಮತ್ತು ನಾಗರಿಕರಲ್ಲಿ ನೂತನ ಕೃಷಿ ಕಾಯ್ದೆಗಳ ಪರ ಒಲವು ಮೂಡಿಸುವ ಯತ್ನಕ್ಕೆ ಬಿಜೆಪಿ ಮುಂದಾಗುತ್ತಿರುವುದು ನಿಚ್ಚಳವಾಗುತ್ತಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್ನಲ್ಲಿ ಕೃಷಿಕರ ಜೊತೆ ಹಮ್ಮಿಕೊಂಡಿರುವ ಸಂವಾದ ಈ ಪ್ರಯತ್ನಕ್ಕೆ ಪೂರ್ವಭಾವಿಯಂತೆ ತೋರುತ್ತಿದೆ.
ದೆಹಲಿ: ದೇಶದ ಕೃಷಿಕರು ಮತ್ತು ನಾಗರಿಕರಲ್ಲಿ ನೂತನ ಕೃಷಿ ಕಾಯ್ದೆಗಳ ಪರ ಒಲವು ಮೂಡಿಸುವ ಯತ್ನಕ್ಕೆ ಬಿಜೆಪಿ ಮುಂದಾಗುತ್ತಿರುವುದು ನಿಚ್ಚಳವಾಗುತ್ತಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್ನಲ್ಲಿ ಕೃಷಿಕರ ಜೊತೆ ಹಮ್ಮಿಕೊಂಡಿರುವ ಸಂವಾದ ಈ ಪ್ರಯತ್ನಕ್ಕೆ ಪೂರ್ವಭಾವಿಯಂತೆ ತೋರುತ್ತಿದೆ. ಅದರಲ್ಲೂ 5000 ಸಿಖ್ ಕುಟುಂಬಗಳು ನೆಲೆಸಿರುವ ಕಚ್ ಪ್ರಾಂತ್ಯದಲ್ಲಿ ಮೋದಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇಂದಿನ ಕಾರ್ಯಕ್ರಮ ಪಂಜಾಬ್ ರೈತರ ಮನವೊಲಿಕೆಯ ಪ್ರಯತ್ನ ಎಂಬ ವಿಶ್ಲೇಷಣೆ ಕೇಳಿಬಂದಿದೆ.
ಮಧ್ಯಪ್ರದೇಶ ಬಿಜೆಪಿ ಘಟಕದಿಂದಲೂ ಕೃಷಿಕರ ಸಭೆ ದೆಹಲಿ ಚಲೋ ಹೀಗೇ ಮುಂದುವರೆದರೆ ದೇಶದ ರೈತರಲ್ಲಿ ಬಿಜೆಪಿ ವಿರೋಧ ಭಾವನೆ ಬಲಗೊಳ್ಳಬಹುದು ಎಂಬ ಸೂಕ್ಷ್ಮ ಭಯ ಬಿಜೆಪಿಯನ್ನು ಆವರಿಸಿರುವುದು ಖಚಿತ. ಇದೇ ಕಾರಣಕ್ಕೆ ನೂತನ ಕೃಷಿ ಕಾಯ್ದೆಯ ಕುರಿತು ರೈತರನ್ನು ಹಾದಿ ತಪ್ಪಿಸಲಾಗಿದೆ ಎಂದು ಬಿಜೆಪಿ ವಾದಿಸುತ್ತಲೇ ಇದೆ. ಇದೀಗ, ಮಧ್ಯ ಪ್ರದೇಶದ ಬಿಜೆಪಿ ಘಟಕ, ರಾಜ್ಯದ ರೈತ ಸಮುದಾಯದ ಜೊತೆ ಸಭೆಗಳನ್ನು ಆಯೋಜಿಸಿದೆ. ನೂತನ ಕೃಷಿ ಕಾಯ್ದೆಗಳ ಕುರಿತು ‘ತಪ್ಪು ಕಲ್ಪನೆ’ಯನ್ನು ಹೋಗಲಾಡಿಸುವ ಯತ್ನದ ಒಂದು ಭಾಗವೆಂದು ಬಿಜೆಪಿ ಈ ಸಭೆಗಳನ್ನು ವ್ಯಾಖ್ಯಾನಿಸಿದೆ. ಮತ್ತು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ವಾಣ್ ಮತ್ತು ಬಿಜೆಪಿ ಅಧ್ಯಕ್ಷ ವಿ ಡಿ ಶರ್ಮಾ ಸಭೆಯಲ್ಲಿ ರೈತರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಪಂಜಾಬ್ ಬಿಜೆಪಿ ಘಟಕದ ಮೇಲೂ ಈ ಕುರಿತು ಒತ್ತಡ ಬೀಳುವ ಸಾಧ್ಯತೆಗಳಿವೆ. ಈಗಾಗಲೇ ಶಿರೋಮಣಿ ಅಕಾಲಿದಳದಿಂದದಿಂದ ದೂರವಾಗಿರುವ ಬಿಜೆಪಿ ಪಂಜಾಬ್ನಲ್ಲಿ ಕಷ್ಟದ ದಿನಗಳನ್ನು ಎದುರಿಸಬಹುದು. ಪಂಜಾಬ್ನಲ್ಲೂ ರೈತ ಸಮುದಾಯದ ಜೊತೆಗೆ ಸಂವಾದ ನಡೆಸುವ ಕುರಿತು ರಾಜ್ಯ ಘಟಕ ನಿರ್ಧರಿಸಲಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಬಿಜೆಪಿ ಇನ್ನಿತರ ರಾಜ್ಯಗಳಲ್ಲೂ ರೈತ ಸಮುದಾಯದ ಜೊತೆ ಸಭೆಗಳನ್ನು ಆಯೋಜಿಸುವ ಸಾಧ್ಯತೆ ಸ್ಪಷ್ಟವಾಗುತ್ತಿದೆ. ಜೊತೆಗೆ, ಈಗಾಗಲೇ ನೂತನ ಕೃಷಿ ಕಾಯ್ದೆಗಳ ಪರ ಇರುವವರ ಬೆಂಬಲವನ್ನು ಬಲಪಡಿಸಿಕೊಳ್ಳುವ ಉದ್ದೇಶವನ್ನೂ ಹೊಂದಿದೆ.