ದೆಹಲಿ, ಜುಲೈ 16: 2024ರ ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳ ತಾಲೀಮು ಶುರುವಾಗಿದೆ. ಬಿಜೆಪಿ(BJP) ವಿರುದ್ಧ ಬಲಿಷ್ಠ ಮೈತ್ರಿ ರಚಿಸಿಲು ವಿರೋಧಪಕ್ಷಗಳು ಒಟ್ಟಾಗುತ್ತಿವೆ. ವಿರೋಧ ಪಕ್ಷಗಳ ನಾಯಕರು ಒಂದೇ ವೇದಿಕೆಗೆ ಬರುತ್ತಿದ್ದಂತೆಯೇ ಬಿಜೆಪಿ ಕೂಡ ತನ್ನ ಬಳಗ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಸ್ವತಂ ಬಲದಲ್ಲಿ ಅಧಿಕಾರ ಹಿಡಿದು ಎನ್‌ಡಿಎ ಬಳಗವನ್ನು ಕಡೆಗಣಿಸಿದ್ದ ಬಿಜೆಪಿ ನಾಯಕರು ಮುಂದಿನ ಚುನಾವಣೆಗೆ ಮಿತ್ರರನ್ನು ಮತ್ತೆ ಒಟ್ಟುಗೂಡಿಸಲು ಕೈಹಾಕಿದ್ದಾರೆ. 2024ಕ್ಕೆ ಮತ್ತೆ ಅಧಿಕಾರ ಹಿಡಿಯಲಿ ಆಪರೇಷನ್ ಎನ್ ಡಿಎ ಮಂತ್ರ ಹೂಡಿದ್ದಾರೆ.
ಹೌದು ಮುಂದಿನ ಲೋಕಸಭಾ ಚುನಾವಣೆ ಬಿಜೆಪಿಗೆ ಅಗ್ನಿ ಪರೀಕ್ಷೆ. ಕೇಂದ್ರದಲ್ಲಿ 10 ವರ್ಷಗಳು ನಿರಂತರ ಅಧಿಕಾರದಲ್ಲಿರುವ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲು ಮಿತ್ರಪಕ್ಷಗಳ ಮಂತ್ರ ಜಪಿಸುತ್ತಿದೆ. ಮೋದಿಯವರನ್ನು ಮತ್ತೆ ಪ್ರಧಾನಿ ಹುದ್ದೆಗೇರಿಸಲು ಎನ್‌ಡಿಎ ಬಳಗವನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಒಗ್ಗಟ್ಟಿನ ರಂಗ ರಚನೆಗೆ ಪ್ರತಿಪಕ್ಷಗಳ ಪ್ರಯತ್ನಗಳ ನಡುವೆಯೇ ಆಡಳಿತಾರೂಢ ಬಿಜೆಪಿ ಕೂಡ ಬಲಿಷ್ಠ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು ಬಲಪಡಿಸಲು ಸಜ್ಜಾಗಿದೆ.
ಇದನ್ನೂ ಓದಿ: ವಿದೇದಿಂದ ಬಂದ ಕೂಡಲೇ ದೆಹಲಿ ಲೆಫ್ಟಿನೆಂಟ್ ಗವರ್ನರ್ ಜತೆ ಪ್ರಧಾನಿ ಮೋದಿ ಮಾತುಕತೆ; ಪ್ರವಾಹ ನಿಯಂತ್ರಣ ಕುರಿತು ಚರ್ಚೆ
ಬಿಜೆಪಿಯ ಚುಕ್ಕಾಣಿ ಮೋದಿ, ಅಮಿತ್ ಶಾ ಕೈಸೇರಿದ ಬಳಿಕ ನಾನಾ ಕಾರಣಗಳಿಗೆ ಬಿಜೆಪಿ ಮಿತ್ರ ಪಕ್ಷಗಳು ದೂರವಾಗಿವೆ. ಬಿಜೆಪಿ ಬಹುಕಾಲದ ಮಿತ್ರರಾದ ಅಕಾಲಿದಳ, ಶಿವಸೇನೆ, ತೆಲುಗುದೇಶಂ ಪಕ್ಷಗಳು ಬಿಜೆಪಿಯಿಂದ ದೂರವಾಗಿವೆ. ಆದರೆ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಹಳೆ ದೋಸ್ತಿಗಳನ್ನು ಮತ್ತೆ ತನ್ನ ಬಳಗಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಮಾತುಕತೆ ನಡೆಸಿದೆ.
ಬಿಜೆಪಿಯ ಹೊಸ ಮಿತ್ರಪಕ್ಷಗಳ ಹುಡುಕಾಟಕ್ಕೆ ಸಕಾರಾತ್ಮಕ ಫಲಿತಾಂಶ ದೊರಕಿದೆ. ಮಂಗಳವಾರ ದೆಹಲಿಯ ಅಶೋಕ ಹೋಟೆಲ್ನಲ್ಲಿ ಎನ್‌ಡಿಎ ಮಿತ್ರಪಕ್ಷಗಳ ಸಭೆ ನಡೆಯಲಿದೆ. ಹಳೆದೋಸ್ತಿಗಳಿಗೆ ಬಿಜೆಪಿ ನಾಯಕರು ಆಹ್ವಾನ ನೀಡಿದ್ದಾರೆ. ಬಿಜೆಪಿಯ ಹಳೆಯ ಮಿತ್ರಪಕ್ಷಗಳಾದ ಶಿರೋಮಣಿ ಅಕಾಲಿದಳ ಮತ್ತು ತೆಲುಗು ದೇಶಂ ಪಕ್ಷಗಳ ನಾಯಕರು ಎನ್‌ಡಿಎ ಸಭೆಗೆ ಬರುವುದು ಪಕ್ಕಾ ಆಗಿದೆ.
ಇನ್ನು ಆಂಧ್ರದ ಜನಸೇನಾ ಪಕ್ಷದ ಪವನ್ ಕಲ್ಯಾಣ್ ಕೂಡ ಎನ್‌ಡಿಎ ತಕ್ಕೆಗೆ ಸೇರುವುದು ಖಚಿತವಾಗಿದೆ. ಮಹರಾಷ್ಟ್ರದಲ್ಲಿ ಶಿವಸೇನೆ ಶಿಂಧೆ ಬಣ ಬಿಜೆಪಿ ಸೇರಿ ಸರಕಾರ ರಚಿಸಿದೆ. ಅಲ್ಲದೆ ಎನ್ಸಿಪಿಯ ಅಜಿತ್ ಪವಾರ್ ಬಣ ಕೂಡ ಬಿಜೆಪಿ ಜೊತೆ ಗುರುತಿಸಿಕೊಂಡು ಎನ್‌ಡಿಎ ಸೇರಿಕೊಂಡಿದೆ. ಇನ್ನು ಉತ್ತರಪ್ರದೇಶದ ಸುಹೇಲ್ ದೇವ್ ಬಹುಜನ ಸಮಾಜವಾದಿ ಪಕ್ಷದ ನಾಯಕ ಓಂ ಪ್ರಕಾಶ್ ರಾಜಭರ್ ಎನ್‌ಡಿಎ ಜೊತೆ ಸೇರುವುದಾಗಿ ಭಾನುವಾರ ಘೋಷಿಸಿದ್ದಾರೆ.
ಇದನ್ನೂ ಓದಿ: PM Modi in UAE: ಪ್ರಧಾನಿ ಮೋದಿಗಾಗಿ ಸಸ್ಯಾಹಾರ ಭೋಜನಕೂಟ ಆಯೋಜಿಸಿದ ಯುಎಇ ಅಧ್ಯಕ್ಷ ಅಲ್ ನಹ್ಯಾನ್
ಅಲ್ಲದೆ ರಾಮ್ ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್, ಜಿತಿನ್ ರಾಮ್ ಮಾಂಜಿ ಅವರಿಗೂ ಎನ್‌ಡಿಎ ಸಭೆಗೆ ಬರುವಂತೆ ಆಹ್ವಾನ ಹೋಗಿದೆ. ಈ ಮಧ್ಯ ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಹೊಸ ಮೈತ್ರಿ ರಚಿಸಲು ಬಿಜೆಪಿ ಉತ್ಸುಕವಾಗಿದೆ. ಎನ್‌ಡಿಎ ಸಭೆಗೆ ಆಗಮಿಸುವಂತೆ ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿಯವರಿಗೂ ಆಹ್ವಾನ ಹೋಗಿದೆ ಎಂದು ಹೇಳಲಾಗುತ್ತಿದೆ.
ಒಂದು ಕಾಲದಲ್ಲಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿ, ಈಗ ಚದುರಿಹೋಗಿರುವ ವಿವಿಧ ಪಕ್ಷಗಳ ನಾಯಕರಿಗೆ ಜೆ.ಪಿ ನಡ್ಡಾ ಪತ್ರ ಬರೆದಿದ್ದಾರೆ. ಮತ್ತೆ ಒಂದಾಗೋಣ ಬನ್ನಿ ಎಂದಿದ್ದಾರೆ. ಆದ್ರೆ ಮಂಗಳವಾರದ ಸಭೆಗೆ ಯಾರು ಭಾಗಿಯಾಗ್ತಾರೆ ಅನ್ನೋದನ್ನು ಕಾದುನೋಡಬೇಕಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:45 pm, Sun, 16 July 23