ದೆಹಲಿ: ‘ದೇಶದ ಹಿತಾಸಕ್ತಿ ಮತ್ತು ಆಶೋತ್ತರಗಳಿಗೆ ಪ್ರತಿಪಕ್ಷಗಳು ಸ್ಪಂದಿಸುತ್ತಿಲ್ಲ’ ಎಂದು ಬಿಜೆಪಿ (Bharatiya Janata Party – BJP) ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೇಶದ ಜನರನ್ನು ಉದ್ದೇಶಿಸಿ ಸೋಮವಾರ ಎರಡು ಪುಟಗಳ ಬಹಿರಂಗ ಪತ್ರ ಬರೆದಿರುವ ಅವರು, ಪ್ರತಿಪಕ್ಷಗಳ ವರ್ತನೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ದೇಶದ ವಿವಿಧೆಡೆ ನಡೆಯುತ್ತಿರುವ ಕೋಮು ಗಲಭೆಗಳಿಗೆ ಪ್ರಧಾನಿ ನರೇಂದ್ರ ನರೇಂದ್ರ ಮೋದಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಪ್ರತಿಪಕ್ಷಗಳು ತೀವ್ರವಾಗಿ ಆಕ್ಷೇಪಿಸಿದ್ದವು. ಬಹಿರಂಗ ಪತ್ರದ ಮೂಲಕ ವಿರೋಧ ಪಕ್ಷಗಳ ಆಕ್ಷೇಪಗಳಿಗೆ ಉತ್ತರಿಸಿರುವ ಜೆ.ಪಿ.ನಡ್ಡಾ, ‘ಭಾರತವು ಇಂದು ಎರಡು ರೀತಿಯ ರಾಜಕಾರಣವನ್ನು ನೋಡುತ್ತಿದೆ. ದೇಶದ ಅಭಿವೃದ್ಧಿಗಾಗಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಪಕ್ಷಗಳು ಶ್ರಮಿಸುತ್ತಿವೆ. ಮತ್ತೊಂದೆಡೆ ಕೆಲ ರಾಜಕೀಯ ಪಕ್ಷಗಳ ಗುಂಪು ಚಿಲ್ಲರೆ ರಾಜಕಾರಣ ಮಾಡುತ್ತಿವೆ. ಬಾಯಿಗೆ ಬಂದಂತೆ ಮಾತನಾಡುತ್ತಿವೆ. ಕಳೆದ ಕೆಲ ದಿನಗಳ ಹಿಂದೆ ಈ ಪಕ್ಷಗಳು ಒಗ್ಗೂಡಿ ಒಂದು ಪತ್ರ ಬರೆದಿದ್ದವು. ಈ ಪತ್ರದಲ್ಲಿ ದೇಶದ ಆಶಯ, ತಾತ್ವಿಕತೆಯನ್ನೇ ಪ್ರಶ್ನಿಸಿದ್ದವು’ ಎಂದು ಹೇಳಿದ್ದಾರೆ.
ತಿರಸ್ಕೃತ ಮತ್ತು ಸೋತ ರಾಜಕಾರಣ ನಡೆಸುತ್ತಿರುವವರು ರಾಜಸ್ಥಾನದ ಕರೋಲ್ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಏಕೆ ಮೌನವಾಗಿದ್ದರು ಎಂದು ನಡ್ಡಾ ಪ್ರಶ್ನಿಸಿದ್ದಾರೆ.
‘ಮತಬ್ಯಾಂಕ್ ರಾಜಕಾರಣದಲ್ಲಿ ಮುಳುಗಿ ಹೋಗಿರುವ ಈ ಪಕ್ಷಗಳು ತಮ್ಮ ಸೇನಾನಿಗಳ ಬಣ್ಣ ಪೂರ್ಣ ಪ್ರಮಾಣದಲ್ಲಿ ಬಯಲಾಗಬಹುದು ಎಂದು ಹೆದರಿವೆ. ಕಳೆದ ಹಲವು ದಶಕಗಳಿಂದ ಈ ಪಕ್ಷಗಳು ಸಾಮಾನ್ಯ ಜನರನ್ನು ಕಾಡುತ್ತಿದ್ದ ಸಮಾಜಘಾತುಕ ಶಕ್ತಿಗಳನ್ನು ಪೋಷಿಸುತ್ತಿದ್ದವು. ಜನರನ್ನು ಕಾಡುವ ಇಂಥವರನ್ನು ನಮ್ಮ ಸರ್ಕಾರಗಳು ಹಣಿದಿವೆ. ಇಂಥವರು ಮಾಡಿದ್ದ ತಪ್ಪಿಗೆ ಕಾನೂನು ಪ್ರಕಾರ ಕ್ರಮಗಳನ್ನು ಜರುಗಿಸಲಾಗಿದೆ. ಇಂಥವರನ್ನು ಪೋಷಿಸುತ್ತಿದ್ದ ಪಕ್ಷಗಳಿಗೆ ಇದು ಸಹಜವಾಗಿಯೇ ಭಯ ತರುವ ವಿದ್ಯಮಾನ’ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಅಧರ್ಮ ಹೆಚ್ಚಾದಾಗ ವಿಜಯನಗರದಲ್ಲಿ ಧರ್ಮ ತಲೆ ಎತ್ತಿದೆ: ನಮ್ಮ 150 ಮಿಷನ್ ಸಂಕಲ್ಪ ಇಲ್ಲಿಂದಲೇ ಆರಂಭ; ಜೆ.ಪಿ.ನಡ್ಡಾ
ಇದನ್ನೂ ಓದಿ: ರೈತರು, ದಲಿತರು, ಮಹಿಳೆಯರ ಬದುಕಿನಲ್ಲಿ ಬಿಜೆಪಿಯಿಂದ ಪರಿವರ್ತನೆ; ಮಿಷನ್ 150 ಗುರಿ ತಲುಪುವ ವಿಶ್ವಾಸ: ಜೆಪಿ ನಡ್ಡಾ